ಜನಾಂಗದ ಹಿತಕ್ಕಾಗಿ ರಾಜಕೀಯ ಬದಿಗೊತ್ತಿ : ಎಂಬಿಟಿ ನಾಗರಾಜ್
ಚಿಕ್ಕಬಳ್ಳಾಪುರ :ಜನಾಂಗದ ಪುರೋಭಿವೃದ್ದಿಯ ವಿಚಾರದಲ್ಲಿ ರಾಜಕೀಯ ಬೆರೆಸದೆ ಸಂಘಟನಾತ್ಮಕವಾಗಿ ಕೆಲಸ ಮಾಡ ಬೇಕಿದೆ ಎಂದು ಪೌರಾ ಡಳಿತ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್ ಅಭಿಪ್ರಾಯ ಪಟ್ಟರು.
ನಗರದ ರೈಲ್ವೇ ಸ್ಟೇಷನ್ ರಸ್ತೆ ಚಾಮರಾಜಪೇಟೆಯಲ್ಲಿ ಶುಕ್ರವಾರ ಜಿಲ್ಲಾ ಮತ್ತು ತಾಲೂಕು ಕುರುಬರ ಸಂಘದ ಹಾಗೂ ಕರ್ನಾಟಕ ಪ್ರದೇಶ ಕುರುಬರ ಸಂಘದ ಸಹಯೋಗದಲ್ಲಿ ನಿರ್ಮಾಣವಾಗುತ್ತಿರುವ ” ಜಿಲ್ಲಾ ವಿದ್ಯಾರ್ಥಿ ವಸತಿ ನಿಲಯ ನಿರ್ಮಾಣದ ಗುದ್ದಲಿ ಪೂಜೆ ಹಾಗೂ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ನೂತನ ವಸತಿನಿಲಯ ನಿರ್ಮಾಣದ ಜಾಗದಲ್ಲಿ ಈ ಹಿಂದೆಯೂ ವಸತಿ ನಿಲಯ ಇದ್ದು ನೂರಾರು ಮಂದಿ ವಿದ್ಯಾರ್ಥಿಗಳಿಗೆ ಭವಿಷ್ಯ ರೂಪಿಸಿ ಕೊಳ್ಳಲು ನೆರವಾಗಿದೆ. ಇಲ್ಲಿದ್ದು ವ್ಯಾಸಾಂಗ ಮುಂದುವರೆಸಿದ ಅನೇಕರು ಉನ್ನತ ಹುದ್ದೆಗಳನ್ನು ಅಲಂಕರಿಸಿ ದ್ದಲ್ಲದೆ ಸಮುದಾಯದ ಏಳಿಗೆಗಾಗಿ ಶ್ರಮಿಸಿದ್ದಾರೆ.ಮತ್ತೊಮ್ಮೆ ಇಲ್ಲಿ ಇಂತಹ ಪುಣ್ಯದ ಕಾರ್ಯವನ್ನು ನನ್ನ ಕೈಯಿಂದ ಮಾಡಿಸು ತ್ತಿದ್ದಾರೆ.
