ಭಾರತದ ಪ್ರಪ್ರಥಮ 3ಡಿ ಬಯೋಪ್ರಿಂಟಿಂಗ್ ಉತ್ಕೃಷ್ಟತಾ ಕೇಂದ್ರ ಉದ್ಘಾಟನೆ
ಬೆಂಗಳೂರು:ಭಾರತೀಯ ವಿಜ್ಞಾನ ಸಂಸ್ಥೆ ಮತ್ತು ಸೆಲ್‌ಲಿಂಕ್‌ ಕಂಪನಿಗಳ ಸಹಯೋಗ ದಲ್ಲಿ ಐಐಎಸ್ಸಿಯಲ್ಲಿ ಸ್ಥಾಪಿಸಿರುವ ಭಾರತದ ಪ್ರಪ್ರಥಮ 3ಡಿ ಬಯೋಪ್ರಿಂಟಿಂಗ್ ಉತ್ಕೃಷ್ಟತಾ ಕೇಂದ್ರವು ಬೆಂಗಳೂರಲ್ಲಿ ಉದ್ಘಾಟನೆಗೊಂಡಿತು.
ಐಟಿ ಬಿಟಿ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಭಾರತದ ಪ್ರಥಮ 3ಡಿ ಬಯೋ ಪ್ರಿಂಟಿಂಗ್‌ ಉತ್ಕೃಷ್ಟತಾ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದರು. ವೈದ್ಯಕೀಯ ಮತ್ತು ಆರೋಗ್ಯ ಸೇವೆಗಳ ಕ್ಷೇತ್ರದಲ್ಲಿ ಈಗ ಅಂಗಾಂಶಗಳು ಮತ್ತು ಜೀವಕೋಶಗಳನ್ನು ಆಧರಿಸಿದ ಚಿಕಿತ್ಸೆಗಳು ಮುಂಚೂಣಿಗೆ ಬರುತ್ತಿವೆ. ಇವು ದೇಶದಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತರುತ್ತಿವೆ ಎಂದರು.
ಮುಂಬರುವ ವರ್ಷಗಳಲ್ಲಿ ಆಯಾ ವ್ಯಕ್ತಿಗಳ ಶರೀರ ಸ್ವಭಾವವನ್ನು ಆಧರಿಸಿ, ರೋಗ ಗಳನ್ನು ಗುಣಪಡಿಸುವತಹ ನಿರ್ದಿಷ್ಟ ಬಗೆಯ ಚಿಕಿತ್ಸಾ ಕ್ರಮಗಳು ಜನಪ್ರಿಯವಾಗಲಿದೆ ಎಂದು ವಿವರಿಸಿದರು.
ಉತ್ಕೃಷ್ಟತಾ ಕೇಂದ್ರವು ಆಧುನಿಕ ಚಿಕಿತ್ಸಾ ಕ್ರಮಗಳಿಗೆ ಸಂಬಂಧಿಸಿದ ಸಂಶೋಧನಾ ಉಪಕ್ರಮಗಳನ್ನು ಪರಿಚಯಿಸಲಿದೆ. ಜತೆಗೆ ಆರೋಗ್ಯ ಸೇವೆಗಳ ಕ್ಷೇತ್ರದಲ್ಲಿರುವ ವೃತ್ತಿಪರರು ಹಾಗೂ ಉಳಿದವರಿಗೆ ವೈಜ್ಞಾನಿಕತರಬೇತಿ ಇಲ್ಲಿ ಸಿಗಲಿದೆ. 3ಡಿ ಬಯೋ ಪ್ರಿಂಟಿಂಗ್ ತಂತ್ರಜ್ಞಾನದ ಬಳಕೆಯನ್ನು ಪ್ರಚುರಪಡಿಸಲು ಭಾರತೀಯ ವಿಜ್ಞಾನ ಸಂಸ್ಥೆ ಮತ್ತು ಅಗತ್ಯವಿರುವ ಉಳಿದೆಡೆ ಗಳಲ್ಲಿ ಕಾರ್ಯಾಗಾರಗಳನ್ನು ಕೂಡ ಈ ಕೇಂದ್ರವು ಹಮ್ಮಿಕೊಳ್ಳಲಿದೆ ಎಂದು ಅವರು ತಿಳಿಸಿದರು.
ಜೈವಿಕ ತಂತ್ರಜ್ಞಾನ, ಸಂಶೋಧನೆ ಮತ್ತು ಅಭಿವೃದ್ಧಿಗಳ ರಾಜಧಾನಿಯಾಗಿ ಬೆಂಗಳೂರು ಪ್ರತಿಷ್ಠಾಪಿತವಾಗಿದೆ. ಈ ಉತ್ಕೃಷ್ಟತಾ ಕೇಂದ್ರದಲ್ಲಿ ಟಿಶ್ಯೂ ಎಂಜಿನಿಯರಿಂಗ್‌, ಔಷಧಗಳ ಆವಿಷ್ಕಾರ, ಮೆಟೀರಿಯಲ್‌ ಸೈನ್ಸ್‌ನ ಬೆಳವಣಿಗೆ ಸುಗಮವಾಗಿ ನಡೆಯಲಿದೆ. ಇದರಿಂದಾಗಿ ದೇಶದ ಆರೋಗ್ಯ ಸೇವೆಗಳ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗಳಾಗಲಿವೆ. ಇದರಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯ ಬಯೋಸಿಸ್ಟಮ್ಸ್ ಸೈನ್ಸ್ ಅಂಡ್‌ ಎಂಜಿನಿಯರಿಂಗ್‌ ಕೇಂದ್ರವು ಸಕ್ರಿಯ ಪಾತ್ರ ವಹಿಸಲಿದೆ ಎಂದು ಸಚಿವರು ಹೇಳಿದರು.
ಕಾರ್ಯಕ್ರಮದಲ್ಲಿ ಐಐಎಸ್‌ಸಿ ನಿರ್ದೇಶಕ ಪ್ರೊ.ಗೋವಿಂದನ್ ರಂಗರಾಜನ್‌, ಎಚ್‌ಸಿಜಿ ಕ್ಯಾನ್ಸರ್ ಆಸ್ಪತ್ರೆಯ ಸಂಶೋಧನಾ ವಿಭಾಗದ ಮುಖ್ಯಸ್ಥ ಡಾ.ವಿಶಾಲ್‌ ರಾವ್‌, ಸೆಲ್‌ಲಿಂಕ್‌ ಕಂಪನಿಯ ಏಷ್ಯಾ-ಪೆಸಿಫಿಕ್‌ ಮುಖ್ಯಸ್ಥೆ ಟೊಮೋಕೊ ಬೈಲುಂಡ್, ಮಾರುಕಟ್ಟೆ ವಿಭಾಗದ ಮುಖ್ಯಸ್ಥ ರೂಪಕ್‌ ಪೊದ್ದಾರ್ ಉಪಸ್ಥಿತರಿದ್ದರು.