ಅನಧಿಕೃತ ಒತ್ತುವರಿ ತೆರವುಗೊಳಿಸುವಂತೆ ಶಾಸಕರ ಸೂಚನೆ
ಮಧುಗಿರಿ :ಗ್ರಾಮದ ಕೆರೆಯ ಸರ್ವೆ ನಡೆಸಿ ಅನಧಿಕೃತ ಒತ್ತುವರಿ ತೆರವುಗೊಳಿಸುವಂತೆ ಶಾಸಕ ಎಂ.ವಿ.ವೀರಭದ್ರಯ್ಯ ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕಿನ ಮಿಡಿಗೇಶಿ ಹೋಬಳಿಯ ಹನುಮಂತಪುರದಲ್ಲಿ ನಡೆದ ಜಿಲ್ಲಾಧಿಕಾರಿ ನಡೆ ಹಳ್ಳಿಕಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮದ ಕೆರೆಯು ತಾಲೂಕಿನಲ್ಲಿ ೨ನೇ ಬೃಹತ್ ಕೆರೆಯಾಗಿದ್ದು ಸುಮಾರು ೩೫ ಎಕರೆಯಷ್ಟು ಭೂಮಿಯನ್ನು ಒತ್ತುವರಿ ಮಾಡಲಾಗಿದೆ ಎಂಬ ಕೆರೆ ಅಭಿವೃದ್ಧಿ ಸಮಿತಿಯವರ ದೂರಿಗೆ ಪ್ರತಿಕ್ರಿಯಿಸಿದರು.
ತಾಲೂಕಿನಲ್ಲಿ ಈಗಲೂ ಅರ್ಹರಿಗೆ ವಿವಿಧ ರೀತಿಯ ಮಾಶಾಸನವು ಸಿಕ್ಕಿಲ್ಲ. ಯಾವುದೇ ತಾಂತ್ರಿಕ ಸಮಸ್ಯೆಗಳಿದ್ದರೆ ಸರಿಪಡಿಸಿ ಕೆಲಸ ಮಾಡಿಕೊಡಿ. ಗ್ರಾಮಕ್ಕೆ ಅಧಿಕಾರಿಗಳು ಬಂದಾಗ ಪ್ರೀತಿ ಆದರದಿಂದ ನಿಮ್ಮನ್ನು ಸ್ವಾಗತಿಸುವ ಜನರು ನಿಮ್ಮ ಕಚೇರಿಗೆ ಬಂದಾಗ ಅಷ್ಟೇ ಪ್ರೀತಿಯಿಂದ ಕೂರಿಸಿ ಸಮಸ್ಯೆ ಆಲಿಸಿ ಕೆಲಸ ಮಾಡಿಕೊಡಿ. ಮಾಶಾಸನದ ಬಗ್ಗೆ ಹಳ್ಳಿಗಳಲ್ಲಿ ಆಂದೋಲನದ ರೀತಿ ಸಮೀಕ್ಷೆ ಮಾಡಿಸಿ ಕೆಲಸ ಮಾಡಿಕೊಟ್ಟಾಗಲೇ ಸರ್ಕಾರದ ಇಂತಹ ಕಾರ್ಯಕ್ರಮಗಳಿಗೆ ಸಾರ್ಥಕತೆ ಸಿಗುತ್ತದೆ ಎಂದರು.
ಹಣಕ್ಕೆ ಬೇಡಿಕೆ : ಬೆಸ್ಕಾಂ ಅಧಿಕಾರಿಗೆ ತರಾಟೆ :ಗ್ರಾಮದ ನರಸಿಂಹಮೂರ್ತಿ ಎಂಬ ದಲಿತ ವ್ಯಕ್ತಿಯ ಮನೆ ಮೇಲೆ ೩ ಬಗೆಯ ವಿದ್ಯುತ್ ತಂತಿ ಹಾದು ಹೋಗಿದ್ದು ಅದನ್ನು ತೆರವುಗೊಳಿಸಲು ಮನವಿ ನೀಡಿದ್ದರು. ಆದರೆ ಅದನ್ನು ತೆರವುಗೊಳಿಸಲು ಸಿಬ್ಬಂದಿಗಳು ೧೫ ಸಾವಿರ ಖರ್ಚಾಗುತ್ತದೆ ಎಂದಿದ್ದರು ಎಂದು ಸಭೆಯಲ್ಲಿ ತಿಳಿಸಿದಾಗ ಸಿಡಿಮಿಡಿಗೊಂಡ ಶಾಸಕರು ಈ ರೀತಿ ಹಣ ಕೇಳಲು ನಾಚಿಕೆಯಾಗಲ್ಲವೇ ಈ ಕೆಲಸಕ್ಕೆ ಯಾಆವ ರೀತಿ ಹಣ ಕೊಡಬೇಕು ಎಂದು ಗರಂ ಆದರು. ಶೀಘ್ರವಾಗಿ ಈ ಕೆಲಸ ಮಾಡಿಕೊಡಬೇಕು. ಇಲ್ಲವಾದರೆ ಮನೆಗೆ ಕಳಿಸುವುದಾಗಿ ಎಚ್ಚರಿಸಿದರು.
ತಿಂಗಳಲ್ಲಿ ನಿವೇಶನ :ಗ್ರಾಮದಲ್ಲಿ ನಿವೇಶನ ವಂಚಿತರಿಗೆ ನಿವೇಶನ ನೀಡಲು ಜಿಲ್ಲಾಧಿಕಾರಿಗಳು ೧.೧೬ ಎಕರೆ ಭೂಮಿ ನಿಗದಿಪಡಿಸಿದ್ದರೂ ಕ್ರಮವಹಿಸದ ಬಗ್ಗೆ ದೂರು ಕೇಳಿ ಬಂದಿದ್ದು, ಬೇಗ ಸರ್ವೆ ಮಾಡಿಸಿ ನಿವೇಶನ ರಚನೆ ಮಾಡಿ ಹಂಚಲು ೧ ತಿಂಗಳಲ್ಲಿ ಕ್ರಮವಹಿಸಬೇಕು ಎಂದು ತಹಶೀಲ್ದಾರ್ ಸುರೇಶಾಚಾರ್‌ಗೆ ಸೂಚಿಸಿದರು.
ಕಾರ್ಯಕ್ರಮದಲ್ಲಿ ನಿವೇಶನ, ಮನೆ, ಮಾಶಾಸನ, ಪವತಿ ಖಾತೆ, ಖಾತೆ ಬದಲಾವಣೆ, ಜಮೀನಿಗೆ ದಾರಿ ಬಿಡಿಸಿಕೊಡುವಂತಹ ಅರ್ಜಿಗಳು ಬಂದಿದ್ದು ಎಲ್ಲವನ್ನೂ ಸಕಾಲದಲ್ಲಿ ಪರಿಹರಿಸಿಕೊಡುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷೆ ಪ್ರೇಮಲತಾ, ಪಿಡಿಓ ಹೊನ್ನೇಶ್, ತಾಲೂಕು ಮಟ್ಟದ ವಿವಿಧ ಇಲಾಖೆಯ ಅಽಕಾರಿಗಳು, ಗ್ರಾಮಸ್ಥರು ಭಾಗವಹಿಸಿದ್ದರು.