ಭೂ ಕಳ್ಳರಿಗೆ ಜುಂಜಪ್ಪ ಸಿಂಹ ಸ್ವಪ್ನವಾಗಿದ್ದ: ಡಾ. ಚಿಕ್ಕಣ್ಣ ಯಣ್ಣೆಕಟ್ಟೆ
ತುಮಕೂರು:ಭೂಕಳ್ಳರಿಗೆ ಜುಂಜಪ್ಪ ಸಿಂಹ ಸ್ವಪ್ನವಾಗಿದ್ದ ಎಂದು ಜಾನಪದ ವಿದ್ವಾಂಸ ಡಾ. ಚಿಕ್ಕಣ್ಣ ಯಣ್ಣೆಕಟ್ಟೆ ವ್ಯಾಖ್ಯಾನಿಸಿದರು.
ತುಮಕೂರಿನ ಝೆನ್ ಟೀಮ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರಿನ ಸಹಯೋಗದಲ್ಲಿ ಶಿರಾ ತಾಲೂಕು ಮಣ್ಣಮ್ಮನ ಕ್ಷೇತ್ರದಲ್ಲಿ ಆಯೋಜಿಸಿದ್ದ ಜುಂಜಪ್ಪನ ಕಾವ್ಯ, ಗಣೆಪದ ಮತ್ತು ಭಜನೆ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
ಬುಡಕಟ್ಟು ಸಂಸ್ಕೃತಿಯ ಜುಂಜಪ್ಪ ಪರಿಸರ ಸಂರಕ್ಷಣೆ ಹಾಗೂ ಪಶುಪಾಲನೆ ಮೂಲಕ ಭೂಕಬಳಿಕೆ ಹಾಗೂ ಕೊಳ್ಳುಬಾಕರಿಗೆ ಸಿಂಹ ಸ್ವಪ್ನನಾಗಿದ್ದರು. ಜು0ಜಪ್ಪ ಬುಡಕಟ್ಟು ಸಮುದಾಯ ದ ಸಮರ್ಥ ನಾಯಕನಾಗಿ ದ್ದು.ಪರಿಸರ ಸಂರಕ್ಷಣೆ ಆತನ ಮೊದಲ ಕಾಳಜಿಯಾಗಿತ್ತು ಎಂದರು.
ಕಾಡುಗೊಲ್ಲರ ಸಂಸ್ಕಾರವನ್ನು ಅಚ್ಚುಕಟ್ಟಾಗಿ ರೂಢಿಸಿಕೊಂಡು ಏಳು ಲಕ್ಷ ದನಗಳ ಪಾಲಕನಾಗಿ, ಕಾಡು ಮೇಡನ್ನು ಉಳಿಸುವ ಸಂದರ್ಭದಲ್ಲಿ ಭೂಕಬಳಿಕೆ ಹಾಗೂ ಭೂ ಪಾಳೆಯಗಾರಿಕೆಯ ವಿರುದ್ದ ಮಾಡಿದ ಹೋರಾಟ ಪೂರಕ ಪವಾಡಗಳು, ಜನಪದ ಮಹಾಕಾವ್ಯವಾಗಿ ರೂಪುಗೊಂಡದ್ದು ತುಮಕೂರು ಜಿಲ್ಲೆಯ ವಿಶೇಷ ಎಂದರು.
ಇದು ಜಾಗತಿಕ ಮಹಾಕಾವ್ಯವಾಗಿ ಪ್ರಪಂಚದಾದ್ಯAತ ಪರಿಚಿತವಾಗಿದೆ ಎಂದ ಅವರು ಜುಂಜಪ್ಪನ ಮಹಾ ಕಾವ್ಯ ತುಮಕೂರು ಜಿಲ್ಲೆಯ ಮಹಾ ಹಿರಿಮೆಗೆ ಕಾರಣವಾಗಿರುವುದು ಹೆಮ್ಮೆಯ ಸಂಗತಿ ಎಂದರು.