ಹೊಸಕೋಟೆ ಕುರುಬರ ಸಂಘವು ಆರ್ಥಿಕವಾಗಿ ಚೈತನ್ಯ ಪಡೆದಿರುವಂತೆ ಇಲ್ಲಿನ ಸಂಘವೂ ಪಡೆಯ ಬೇಕಿದೆ.ಈ ಕಟ್ಟಡ ಬೇಗನೆ ನಿರ್ಮಾಣವಾಗಿ ಲೋಕಾರ್ಪಣೆಗೊಳಿಸಲು ಬೇಕಾದ ನೆರವನ್ನು ನೀಡಲು ನಾನು ಸಿದ್ದನಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಸಮುದಾಯ ಬಲಿಷ್ಟ:ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕುರುಬ ಸಮುದಾಯವು ೨ ಲಕ್ಷಕ್ಕೂ ಹೆಚ್ಚಿದ್ದು ರಾಜಕೀಯ ತಿರುವು ನೀಡುವ ಶಕ್ತಿಯನ್ನು ಹೊಂದಿರುವುದು ನನಗೆ ಗೊತ್ತಿದೆ. ನಮ್ಮ ಶಕ್ತಿಯೇನು ಎಂಬುದನ್ನು ನಾವು ಸಮಾಜಕ್ಕೆ ತೋರಿಸ ಬೇಕಾದ ಅಗತ್ಯವಿದೆ. ಇದಕ್ಕಾಗಿ ಮುಂದಿನ ತಿಂಗಳಲ್ಲಿ ಇಲ್ಲಿ ಬೃಹತ್ ಮಟ್ಟದ ಸಮಾವೇಶ ಮಾಡಲು ಮಾಜಿ ಸಚಿವ ರೇವಣ್ಣ ಶ್ರಮಿಸುತ್ತಿರುವುದು ಸಂತೋಷದ ವಿಚಾರವಾಗಿದೆ.
ದುರಂತವೆ0ದರೆ ನಮ್ಮ ಸಮುದಾಯಕ್ಕೆ ಈವರೆಗೆ ದೊರೆಯಬೇಕಾದ ರಾಜಕೀಯ ಪ್ರಾತಿನಿಧ್ಯ ಜಿಲ್ಲೆಯಲ್ಲಿ ದೊರೆತಿಲ್ಲ. ಇನ್ನಾದರೂ ಕೂಡ ಇದು ದೂರವಾಗಬೇಕಿದೆ.ಮುಂದಿನ ದಿನಗಳಲ್ಲಿ ರಾಜಕೀಯವಾಗಿ, ಆರ್ಥಿಕವಾಗಿ ಶೈಕ್ಷಣಿಕವಾಗಿ ಮೇಲೆ ಬರಲು ಯೋಜನೆ ರೂಪಿಸಲಾಗಿದೆ. ಜಿಲ್ಲೆಯ ಇತಿಹಾಸದಲ್ಲಿ ಮೈಲಿಗಲ್ಲು ಆಗುವ ರೀತಿಯಲ್ಲಿ ವಿದ್ಯಾರ್ಥಿ ನಿಲಯ ನಿರ್ಮಾಣ ವಾಗಲಿದೆ. ಮುಖಂಡರು ಯಾವುದೇ ಪಕ್ಷದಲ್ಲಿ ಇರಬಹುದು ಅದೇನೂ ತಪ್ಪಲ್ಲ. ಅಧಿಕಾರ ಅವಕಾಶ ದೊರೆತಾಗ ಸಮುದಾಯದ ಏಳಿಗಾಗಿ ಏಕತೆಯಿಂದ ಶ್ರಮಿಸುವ ಮೂಲಕ ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ತೋರಿಸಬೇಕು ಎಂದು ತಿಳಿಸಿದರು.
೨೫ ಲಕ್ಷ ದೇಣಿಗೆಚಿಕ್ಕಬಳ್ಳಾಪುರ ನಗರದಲ್ಲಿ ನಿರ್ಮಾಣವಾಗುತ್ತಿರುವ ಕುರುಬ ಸಮುದಾಯದ ನೂತನ ವಿದ್ಯಾರ್ಥಿನಿಲಯಕ್ಕಾಗಿ ಎಂಟಿಬಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ೨೫ ಲಕ್ಷ ಹಣವನ್ನು ದೇಣಿಗೆಯಾಗಿ ನೀಡುತ್ತೇನೆ ಎಂದು ಘೋಷಿಸಿದ ಸಚಿವ ಎಂಟಿಬಿ ನಾಗರಾಜ್, ಜಿಲ್ಲಾ ಕೇಂದ್ರದಲ್ಲಿ ಕುರುವ ಜನಾಂಗದ ಸಮುದಾಯ ಭವನ ನಿರ್ಮಾಣಕ್ಕೆ ಬೇಕಾದ ಭೂಮಿ ಮಂಜೂರು ಮಾಡಿಸಿಕೊಡಲು ನಾನು ಸಿದ್ಧವಿದ್ದೇನೆ.ಅದಕ್ಕೂ ಮುನ್ನ ನೀವು ತಹಶೀಲ್ದಾರ್ ಮತ್ತು ಜಿಲ್ಲಾಧಿಕಾರಿಗಳಿಗೆ ಭೂಮಿ ಒದಗಿಸುವಂತೆ ಕೋರಿ ಮನವಿ ಸಲ್ಲಿಸಿ ಬನ್ನಿ.ಸಚಿವ ಸುಧಾಕರ್ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮುದಾಯದ ಏಳಿಗೆಗೆ ಬೇಕಾದ ಕೆಲಸವನ್ನು ಮಾಡಿಸಿಕೊಡುತ್ತೇನೆ ಎಂದರು.
