ಕೊಬ್ಬರಿ ಹಾಗೂ ರಾಗಿ ಬೆಳೆಗಾರರ ನೆರವಿಗೆ ಬರುವಂತೆ ಸರ್ಕಾರಕ್ಕೆ ಆಗ್ರಹ: ಪ್ರತಿಭಟನೆ
ತಿಪಟೂರು:ಕೊಬ್ಬರಿಯ ಬೆಲೆ ಕುಸಿಯುತ್ತಿರುವ ಸಂದರ್ಭದಲ್ಲಿ ಹಾಗೂ ಅವೈಜ್ಞಾನಿಕವಾಗಿ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸುತ್ತಿರುವ ಬಗ್ಗೆ ಸೂಕ್ತ ಕ್ರಮ ಕೈಗೊಂಡು ರೈತರ ನೆರವಿಗೆ ಬರುವಂತೆ ಹಾಗೂ ಸಣ್ಣ ಮತ್ತು ಅತೀಸಣ್ಣ ಹಿಡುವಳಿದಾರರೆಂದು ವರ್ಗೀಕರಿಸದೆ ರಾಗಿ ಬೆಳೆದ ಎಲ್ಲಾ ರೈತರಿಂದ ಯಾವ ಮಿತಿಯಿಲ್ಲದೆ ರಾಗಿ ಖರೀದಿಸಲು ಕ್ರಮ ವಹಿಸುವಂತೆ ಆಗ್ರಹಿಸಿ ತಿಪಟೂರಿನ ಕಾಂಗ್ರೆಸ್ ಮುಖಂಡ ಸಿ.ಬಿ. ಶಶಿಧರ್ ಟೂಡಾ ಅವರು ತಮ್ಮ ನೂರಾರು ಬೆಂಬಲಿಗರೊAದಿಗೆ ಬುಧವಾರ ಬೆಳಗಾವಿಗೆ ಆಗಮಿಸಿ ಸುವರ್ಣ ವಿಧಾನಸೌಧದ ಎದುರು ಪ್ರತಿಭಟನೆ ಮಾಡಿ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವರಾದ ಸನ್ಮಾನ್ಯ ಶ್ರೀ ಕೋಟಾ ಶ್ರೀನಿವಾಸ ಪೂಜಾರಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.ತಿಪಟೂರು ಹಾಗು ಸುತ್ತಮುತ್ತಲಿನ ಜಿಲ್ಲೆಯ ರೈತರು ತೆಂಗನ್ನು ಹೆಚ್ಚು ಬೆಳೆಯುತ್ತಾರೆ. ಇದರಲ್ಲಿ ತಿಪಟೂರು ತಾಲ್ಲೂಕಿನ ರೈತರಿಗೆ ಸಂಪೂರ್ಣವಾಗಿ ತೆಂಗು ಆರ್ಥಿಕ ಬೆಳೆ ಹಾಗೂ ಅದೇ ಜೀವನಾಧಾರವಾಗಿದೆ. ರೈತರು ಬಲಿತ ತೆಂಗಿನ ಕಾಯಿಯಿಂದ ವಿಶ್ವದಲ್ಲೇ ಅತೀ ವಿಶಿಷ್ಟವಾದ ಉಂಡೆ ಒಣ ಕೊಬ್ಬರಿ ತಯಾರಿಸುತ್ತಾರೆ.