ಆತನ ಹೋರಾಟ, ಭೂಮಿ, ಕಾಡು, ಗಿಡ, ಮರಗಳ ಸಂರಕ್ಷಣೆ ಮೂಲಕ ಜೀವಪರವಾದ ಬಹುದೊಡ್ಡ ಸಾಂಸ್ಕೃತಿಕ ನಾಯಕನಾಗಿದ್ದ. ಹಾಗಾಗಿಯೇ ಆತನ ಮೇಲೆ ಮಹಾಕಾವ್ಯಗಳು, ಖಂಡ ಕಾವ್ಯಗಳು ಮೌಖಿಕ ಪರಂಪರೆಯಲ್ಲಿ ರಚನೆಯಾಗಿದೆ ಎಂದು ಹೇಳಿದರು. ಕಾಡುಗೊಲ್ಲರು ಸಂಸ್ಕೃತಿ ಮತ್ತು ಪರಿಸರದ ಬಗ್ಗೆ ಅಪಾರವಾದ ಕಾಳಜಿ ಹೊಂದಿರುವಂತಹವರು. ಇದು ಜುಂಜಪ್ಪನ ಕಾವ್ಯದಲ್ಲೂ ಸಹ ನೋಡಬಹುದು ಎಂದರು. ಜುಂಜಪ್ಪನ ಕಾವ್ಯ ವರ್ತಮಾನದೊಂದಿಗೆ ಮುಖಾಮುಖಿಯಾಗಿಸುವ ತುರ್ತು ಅಗತ್ಯವಿದ್ದು ಈ ಬಗೆಯ ನಿರಂತರ ಅನುಸಂಧಾನ ಕ್ರಿಯೆಯು ನಿರಂತರವಾಗಬೇಕು ಎಂದರು.
ಕಾರ್ಯಕ್ರಮವನ್ನು ಸಾಂಕೇತಿಕವಾಗಿ ಉದ್ಘಾಟಿಸಿದ ಸರ್ವೋದಯ ಮಂಡಲದ ಕಾರ್ಯದರ್ಶಿ ಆರ್.ವಿ. ಪುಟ್ಟಕಾಮಣ್ಣ ಮಾತನಾಡಿ ಶಿರಾ ಸೀಮೆ ಜನಪದ ಕಲೆ, ಕಲಾವಿದರ ಮಹಾಗಣಿಯಾಗಿದ್ದು ಇವರಿಗೆ ವೇದಿಕೆಗಳ ಅಗತ್ಯವಿದೆ ಎಂದ ಅವರು ತುಮಕೂರಿನ ಝೆನ್ ಟೀಮ್‌ನ ಉಗಮ ಶ್ರೀನಿವಾಸ್ ಈ ಕಾರ್ಯಕ್ಕೆ ಮುಂದಾಗಿರುವುದು ಸ್ವಾಗತಾರ್ಹ ಎಂದರು.
ಅಧ್ಯಕ್ಷತೆ ವಹಿಸಿದ್ದ ಝೆನ್ ಟೀಮ್‌ನ ಉಗಮ ಶ್ರೀನಿವಾಸ್ ಮಾತನಾಡಿ, ಜನಪದ ಕಲೆಗೆ ಸಾಟಿಯಾದ ಮತ್ತೊಂದು ಕಲೆಯಿಲ್ಲ ಎಂದ ಅವರು ಮೌಖಿಕ ಪರಂಪರೆಯ ಈ ಕಲೆಯನ್ನು ಸಂರಕ್ಷಿಸಬೇಕಾದದ್ದು ಅಕ್ಷರವಂತರೆಲ್ಲರ ಕರ್ತವ್ಯ ಎಂದರು.
ಹಾಗೆಯೇ ಇದೇ ಸಂದರ್ಭದಲ್ಲಿ ಗಣೆ ಕಲೆಯ ಮಹತ್ವ ಹಾಗೂ ಚಮತ್ಕಾರಿಕೆಯನ್ನು ವಿಶ್ಲೇಷಿಸಿದರು. ಕಾರ್ಯಕ್ರಮದಲ್ಲಿ ಸಿದ್ದೇಗೌಡ, ಮಹಾಲಿಂಗೇ ಗೌಡ, ಪೂಜಾರ್ ಜಡಿಯಪ್ಪ , ನೇರಲಗುಡ್ಡ ಶಿವಕುಮಾರ್, ರಘುರಾವ್ ಮತ್ತಿತರರು ಉಪಸ್ಥಿತರಿದ್ದರು. ಬಳಿಕ ತುಪ್ಪದಕೊಣ ಗೊಲ್ಲರಹಟ್ಟಿಯ ಗಣೆ ಕ್ಯಾತಪ್ಪ ಮತ್ತು ತಂಡ ಹಾಗೂ ಸಾಕ್ಷಿಹಳ್ಳಿಯ ಗೌಡಪ್ಪ, ನಿಂಗಮ್ಮ ಮತ್ತು ತಂಡದವರಿಂದ ಗಣೆ ವಾದನ ಹಾಗೂ ಭಜನೆ ಕಾರ್ಯಕ್ರಮ ನೆರವೇರಿತು. ಸಮಾರಂಭದಲ್ಲಿ ಮಣ್ಣಮ್ಮ ದೇವಾಲಯ ಸಮಿತಿಯವರು, ಕೈವಾಡದವರು ಹಾಜರಿದ್ದರು.