ಎಸ್ಟಿ ಮೀಸಲು ಶೀಘ್ರಸಮುದಾಯವನ್ನು ಎಸ್ಟಿ ಪಟ್ಟಿಗೆ ಸೇರಿಸಬೇಕು ಎಂಬ ಕೂಗು ಬಹಳ ದಿನಗಳಿಂದ ಕೇಳಿರುತ್ತಿದ್ದು ಸಮುದಾಯ ಹೋರಾಟ ಮಾಡುತ್ತಾ ಬಂದಿದ್ದಾರೆ. ಗುಲ್ಬರ್ಗಾದಲ್ಲಿ ಸಿದ್ಧಾನಂದಪುರ ಶ್ರೀಗಳ ನೇತೃತ್ವದಲ್ಲಿ ಧರಣಿ ಪ್ರತಿಭಟನೆ ಉಪವಾಸ ಸತ್ಯಾಗ್ರಹ ಕೂಡ ಮಾಡಲಾಗಿದೆ.ಸಿದ್ಧರಾಮಯ್ಯ ಸರಕಾರದಲ್ಲಿಯೇ ಈ ವಿಚಾರ ಕೇಂದ್ರಕ್ಕೆ ಮುಟ್ಟಿಸಲಾಗಿದೆ.ನಮ್ಮ ಸರಕಾರವೂ ಕೂಡ ಈ ನಿಟ್ಟಿನಲ್ಲಿ ಸರಕಾರದ ಮೇಲೆ ಒತ್ತಡ ತಂದು ಕಾಡುಕುರುಬ, ಜೇನುಕುರುವ,ಗೊಂಡ, ರಾಜಗೊಂಡ ಸಮುದಾಯಗಳನ್ನು ಎಸ್ಟಿ ಪಟ್ಟಿಗೆ ಸೇರಿಸಿ ರಾಜಕೀಯ,ಸಾಮಾಜಿಕ, ಆರ್ಥಿಕ ಚೈತನ್ಯ ತುಂಬಲು ನಿರಂಜನಪುರಿ ಸ್ವಾಮೀಜಿ ಅಧ್ಯಕ್ಷತೆಯಲ್ಲಿ ಸಮಾವೇಶ ಮಾಡಲಾಗಿದೆ.ಶೀಘ್ರದಲ್ಲಿಯೇ ಈ ವಿಚಾರದಲ್ಲಿ ನ್ಯಾಯ ದೊರೆಯಲಿದೆ ಎಂದರು.
ನಾನು ಬಿಜೆಪಿ ತೊರೆಯೆಡಿ.ಕೆ.ಶಿವಕುಮಾರ್ ೧೭ ಮಂದಿಯನ್ನು ವಾಪಸ್ಸು ಬರುವಂತೆ ಆಹ್ವಾನಿಸಿರುವುದು ಕೇಳಿದ್ದೇವೆ. ಯಾರೂಕೂಡ ರ‍್ವಾಪಸಿ ಆಗುವುದಿಲ್ಲ.ನಾನು ಬಿಜೆಪಿಯಲ್ಲಿ ಇದ್ದೇನೆ. ಇಲ್ಲಿಯೇ ಮುಂದುವರೆಯುತ್ತೇನೆ.ಯಾವ ಕಾರಣಕ್ಕೂ ಕಾಂಗ್ರೆಸ್‌ಗೆ ಮತ್ತೆ ವಾಪಸ್ಸು ಆಗುವುದಿಲ್ಲ ಎಂದರು.
