ಕಷ್ಟಕ್ಕೆ ದುಡಿಮೆಯೇ ಪರಿಹಾರ: ನಿಜಗುಣಾನಂದ ಸ್ವಾಮೀಜಿ
ತುಮಕೂರು:ಕಷ್ಟಕ್ಕೆ ದೇವರು ಪೂಜೆ ಪರಿಹಾರವಲ್ಲ, ದುಡಿಮೆಯೇ ಪರಿಹಾರ ಎಂದು ಶ್ರೀನಿಜ ಗುಣಾನಂದ ಸ್ವಾಮೀಜಿ ತಿಳಿಸಿದ್ದಾರೆ.
ನಗರದ ಎಂಪ್ರೆಸ್ ಶಾಲೆಯ ಸಭಾಂಗಣದಲ್ಲಿ ವಿವಿಧ ಪ್ರಗತಿಪರ,ದಲಿತ ಪರ ಸಂಘಟನೆಗಳು ಜಂಟಿಯಾಗಿ ಆಯೋಜಿಸಿದ್ದ ಬುದ್ದ, ಬಸವ, ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಮ್ಮ ಕಷ್ಟಗಳಿಗೆ ದೇವರು ಪರಿಹಾರ ನೀಡುತ್ತಾನೆ ಎಂಬುದಾಗಿದ್ದರೆ, ಸಾಲ ಮಾಡಿಕೊಂಡ ರೈತರು,ಸಾಲ ಮನ್ನಾಕ್ಕಾಗಿ ದೇವರ ಮುಂದೆ ಬೇಡುವ ಬದಲು ಸರಕಾರಗಳಿಗೆ ಮನವಿ ಸಲ್ಲಿಸುವ ಅಗತ್ಯವೆನ್ನಿತ್ತು ಎಂದು ಪ್ರಶ್ನಿಸಿದರು.
ಇಂದು ದೇವರು ಎಂಬುದು ಒಂದು ಉದ್ಯೋಗವಾಗಿದೆ.ಜನತೆಗೆ ಇನ್ನಿಲ್ಲದ ಭಯ ಹುಟ್ಟಿಸಿ, ಅವರಿಂದು ಒಂದಿಲೊಂದು ಪೂಜೆ ಮಾಡಿಸಿ, ತಾವು ಹೊಟ್ಟೆ ಹೊರೆಯುವ ಕೆಲಸವನ್ನು ಕೆಲವರು ಮಾಡುತ್ತಿದ್ದಾರೆ.ಇದನ್ನು ಅರಿಯದೆ ವಿದ್ಯಾವಂತರು ಹೆಚ್ಚಿನಸಂಖ್ಯೆಯಲ್ಲಿ ಪೂಜೆ,ಪುನಸ್ಕಾರಗಳಿಗೆ ಬಲಿಯಾಗುತ್ತಿರುವುದು ವಿಪರ್ಯಾಸವೇ ಸರಿ. ಮೈಮೇಲೆ ಬರುವ ದೇವರುಗಳ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿವೆ. ಅದರಲ್ಲಿಯೂ ಕೆಳವರ್ಗದವರ ಮೇಲೆ ದೇವರುಗಳ ಬರುತ್ತಿರುವುದು ದುರದೃಷ್ಟಕರ ಎಂದರು.
ತಂದೆ, ತಾಯಿ, ಗುರು, ಹಿರಿಯರು ದೇವರು ಎಂದು ಹಿರಿಯರು ಹೇಳಿದ್ದಾರೆ.ಆದರೆ ನಮ್ಮ ಜನರು ಎಂದಿಗೂ ತಂದೆ, ತಾಯಿ ಯಲ್ಲಿ, ಗುರುಗಳಲ್ಲಿ ದೇವರನ್ನು ಕಾಣಲಿಲ್ಲ.ಒಂದು ವೇಳೆ ಹಾಗೇ ದೇವರನ್ನು ಕಂಡಿದ್ದರೆ,ಇಂದು ದೇಶದಲ್ಲಿ ವೃದ್ದಾಶ್ರಮಗಳೇ ಇರುತ್ತಿರಲಿಲ್ಲ. ಬುದ್ದ, ಬಸವಣ್ಣ, ಅಂಬೇಡ್ಕರ್ ಅವರನ್ನು ಮರೆತಿದ್ದೇ ಇಂದಿನ ದುಸ್ಥಿತಿಗೆ ಕಾರಣ ಎಂದ ಶ್ರೀನಿಜಗುಣಾನಂದ ಶ್ರೀಗಳು, ಈ ದೇಶದ ಭವಿಷ್ಯವಿರುವುದೇ ಬುದ್ದ,ಬಸವಣ್ಣ, ಅಂಬೇಡ್ಕರ್ ಅವರ ತತ್ವಗಳ ಮೇಲೆ ನಿಂತಿದೆ. ಆ ದಿಕ್ಕಿನತ್ತ ನಾವೆಲ್ಲರೂ ಸಾಗೋಣ, ಸ್ವಾತಂತ್ರ ತಲೆಗಳಾಗಿ ಬದುಕೋಣ ಎಂದು ಕಿವಿ ಮಾತು ಹೇಳಿದರು.
