ವಿವಿಧ ಇಲಾಖೆ ಅಧಿಕಾರಿಗಳು ಲಂಚಕ್ಕೆ  ದಲ್ಲಾಳಿ ನೇಮಿಸಿದ್ದಾರೆ: ಡಿವೈಎಸ್‌ಪಿ ರವೀಶ್
ಚಿಕ್ಕನಾಯಕನಹಳ್ಳಿ:ವಿವಿಧ ಇಲಾಖೆ ಅಧಿಕಾರಿಗಳು ಲಂಚ ಪಡೆಯಲು ದಲ್ಲಾಳಿಗಳು, ಡ್ರೆವರ್‌ಗಳನ್ನು ಇಟ್ಟುಕೊಂಡಿದ್ದಾರೆ ಎಂದು ಲೋಕಾಯುಕ್ತ ಡಿವೈಎಸ್‌ಪಿ ರವೀಶ್ ಛಾಟಿ ಬೀಸಿದರು.ಪಟ್ಟಣದ ತಾ.ಪಂ ಸಭಾಂಗಣದಲ್ಲಿ ಬುಧವಾರ ನಡೆದ ತಾಲ್ಲೂಕು ಮಟ್ಟದ ಸಾರ್ವಜನಿಕರ ಕುಂದು ಕೊರತೆ ಪರಿಶೀಲನಾ ಸಭೆಯಲ್ಲಿ ಗರಂ ಆದ ಅವರು ಲೋಕಾಯುಕ್ತ ಸಂಸ್ಥೆಯು ಭ್ರಷ್ಟಾಚಾರ, ದುರಡಾಳಿತವನ್ನು ಸಹಿಸುವುದಿಲ್ಲ. ಕಚೇರಿಗಳಲ್ಲಿ ದಲ್ಲಾಳಿಗಳು ಹೆಚ್ಚಾಗಿದ್ದಾರೆ. ಯಾವುದೇ ಕೆಲಸ ಮಾಡಿಸಿಕೊಳ್ಳಬೇಕಾದರೂ ಮೊದಲು ಅವರನ್ನು ಭೇಟಿ ಮಾಡಬೇಕು ಇಲ್ಲವಾದರೆ ಕಾರ್ಯ ವಿಳಂಬವಾಗಲಿದೆ. ರೈತರು, ಸಾರ್ವಜನಿಕರಿಂದ ದಲ್ಲಾಳಿಗಳು ಹಣವನ್ನು ಪೀಕಿಸುತ್ತಿದ್ದಾರೆ ಎಂಬ ಆರೋಪವನ್ನು ಸಾರ್ವಜನಿಕರು ನಮ್ಮ ಗಮನಕ್ಕೆ ತಂದಿದ್ದು ಇದನ್ನು ಸರಿಪಡಿಸಿಕೊಳ್ಳಿ ಇಲ್ಲದಿದ್ದರೆ ಶಿಸ್ತು ಕ್ರಮ ಅನುಭವಿಸಲು ಸಿದ್ದರಾಗಿ ಎಂದು ಅಧಿಕಾರಿಗಳಿಗೆ ಎಚ್ಚರಿಸಿದರು.
೨೦೧೦-೧೧ ಸಾಲಿನಿಂದ ೨೦೧೧-೧೨ ಸಾಲಿನವರೆಗೆ ಅನುಷ್ಠಾನಗೊಳಿಸಿರುವ ನರೇಗ ಕಾಮಾಗಾರಿಯ ಬಗ್ಗೆ ಲೋಕಾಯುಕ್ತದಲ್ಲಿ ತನಿಖೆ ಪ್ರಗತಿಯಲ್ಲಿದ್ದು ಪಿಡಿಓಗಳು ಕಡತಗಳನ್ನು ವಿಲೇವಾರಿ ಮಾಡದೆ ವಿಳಂಬದೊರಣೆ ಅನುಸರಿಸುತ್ತಿದ್ದೀರ ಎಂದು ಡಿವೈಎಸ್‌ಪಿ ರವೀಶ್ ಪ್ರಶ್ನಿಸಿದಾಗ ಕಾಮಾಗಾರಿಗಳ ಕಡತಗಳು ಕೆಲವು ಅಲಭ್ಯವಾಗಿದೆ. ನಮೂನೆಗಳ ಬದಲಾವಣೆ, ಕಾರ್ಯದ ಒತ್ತಡ, ಇತರೆ ಕಾರಣಗಳಿಂದ ಕಡತಗಳನ್ನು ಕ್ರೋಢಿಕರಿಸಲು ಹೆಚ್ಚಿನ ಸಮಯ ಬೇಕಾಗಿದೆ. ಕಡತಗಳನ್ನು ನಿಮ್ಮ ಕಚೇರಿಗೆ ತಂದು ವಿಲೇವರಿ ಮಾಡಿಸಿಕೊಳ್ಳಲು ಕಾರ್ಯದ ಒತ್ತಡ ಹಾಗು ಕಡತಗಳು ಕಳೆಯುವ ಭೀತಿ ಇದ್ದು ದಯವಿಟ್ಟು ನಮ್ಮ ಗ್ರಾ.ಪಂ ಕಾರ್ಯಲಯಕ್ಕೆ ಆಗಮಿಸಿ ಕಡತಗಳನ್ನು ಪರಿಶೀಲಿಸುವಂತೆ ಕಂದಿಕೆರೆ ಪಿಡಿಓ ಸಿದ್ದರಾಮಣ್ಣ ಮನವಿ ಮಾಡಿದಾಗ ಲೋಕಾಯುಕ್ತರು ಇದಕ್ಕೆ ಸಮ್ಮತಿಸಿದರು.
ಕುಂದು ಕೊರತೆ ಸಭೆಯಲ್ಲಿ ಕೇವಲ ಆರು ದೂರುಗಳು ದಾಖಲಾಗುವ ಮೂಲಕ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ವ್ಯಾಪಕ ಪ್ರಚಾರದ ಕೊರತೆಯಿಂದ ದೂರುಗಳು ದಾಖಲಾಗಿಲ್ಲ. ಹಿಂದಿನ ದೂರುಗಳ ಬಗ್ಗೆ ಯಾವುದೇ ವಿಚಾರಣೆಯನ್ನು ನಡೆಸದೆ ಲೋಕಾಯುಕ್ತರು ತೆರಳಿದ್ದಾರೆಂದು ದೂರುದಾರರು ಬೇಸರ ವ್ಯಕ್ತಪಡಿಸಿದರು. ಇಓ ವಸಂತ್‌ಕುಮಾರ್ ಗೈರು ಹಾಜರಿಯನ್ನು ಪ್ರಶ್ನಿಸಲಾಯಿತು. ತಹಸೀಲ್ದಾರ್ ತೇಜಸ್ವಿನಿ, ಲೋಕಾಯುಕ್ತ ನಿರೀಕ್ಷಕ ಸತ್ಯನಾರಾಯಣ್, ಅಬಕಾರಿ ನಿರೀಕ್ಷಕ ಗಂಗರಾಜು, ಪಿಎಸ್‌ಐ ಗಣೇಶ್, ಎಇಇ ಸೋಮಶೇಖರ್, ರಾಜಶೇಖರ್, ಮುಂತಾದವರಿದ್ದರು.