ಇತ್ತೀಚಿನ ದಿನಗಳಲ್ಲಿ ಹವಾಮಾನ ವೈಪರಿತ್ಯದಿಂದಾಗಿ ಅಧಿಕ ಮಳೆಯಾಗಿ ಹಾಗೂ ಪ್ರಸ್ತುತ ಚಳಿಗಾಲ ಪ್ರಾರಂಭವಾಗಿರುವುದರಿAದ ವಾತಾವರಣದಲ್ಲಿ ತೇವಾಂಶ ಹೆಚ್ಚಾಗಿರುವುದರಿಂದ ನೈಸರ್ಗಿಕವಾಗಿ ೯ ತಿಂಗಳಲ್ಲಿ ತಯಾರಾಗುವ ಉಂಡೆ ಕೊಬ್ಬರಿಯು ೧೪-೧೫ ತಿಂಗಳಾದರೂ ತಯಾರಾಗದೆ ಸಾಕಷ್ಟು ಪ್ರಮಾಣದಲ್ಲಿ ತೇವಾಂಶದಿAದ ಕೂಡಿರುತ್ತದೆ. ಶೇಖರಿಸಿದ ತೆಂಗಿನಕಾಯಿಯನ್ನು ಕೊಬ್ಬರಿಯನ್ನಾಗಿಸಲು ಇನ್ನಷ್ಟು ದಿನ ಶೇಖರಣೆ ಮುಂದುವರಿಸಿದರೆ ಪ್ರಸ್ತುತ ಕಟಾವು ಮಾಡಿದ ತೆಂಗಿನಕಾಯಿಯನ್ನು ಶೇಖರಿಸಲು ರೈತರ ಬಳಿ ಸಾಕಷ್ಟು ಅಟ್ಟಗಳ ಲಭ್ಯತೆ ಇರುವುದಿಲ್ಲ. ಆದಕಾರಣ ತೇವಾಂಶವಿರುವ ಕೊಬ್ಬರಿಯನ್ನೇ ಮಾರುಕಟ್ಟೆಗೆ ತಂದು ಮಾರಾಟ ಮಾಡುವ ಅನಿವಾರ್ಯತೆ ಉಂಟಾಗಿ ಕಡಿಮೆ ಬೆಲೆಗೆ ಮಾರಾಟ ಮಾಡುವ ಪರಿಸ್ಥಿತಿ ಬಂದೊದಗಿದೆ ಎಂದು ಅವರು ಸರಕಾದ ಗಮನಕ್ಕೆ ತಂದರು.ಕ್ವಿಂಟಾಲ್ ಉಂಡೆ ಕೊಬ್ಬರಿ ಈವರೆಗೂ ಮಾರುಕಟ್ಟೆಯಲ್ಲಿ ರೂ.೧೭,೦೦೦ ರಿಂದ ೧೮,೦೦೦ ಕ್ಕೆ ಮಾರಾಟವಾಗುತ್ತಿತ್ತು. ಆದರೆ ಇದೀಗ ಮಾರುಕಟ್ಟೆಯಲ್ಲಿ ಕೊಬ್ಬರಿ ರೂ. ೧೧,೫೦೦ ಮಾರಾಟವಾಗುತ್ತಿದ್ದು, ಇದರಿಂದ ರೈತರಿಗೆ ಭಾರೀ ನಷ್ಟವಾಗುತ್ತಿದೆ.ಈ ಎಲ್ಲ ಅಂಶಗಳನ್ನು ಪರಿಗಣಿಸಿ ಅತಿವೃಷ್ಟಿಯಂತಹ ನೈಸರ್ಗಿಕ ವಿಕೋಪದಿಂದ ಗುಣಮಟ್ಟ ಕಳೆದುಕೊಂಡಿರುವ ಉಂಡೆ ಕೊಬ್ಬರಿಗೆ ಸರ್ಕಾರದಿಂದ ಪ್ರತಿ ಕ್ವಿಂಟಾಲ್ ಗೆ ರೂ. ೩,೦೦೦ ಪರಿಹಾರ ಮೊತ್ತವನ್ನು ಸಹಾಯಧನ ರೂಪದಲ್ಲಿ ಕೊಡಬೇಕು. ಇದರಿಂದ ಬೆಲೆ ಸಿಗದೆ ಕಂಗಾಲಾಗಿರುವ ರೈತರಿಗೆ ಕೊಂಚ ಮಟ್ಟಿಗಾದರೂ ಆಧಾರ ಸಿಗಲಿದೆ ಎಂದು ಟೂಡಾ ಶಶಿಧರ್ ಮನವಿ ಮಾಡಿದರು.