ಮಳೆಯಲ್ಲಿ ಭಾಷಣಸಚಿವ ಎಂಟಿಬಿ ನಾಗರಾಜ್ ಮಾತನಾಡಲು ಪ್ರಾರಂಭಿಸುತ್ತಿದ್ದ0ತೆ ಜೋ ಎಂದು ಮಳೆ ಸುರಿಯಿತು. ಇದರಿಂದ ವಿಚಲಿತರಾಗದ ಅವರು ಇದು ಶುಭ ಸೂಚನೆ, ಸಮುದಾಯದ ವಿದ್ಯಾರ್ಥಿ ನಿಲಯಕ್ಕೆ ಯಾವುದೇ ವಿಘ್ನಗಳು ಬರುವುದಿಲ್ಲ ಎಂಬುದಕ್ಕೆ ಇದು ಸಾಕ್ಷಿ ಎಂದು ಹೇಳಿ ೨೦ ನಿಮಿಷ ಭಾಷಣ ಮುಂದುರೆಸಿದರು. ಈವೇಳೆ ಜಿಲ್ಲಾ ಮಟ್ಟದಲ್ಲಿ ನಿವೇಶನ ಕೊಡಿಸಬೇಕೆಂದು ಒತ್ತಡೂ ಜೋರಾಗಿ ಕೇಳಿ ಬಂದು, ಕೋಲಾಹಲದ ಸ್ಥಿತಿ ನಿರ್ಮಾಣವಾಗಿತ್ತು. ಇದರಿಂದ ಕೆರಳಿದ ಎಂಟಿಬಿ ಈ ಹಿಂದೆ ಇಲ್ಲಿಂದ ಮಂತ್ರಿ ಕೇಂದ್ರ ಸಚಿವ ಆದವರಿಂದ ಯಾಕೆ ನೀವು ಮಾಡಿಸಿಕೊಳ್ಳಲಿಲ್ಲ ಎಂದು ಕೋಪದಲ್ಲಿಯೇ ಪ್ರಶ್ನಿಸಿದರು. ಈ ಮಧ್ಯ ಪ್ರವೇಶಿಸಿದ ರೇವಣ್ಣ ಎಲ್ಲರನ್ನು ಸಮಾಧಾನ ಪಡಿಸಿದರು.
ಮಾಜಿ ಸಚಿವ ಹೆಚ್.ಎಂ. ರೇವಣ್ಣ ಮಾತನಾಡಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ೧೭೦ ಕೋಟಿ ಅನುದಾನವನ್ನು ಸಮುದಾಯ ಭವನ ಹಾಗೂ ವಿದ್ಯಾರ್ಥಿನಿಲಯ ನಿರ್ಮಾಣಕ್ಕೆ ನೀಡಿದ್ದರು ಎಂದು ಸ್ಮರಿಸಿದ ರೇವಣ್ಣ ಜಿಲ್ಲಾ ತಾಲೂಕು ಕೇಂದ್ರದಲ್ಲಿ ನಿರ್ಮಾಣವಾಗುವ ಕಟ್ಟಡಗಳಿಗೆ ಸಮುದಾಯದ ಸಮಾಜದ ಪ್ರತಿಯೊಬ್ಬರೂ ಶ್ರಮಿಸುವ ಅಗತ್ಯವಿದೆ ಎಂದರು.ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಗಂಗರೇಕಾಲುವೆ ನಾರಾಯಣಸ್ವಾಮಿ,ಸಮುದಾಯದ ಮುಖಂಡ ತೋಪಡ ನಾಗರಾಜ್,ಹಿರಿಯ ಮುಖಂಡ ಮುನಿಯಪ್ಪ ಮತ್ತಿತರರು ಮಾತನಾಡಿದರು.