ಇಡ್ಲಿ ಅಮ್ಮನಿಗೆ ಆನಂದ್ ಮಹೀಂದ್ರಾ ಮನೆ ಗಿಫ್ಟ್
ಬೆಂಗಳೂರು:ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿರುವ ಈ ದಿನಗಳಲ್ಲೂ ಒಂದು ರು.ಗೆ ಇಡ್ಲಿ ಬಡಿಸುತ್ತಿರುವ ಇಡ್ಲಿ ಅಮ್ಮನಿಗೆ ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರು ಹೊಸ ಮನೆಯೊಂದನ್ನು ಕಟ್ಟಿಸಿಕೊಟ್ಟಿದ್ದಾರೆ.
ತಮಿಳುನಾಡಿನ ಕೊಯಮತ್ತೂರಿನ ಹೊರವಲಯದ ವಡಿವೇಳಂಪಾಳಯಂನ ಕಮಲ ತ್ತಾಳ್ ಅವರು, ಹಸಿದು ಬಂದವರಿಗೆ ಸೌದೆ ಒಲೆ, ಗೋಡೆ ಕುಸಿದಿರುವ ಮನೆಯ ಕಡಿಮೆ ದುಡ್ಡಿನಲ್ಲಿ ಹೊಟ್ಟೆ ತುಂಬ ಇಡ್ಲಿ ಬಡಿಸುತ್ತಿದ್ದಾರೆ. ೮೫ರ ವಯಸ್ಸಿನಲ್ಲೂ ಅವರುನಿತ್ಯ ಸೂರ್ಯೋದಯದ ಹೊತ್ತಿಗೆ ನೂರಾರು ಜನರಿಗಾಗುವಷ್ಟು ಇಡ್ಲಿ ಮಾಡಿ, ಕೇವಲ ಒಂದು ರುಪಾಯಿಗೆ ಬಡಿಸುತ್ತಾರೆ.
ಸೌದೆ ಒಲೆಯಲ್ಲಿ ಇಡ್ಲಿ ಬೇಯಿಸಿ, ರುಬ್ಬುಕಲ್ಲು ಬಳಸಿ ಚಟ್ನಿ ರುಬ್ಬುತ್ತಿದ್ದ ಇಡ್ಲಿ ಅಮ್ಮನ ವಿಡಿಯೊ ಮತ್ತು ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸದ್ದು ಮಾಡಿದ್ದವು. ಈ ವಿಡಿಯೊಗಳಿಗೆ ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರು ೨೦೧೯ ರ ಸೆಪ್ಟೆಂಬರ್ ನಲ್ಲಿ, ಇಡ್ಲಿ ಅಮ್ಮನಿಗೆ ಎಲ್‌ಪಿಜಿ ಸಿಲಿಂಡರ್ ಸಂಪರ್ಕ ಕೊಡಿಸುವುದಾಗಿ ಟ್ವೀಟ್ ಮಾಡಿದ್ದರು. ಅವರು ಟ್ವೀಟ್ ಮಾಡಿದ ಮಾರನೆಯ ದಿನವೇ ಎಚ್‌ಪಿಸಿಎಲ್ ಕಂಪನಿಯವರು ಎಲ್‌ಪಿಜಿ ಸಿಲಿಂಡರ್, ಒಲೆ ಮತ್ತು ವೆಟ್ ಗ್ರೈಂಡರ್ ಕೊಟ್ಟಿ ದ್ದರು.
’ಶೀಘ್ರದ ಇಡ್ಲಿ ಅಮ್ಮ ಸ್ವಂತ ಮನೆಯಲ್ಲಿ ಇಡ್ಲಿಯನ್ನು ಬಡಿಸಲಿದ್ದಾರೆ’ ಎಂದು ೨೦೨೧ರ ಏಪ್ರಿಲ್‌ನಲ್ಲಿ ಮಹೀಂದ್ರಾ ಟ್ವೀಟ್ ಮಾಡಿದ್ದರು. ಇದೀಗ ಆ ಭರವಸೆ ಪೂರ್ಣಗೊಂಡಿದೆ. ಅವರ ಕಾರ್ಯಕ್ಕೆ ನೆಟ್ಟಿಗರು ಮೆಚ್ಚುಗೆಯ ಮಳೆ ಸುರಿಸಿದ್ದಾರೆ.
***
ತಾಯಂದಿರ ದಿನದಂದು ಇಡ್ಲಿ ಅಮ್ಮನಿಗೆ ಮನೆಯನ್ನು ಉಡುಗೊರೆಯಾಗಿ ನೀಡಲು ಸಾಧ್ಯವಾಗಿದೆ. ಆಕೆ ಆರೈಕೆ, ಕಾಳಜಿ ಹಾಗೂ ನಿಸ್ವಾರ್ಥದ ಗುಣಗಳ ಸಮ್ಮೇಳವಾಗಿರುವಳು. ಅವರಿಗೆ ಮತ್ತು ಅವರ ಕಾರ್ಯಕ್ಕೆ ಬೆಂಬಲ ನೀಡಲು ಅವಕಾಶ ದೊರೆತಿದೆ. ತಾಯಂದಿರ ದಿನದ ಶುಭಾಶಯಗಳು.-ಆನಂದ್ ಮಹೀಂದ್ರಾ, ಕೈಗಾರಿಕೋದ್ಯಮಿ