ಮಾಜಿ ಶಾಸಕ ಕೆ.ಎನ್.ರಾಜಣ್ಣ ಮಾತನಾಡಿ,ಅಂಬೇಡ್ಕರ್ ಅವರ ಕಾಲದಲ್ಲಿ ಅನುಭವಿಸಿದ ಶೋಷಣೆಗಳು ಇಂದಿಗೂ ಮುಂದು ವರೆದಿವೆ. ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಇಂದಿಗೂ ಶೋಷಣೆ ಅನುಭವಿಸುತ್ತಿದ್ದೇವೆ.ಇದು ಅಂತ್ಯ ಕಾಣಬೇಕಾದರೆ ನಾವೆಲ್ಲರೂ ರಾಜಕೀಯ ಅಧಿಕಾರ ಪಡೆದಾಗ ಮಾತ್ರ ಸಾಧ್ಯ.ಸಿದ್ದಾಂತಗಳನ್ನು ನಮ್ಮ ಸ್ವಾರ್ಥಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದೇವೆ.
ಅದನ್ನು ಸಮಾಜದ ಒಳಿತಿಗೆ ಬಳಕೆ ಮಾಡಿಕೊಳ್ಳಬೇಕಿದೆ.ದಲಿತರಲ್ಲಿ ಜಾಗೃತಿ ಮೂಡದ ಹೊರತು ಶೋಷಣೆಯಿಂದ ಹೊರ ಬರಲು ಸಾಧ್ಯವಿಲ್ಲ.ನಮ್ಮ ಹಕ್ಕು,ಸ್ವಾಭಿಮಾನಕ್ಕೆ ಧಕ್ಕೆಯಾಗದ ರೀತಿ ಬದುಕನ್ನು ಕಂಡುಕೊಳ್ಳಲು ನಾವೆಲ್ಲರೂ ಬದ್ದರಾಗಬೇಕು ಎಂದರು.
ರಾಜ್ಯಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ ಮಾತನಾಡಿ,ಇದೊಂದು ಆರೋಗ್ಯ ಪೂರ್ಣ ಬೆಳವಣಿಗೆ,ಬುದ್ದ, ಬಸವ, ಅಂಬೇಡ್ಕರ್ ಜಯಂತಿಗೆ ಎಲ್ಲಾ ಸಮಾಜದ ಯುವಜನತೆ ಪಾಲ್ಗೊಂಡಿರುವುದು ಸಂತೋಷ ತಂದಿದೆ.ಈ ರೀತಿಯ ಬೆಳವಣಿಗೆ ರಾಜ್ಯದ ಎಲ್ಲೆಡೆ ಆಗಬೇಕಿದೆ.ಎಲ್ಲಾ ಕಾಲದಲ್ಲಿ ಸಮಾಜದ ಒಳಿತಿಗಾಗಿ ದುಡಿದ ಅನೇಕ ಬುದ್ದಿ ಜೀವಿಗಳ ನಮ್ಮಲ್ಲಿದ್ದರು.ಜೈನ ಮತ್ತು ಬೌದ್ದ ಧರ್ಮದ ಉದಯಕ್ಕೆ ಇಂತಹ ಚಿಂತನೆಗಳೇ ಕಾರಣ. ಇಂದು ಇದ್ದರೂ ಇರಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ. ಇದು ಬುದ್ದನ ದಿಕ್ಕಿನ ವಿರುದ್ದ ಪಯಣವಾಗಿದೆ.
ಮನುಷ್ಯ ವಿರೋಧಿ ಧರ್ಮವೊಂದು, ಮುನ್ನೆಲೆಗೆ ಬಂದಿರುವುದು ನಮ್ಮೆಲ್ಲರ ದುರದೃಷ್ಟಕರ.ದೇಶಭಕ್ತಿಯ ಹೆಸರಿನಲ್ಲಿ ಇನ್ನಿಲ್ಲದ ಕೆಟ್ಟ ಕಾರ್ಯ ನಡೆಯುತ್ತಿದೆ. ಬಹುಸಂಖ್ಯಾತರಿಗೆ ದೇಶದ್ರೋಹದ ಪಟ್ಟ ಕಟ್ಟಲಾಗುತ್ತಿದೆ.ಶ್ರಮಜೀವಿಗಳಿಗೆ,ಹೊಟ್ಟೆಗೆ ಅನ್ನ ನೀಡುವ ರೈತರು ದೇಶಭಕ್ಕತರಲ್ಲವೇ ಎಂದು ಪ್ರಶ್ನಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ.ದೊರೆರಾಜು ವಹಿಸಿದ್ದರು. ಕರ್ನಾಟಕ ರಾಜ್ಯ ಎಸ್ಸಿ,ಎಸ್ಟಿ ಸರಕಾರಿ ನೌಕರರ ಸಮನ್ವಯ ಸಮಿತಿ ಅಧ್ಯಕ್ಷ ಡಾ.ವೈ.ಕೆ.ಬಾಲಕೃಷ್ಣಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿದರು.ವೇದಿಕೆಯಲ್ಲಿ ವಿಧಾನಪರಿಷತ್ ಸದಸ್ಯ ಆರ್.ರಾಜೇಂದ್ರ, ಶಿವಶಂಕರ್,ಇಕ್ಬಾಲ್ ಅಹಮದ್, ನರಸೀಯಪ್ಪ, ಪ್ರಭಾವತಿ ಸುಧೀರ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
