ಪ್ರವೀಣ್ ಹತ್ಯೆ ಪ್ರಕರಣ: ಮತ್ತಿಬ್ಬರು ಆರೋಪಿಗಳ ಬಂಧನ
ಮಂಗಳೂರು:ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ಕುಮಾರ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು ಮತ್ತಿಬ್ಬರು ಪ್ರಮುಖ ಆರೋಪಿಗಳನ್ನು ಮಂಗಳವಾರ ಬಂಧಿಸಿದ್ದಾರೆ.
ಸದ್ದಾಂ ಮತ್ತು ಹ್ಯಾರಿಸ್ ಬಂಧಿತ ಆರೋಪಿಗಳಾಗಿದ್ದಾರೆ.
ಜುಲೈ 28 ರಂದು ಶಫೀಕ್ ಮತ್ತು ಜಾಕೀರ್ ಅವರನ್ನು ಬಂಧಿಸಲಾಗಿತ್ತು. ಶಂಕಿತ ಸಂಚುಕೋರರು, ಹಲ್ಲೆಕೋರರ ಪತ್ತೆಗೆ ಶೋಧ ಕಾರ್ಯ ನಡೆಯುತ್ತಿದೆ. ಇವರು ಹತ್ಯೆಗೆ ಬಳಸಲಾಗಿದ್ದ ತಲ್ವಾರ್ ಮತ್ತು ಬೈಕ್ ವಶಕ್ಕೆ ಹುಡುಕಾಟ ನಡೆಸಲಾಗುತ್ತಿದೆ. ಇನ್ನೂ ನಾಲ್ವರು ಆರೋಪಿಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.
ಈಗಾಗಲೇ ಬಂಧಿತನಾಗಿರುವ ಶಫೀಕ್ ನೀಡಿದ ಮಾಹಿತಿಯ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ನೌಷನ್ ಬಗ್ಗೆ ಶಫೀಕ್ ಬಾಯಿಬಿಟ್ಟಿದ್ದ. ಬಳಿಕ ಸಿಸಿಟಿವಿ ಆಧರಿಸಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.
ನೌಷನ್ ಪ್ರಕರಣದ ಮಾಸ್ಟರ್ ಮೈಂಡ್ ಎಂಬ ಶಂಕೆ ವ್ಯಕ್ತವಾಗಿದ್ದು, ಮಧ್ಯಾಹ್ನದ ಒಳಗೆ ಪೊಲೀಸರು ಸುದ್ದಿಗೋಷ್ಠಿ ನಡೆಸಿ ಕೇಸ್ ನ ಸಂಪೂರ್ಣ ಮಾಹಿತಿ ಬಹಿರಂಗಪಡಿಸುವ ಸಾಧ್ಯತೆಗಳಿವೆ.
ಹತ್ಯೆಯಲ್ಲಿ ಭಾಗಿಯಾಗಿದ್ದ ಒಬ್ಬಾತ ಬೆಂಗಳೂರಿಗೆ ತೆರಳಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು.