೨೦೧೩-೧೪ ರಲ್ಲಿ ಕೊಬ್ಬರಿ ಬೆಲೆ ಕುಸಿತ ಕಂಡಾಗ ಅಂದಿನ ಕಾಂಗ್ರೆಸ್ ಸರ್ಕಾರ ಕೊಬ್ಬರಿ ಬೆಳೆಗಾರರ ಬೆನ್ನಿಗೆ ನಿಂತು ರೂ. ೧,೦೦೦ ಸಹಾಯಧನ ಘೋಷಿಸಿತ್ತು. ಕೇಂದ್ರ ಸರ್ಕಾರ ಹೊಸ ಮಾರುಕಟ್ಟೆ ಕಾಯ್ದೆ ಜಾರಿಗೆ ತಂದ ನಂತರ ಮಾರುಕಟ್ಟೆ ಪ್ರಾಂಗಣದಲ್ಲಿ ಉತ್ಪನ್ನ ಖರೀದಿಸುವ ವ್ಯಾಪಾರಸ್ಥರ ಸಂಖ್ಯೆ ತೀರ ಕ್ಷೀಣಿಸಿ ಮಾರುಕಟ್ಟೆಗೆ ಆವಕ ಕಡಿಮೆಯಾಗಿ ಮಾರುಕಟ್ಟೆಗಳು ನಶಿಸುತ್ತಿವೆ. ಹೀಗಾಗಿ ಉಂಡೆ ಕೊಬ್ಬರಿ ಬೆಳೆಗಾರರು ಕಂಗಾಲಾಗಿದ್ದಾರೆ, ಈ ಕೂಡಲೇ ಸರ್ಕಾರ ಬೆಳೆಗಾರರ ಬೆನ್ನೆಲುಬಾಗಿ ನಿಲ್ಲಬೇಕೆಂದು ಸರಕಾರಕ್ಕೆ ಆಗ್ರಹಿಸಿದರು.ಇದೇ ವೇಳೆ ರಾಗಿ ಬೆಳೆಗಾರರ ಸಮಸ್ಯೆಗಳಿಗೂ ಸ್ಪಂದಿಸಲು ಆಗ್ರಹಿಸಿರುವ ಟೂಡಾ ಶಶಿಧರ, ಸರಕಾರ ಪ್ರಸ್ತುತ ಸಣ್ಣ ಮತ್ತು ಅತೀಸಣ್ಣ ಹಿಡುವಳಿದಾರರಿಂದ ಮಾತ್ರ ರಾಗಿ ಖರೀದಿಸುತ್ತಿದೆ. ರಾಗಿ ಬೆಳೆದ ಎಲ್ಲಾ ರೈತರಿಂದಲೂ ಸರಕಾರ ಯಾವುದೇ ಮಿತಿಯಿಲ್ಲದೇ ಬೆಳೆದ ಪೂರ್ಣ ಪ್ರಮಾಣದ ಉತ್ಪನ್ನವನ್ನು ಖರೀದಿಸಬೇಕೆಂದು ಎಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ಹಾಲ್ಕುರಿಕೆ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಉಮಾಮಹೇಶ್, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ದಿನೇಶ್ ಅನಿವಾಳ, ಬಳನೇರು ಗ್ರಾಮ ಪಂಚಾಯತಿಯ ಸ್ವಾಮಿ, ಸಾರ್ಥವಳ್ಳಿ ಗ್ರಾಮ ಪಂಚಾಯಿತಿಯ ನವೀನ್, ಮಣವಿನಕೆರೆ ಗ್ರಾಮ ಪಂಚಾಯಿತಿಯ ಕಿರಣ್, ಬಳುವನೇರಲು ಗ್ರಾಮ ಪಂಚಾಯಿತಿಯ ಸಿದ್ದಮಲ್ಲಪ್ಪ, ರೈತ ಹೋರಾಟಗಾರ ಬಸ್ತಿಹಳ್ಳಿ ರಾಜಣ್ಣ ಹಾಗೂ ಅನೇಕ ರೈತರು ಭಾಗವಹಿಸಿದ್ದರು.