ಪ್ರೆಸ್ ಕ್ಲಬ್ ತುಮಕೂರು ಸದಸ್ಯತ್ವ ನೋಂದಣಿಗೆ ಗೃಹ ಸಚಿವ ಚಾಲನೆ
ತುಮಕೂರು:ಪ್ರೆಸ್ ಕ್ಲಬ್ ತುಮಕೂರು ಸದಸ್ಯತ್ವ ನೋಂದಣಿಗೆ ಗೃಹ ಸಚಿವ ಅರಗ ಜ್ಞಾನೇಂದ್ರ ಚಾಲನೆ ನೀಡಿದರು.
ಗೌರೌಸದಸ್ಯತ್ವ ಸ್ವೀಕರಿಸಿ ಮಾತನಾಡಿದ ಅವರು, ಸಮಾಜವನ್ನು ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯುವ ನಿಟ್ಟಿನಲ್ಲಿ ಮಾಧ್ಯಮಗಳ ಪಾತ್ರ ಬಹುದೊಡ್ಡದು ಎಂದರು.
ಗಣತಂತ್ರ ವ್ಯವಸ್ಥೆಯಲ್ಲಿ ನಾಲ್ಕನೇ ಸ್ತಂಭ ಎಂಬ ಕೀರ್ತಿ ಮಾಧ್ಯಮ ಕ್ಷೇತ್ರಕ್ಕಿದೆ. ಸಾರ್ವಜನಿಕರ ಮತ್ತು ಸರ್ಕಾರದ ನಡುವೆ ಸಂಪರ್ಕ ಸೇತುವೆಯಾಗಿ ಕೆಲಸ ಮಾಡುವ ಮಾಧ್ಯಮಗಳು ಧ್ವನಿ ಇಲ್ಲದವರ ಧ್ವನಿಯಾಗಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.
ಸರ್ಕಾರದಿಂದ ಮಾಹಿತಿ ಪಡೆಯುವ, ಸಲಹೆ ನೀಡುವ ಹಾಗೂ ಸಮಾಜದಲ್ಲಾಗುವ ಆಗು-ಹೋಗುಗಳನ್ನು ಸರಕಾರಕ್ಕೆ ತಿಳಿಸುವ ಕೆಲಸವನ್ನು ಮಾಧ್ಯಮಗಳು ಮಾಡುತ್ತವೆ ಎಂದು ವಿಶ್ಲೇಷಿಸಿದರು. ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಬೆಳೆಯುತ್ತಿರುವ ಭಾರತೀಯ ಮಾಧ್ಯಮ ಕ್ಷೇತ್ರ ಅತ್ಯಂತ ಪ್ರಬಲವಾಗಿ ಕೆಲಸ ನಿರ್ವಹಿಸುತ್ತಿದೆ ಎಂದರು.
ವಿದ್ಯುನ್ಮಾನ ಮಾಧ್ಯಮಗಳಲ್ಲಿ ಮೊದಲು ಸುದ್ದಿ ನೀಡುವ ಸ್ಫರ್ಧೆ ಆರೋಗ್ಯಪೂರ್ಣವಾಗಿರಲಿ ಎಂದು ತಿಳಿಸಿದರು. ಪ್ರೆಸ್ ಕ್ಲಬ್‌ಗಳು ಮಾಧ್ಯಮ ಮಿತ್ರರೆಲ್ಲರೂ ಒಂದೆಡೆ ಸೇರಿ ತಮ್ಮ ಜ್ಞಾನವನ್ನು, ಅನುಭವಗಳನ್ನು ಹಂಚಿಕೊಳ್ಳುವ ಸೂಕ್ತ ವೇದಿಕೆ.ತುಮಕೂರು ಪ್ರೆಸ್ ಕ್ಲಬ್ ಮಾದರಿಯಾಗಿ ಕಾರ್ಯ ನಿರ್ವಹಿಸಲಿ ಎಂದು ಆಶಿಸಿದರು.
ಈ ವೇಳೆ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ್, ವಿದ್ಯಾವಾಹಿನಿ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಪ್ರದೀಪ್ ಕುಮಾರ್ ಗೌರವ ಸದಸ್ಯತ್ವ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ಪ್ರೆಸ್ ಕ್ಲಬ್ ತುಮಕೂರು ಪದಾಧಿಕಾರಿಗಳು, ಹಿರಿಯ ಪತ್ರಕರ್ತರು ಹಾಜರಿದ್ದರು.