 : ಸೆ.27ರಂದು ಮೆಮು ರೈಲು ಲೋಕಾರ್ಪಣೆ
ತುಮಕೂರು:ತುಮಕೂರಿನ ದೈನಂದಿನ ಪ್ರಯಾಣಿಕರ ಅನುಕೂಲಕ್ಕಾಗಿ ಮೆಮು ರೈಲನ್ನು ಸಚಿವ ವಿ. ಸೋಮಣ್ಣ ಸೆ.27ರಂದು ಲೋಕಾರ್ಪಣೆ ಮಾಡಲಿದ್ದಾರೆ ಎಂದು ಬಿಜೆಪಿ ಮತ್ತು ಜೆಡಿಎಸ್ ಮುಖಂಡರ ಜಂಟಿ ಪತ್ರಿಕಾಗೋಷ್ಠಿ ಯಲ್ಲಿ ತಿಳಿಸಿದರು.
ಶಾಸಕ ಜ್ಯೋತಿಗಣೇಶ್ ಮಾತನಾಡಿ, ಪ್ರತಿನಿತ್ಯ ತುಮಕೂರಿನಿಂದ ಬೆಂಗಳೂರಿಗೆ ನಾನಾ ಕೆಲಸ ಕಾರ್ಯಗಳಿಗೆ ಪ್ರಯಾಣಿಸುವ ಪ್ರಯಾಣಿಕರು ಹಾಗೂ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದ್ದನ್ನು ಮನಗಂಡ ಸಚಿವ ವಿ. ಸೋಮಣ್ಣ, ಸಂಸದರಾಗಿ, ಮಂತ್ರಿಗಳಾದ ಕೇವಲ 3 ತಿಂಗಳಲ್ಲೇ ಈ ಸಮಸ್ಯೆಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ತುಮಕೂರು-ಯಶವಂತಪುರಕ್ಕೆ ಪ್ರತಿನಿತ್ಯ ಎರಡು ಬಾರಿ ಸಂಚರಿಸುವ ಹೊಸ ಮೆಮು ರೈಲುಗಳ ಸಂಚಾರಕ್ಕೆ ನಗರದ ರೈಲ್ವೆ ನಿಲ್ದಾಣದಲ್ಲಿ ಹಸಿರು ನಿಶಾನೆ ತೋರಲಿದ್ದಾರೆ ಎಂದು ಹೇಳಿದರು.
ಈ ಹೊಸ ಮೆಮು ರೈಲು ಭಾನುವಾರ ಹೊರತುಪಡಿಸಿ ವಾರದ 6 ದಿನ ಸಂಚರಿಸಲಿದ್ದು, ತುಮಕೂರಿನಿಂದ ಬೆಳಿಗ್ಗೆ 8.45ಕ್ಕೆ ಹೊರಟು 10.25ಕ್ಕೆ ಯಶವಂತಪುರ ತಲುಪಲಿದೆ. ಮತ್ತೆ ಈ ರೈಲು ಸಂಜೆ 5.40ಕ್ಕೆ ಬೆಂಗಳೂರಿನ ಯಶವಂತ ಪುರದಿಂದ ಹೊರಟು 7.5ಕ್ಕೆ ತುಮಕೂರು ತಲುಪಲಿದೆ ಎಂದು ಅವರು ಮಾಹಿತಿ ನೀಡಿದರು.
ತುಮಕೂರು ರೈಲ್ವೆ ನಿಲ್ದಾಣದಲ್ಲಿ ವಂದೇಭಾರತ್ ರೈಲು ನಿಲುಗಡೆಯಾಗುತ್ತಿರಲಿಲ್ಲ. ಸೋಮಣ್ಣ ಮಂತ್ರಿಯಾದ ಬಳಿಕ ಪ್ರಧಾನಮಂತ್ರಿಗಳ ಬಳಿ ಚರ್ಚಿಸಿ ಒಪ್ಪಿಗೆ ಪಡೆದು ವಂದೇಭಾರತ್ ರೈಲು ನಿಲುಗಡೆಗೂ ಕ್ರಮ ಕೈಗೊಂಡಿ ದ್ದಾರೆ ಎಂದರು.
ಇದುವರೆಗೂ ತುಮಕೂರು ರೈಲು ನಿಲ್ದಾಣದ ಅಭಿವೃದ್ಧಿಗೆ ಕೇವಲ 18-20 ಕೋಟಿ ರೂ. ಮಂಜೂರಾಗುತ್ತಿತ್ತು. ಆದರೆ ಸೋಮಣ್ಣ ಅವರು ರೈಲ್ವೆ ಸಚಿವರಾದ ಬಳಿಕ 100 ಕೋಟಿಗೂ ಹೆಚ್ಚು ಅನುದಾನದಲ್ಲಿ ರೈಲ್ವೆ ನಿಲ್ದಾಣ ಮೇಲ್ದರ್ಜೇಗೇರಿಸಲು ಕ್ರಮ ಕೈಗೊಂಡಿದ್ದಾರೆ. ಇದು ಕ್ಷೇತ್ರವನ್ನು ಅಭಿವೃದ್ಧಿಪಥದತ್ತ ಕೊಂಡೊಯ್ಯುವ ಧ್ಯೋತಕ ವಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿಶಂಕರ್ ಹೆಬ್ಬಾಕ, ಜೆಡಿಎಸ್ ಮುಖಂಡ ಟಿ.ಆರ್. ನಾಗರಾಜು, ಜಿ.ಪಂ. ಮಾಜಿ ಸದಸ್ಯ ವೈ.ಹೆಚ್.ಹುಚ್ಚಯ್ಯ ಮತ್ತಿತರರು ಉಪಸ್ಥಿತರಿದ್ದರು.