ಅಧಿಕಾರಿಗಳ ಕುಂಟುನೆಪ: ಉಪಯೋಗಕ್ಕೆ ಬಾರದ ಶೌಚಾಲಯ
ಚಿಕ್ಕನಾಯಕನಹಳ್ಳಿ :ಶೆಟ್ಟಿಕೆರೆ ಬಸ್ ನಿಲ್ದಾಣದಲ್ಲಿ ೨೦೧೪- ೧೫ ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರ ಯೋಜನೆಯಡಿನಿರ್ಮಿಸಲಾದ ಶೌಚಾಲಯಗಳು ಅಧಿಕಾರಿಗಳ ಕುಂಟು ನೆಪದಿಂದ ಸಾರ್ವಜನಿಕರ ಉಪಯೋಗಕ್ಕೆ ಬಾರದೆ ನಿರುಪಯುಕ್ತವಾಗಿ ನಿಂತಿವೆ.
ಹೋಬಳಿ ಕೇಂದ್ರದ ಹೃದಯ ಭಾಗದಲ್ಲಿರುವ ಆಸ್ಪತ್ರೆ, ಬ್ಯಾಂಕ್‌ಗೆ ಆಗಮಿಸುವ ಸಾರ್ವ ಜನಿಕರನ್ನು ಗಮನದಲ್ಲಿಟ್ಟುಕೊಂಡು ಬಸ್ ನಿಲ್ದಾಣದ ಸಮೀಪ ಗ್ರಾ.ಪಂ ವತಿಯಿಂದ ಶೌಚಾಲಯ ನಿರ್ಮಿಸಿ ನಿರ್ವಹಣೆಯ ಹೊಣೆ ಹೊತ್ತರು. ಶುಲ್ಕ ಪಾವತಿಸ ಬೇಕೆಂದು ಜನರು ಉಪಯೋಗಿಸದ ಕಾರಣ ಮುಚ್ಚಲಾಗಿದೆ. ಶೌಚಾಲಯ ನಿರ್ಮಿಸಿ ಉದ್ಘಾಟನೆ ಗೊಂಡ ನಂತರ ಕೆಲವು ದಿನಗಳ ಕಾಲ ಸಾರ್ವಜನಿಕರು ಬಳಸಿಕೊಂಡರು. ನಂತರ ಬೀಗವನ್ನೇ ತಗೆದಿಲ್ಲ. ಬಸ್ ನಿಲ್ಲಾಣಕ್ಕೆ ಬರುವ ಪುರುಷ ಪ್ರಯಾಣಿಕರು ನಿಸರ್ಗದ ಕರೆಗೆ ಹೊರಗಡೆ ಹೋಗಬಹುದು. ಆದರೆ ಮಹಿಳೆಯರು ಪರದಾಡಬೇಕಿದೆ.
ಕಟ್ಟಡ ಶಿಥಿಲಾವಸ್ಥೆ ತಲುಪುತ್ತಿದ್ದು ಶೌಚಾಲಯದ ಎದುರು ಗಿಡಕಂಟಿಗಳು ಬೆಳೆದು ಸುತ್ತ ಮುತ್ತಲಿನ ಪರಿಸರ ದುರ್ನಾಥದಿಂದ ಕೂಡಿದೆ. ಅಧಿಕಾರಿಗಳ ನಿರ್ಲಕ್ಷö್ಯದಿಂದ ಶೌಚಾಲಯದ ಪ್ರಯೋಜನ ಸಾರ್ವಜನಿಕರಿಗೆ ಸಿಗುತ್ತಿಲ್ಲ. ಸಂಬಂಧಪಟ್ಟವರು ಇನ್ನಾದರೂ ಇತ್ತ ಗಮನಹರಿಸಿ ಇವುಗಳನ್ನು ಸರಿಪಡಿಸಬೇಕಿದೆ ಎಂಬ ಒತ್ತಾಯ ಸಾರ್ವಜನಿಕರದು.
ಸಿದ್ದೇಶ್ ಪಿಡಿಓಆದಾಯ ಇಲ್ಲದ ಕಾರಣ ಶೌಚಾಲಯವನ್ನು ನೋಡಿಕೊಳ್ಳಲು ಸ್ಥಳಿಯವಾಗಿ ಯಾರು ಮುಂದೆ ಬರುತ್ತಿಲ್ಲ. ಸ್ವಚ್ಛತೆಗೆ ಸಂಬಂಧಪಟ್ಟ ಹುದ್ದೆ ನಮ್ಮಲ್ಲಿ ಇಲ್ಲದ ಕಾರಣ ಸಿಬ್ಬಂದಿಯನ್ನು ನೇಮಿಸಲು ಸಾಧ್ಯವಾಗಿಲ್ಲ. ಶೀಘ್ರ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಶೌಚಾಲಯವನ್ನು ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸುತ್ತೇನೆ.