ಶಿಡ್ಲಘಟ್ಟ ಕಾಂಗ್ರೆಸ್ ಅಭ್ಯರ್ಥಿ, ಎಂಎಲ್‌ಸಿ ಶಂಕರ ಕುಟುಂಬಸ್ಥರ ಮೇಲೆ ಎಫ್‌ಐಆರ್
ಬೆಂಗಳೂರು:ಬಡಾವಣೆ ನಿರ್ಮಿಸಿ, ನಿವೇಶನಗಳ ಹಂಚಿಕೆ ಮಾಡುವಲ್ಲಿ ಪಾಲುದಾರರಿಗೆ ಮೋಸ ಮಾಡಿದ್ದಾರೆ ಎಂಬ ಆರೋಪದಡಿಯಲ್ಲಿ ಶಿಡ್ಲಘಟ್ಟದ ಸಂಭಾವ್ಯ ಕಾಂಗ್ರೆೆಸ್ ಅಭ್ಯರ್ಥಿ ರಾಜೀವ್ ಗೌಡ ಹಾಗೂ ವಿಧಾನ ಪರಿಷತ್ ಸದಸ್ಯ ಆರ್.ಶಂಕರ್ ಪತ್ನಿ ಹಾಗೂ ಪುತ್ರನ ವಿರುದ್ಧ ದೂರು ದಾಖಲಾಗಿದೆ.
ರಾಜೀವ್ ಗೌಡ, ಶಂಕರ್ ಪತ್ನಿ ಧನಲಕ್ಷ್ಮಿ ಹಾಗೂ ಪುತ್ರ ಜ್ಯೋತಿರ್ ತೇಜೋಮಯಿ ಹಾಗೂ ಪ್ರಭಾವತಿ ಎಂಬುವವರು ಸೇರಿ ಬೆಂಗಳೂರು ಪೂರ್ವ ತಾಲೂಕು ವ್ಯಾಪ್ತಿಯ ಬಿದರಹಳ್ಳಿ ಸಮೀಪದ ಬೊಮ್ಮನಹಳ್ಳಿ ಎಂಬಲ್ಲಿ ನಾಲ್ಕು ಎಕರೆ ಜಾಗ ಖರೀದಿಸಿ ಲೇಔಟ್ ನಿರ್ಮಾಣ ಮಾಡಿದ್ದರು.
ಲೇಔಟ್‌ನ ನಿವೇಶನಗಳ ಹಂಚಿಕೆ ಮತ್ತು ಮಾರಾಟದಲ್ಲಿ ನಾಲ್ವರ ನಡುವೆ ಸಮನ್ವಯ ಹಾಗೂ ಸಮಾನ ಹಂಚಿಕೆಯ ಮೂಲಕ ಮಾರಾಟ ಮಾಡುವ ಷರತ್ತುಗಳನ್ನು ವಿಧಿಸಿಕೊಂಡಿದ್ದರು. ಆದರೆ, ನಾಲ್ಕನೇ ಪಾಲುದಾರರಿಗೆ ಯಾವುದೇ ಮಾಹಿತಿಯೇ ಇಲ್ಲದೆ ಕೆಲವು ನಿವೇಶನಗಳ ಮಾರಾಟವನ್ನು ಮೇಲ್ಕಂಡವರು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಸಂಬಂಧ ನಾಲ್ಕನೇ ಪಾಲುದಾರರಾದ ಪ್ರಭಾವತಿ ಎಂಬುವವರು, ಇಂದಿರಾ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಎಫ್‌ಐಆರ್ ದಾಖಲಿಸಲಾಗಿದೆ. ದೂರಿನಲ್ಲಿ ಕಾನೂನಿನ ಮಿತಿಯನ್ನು ಮೀರಿ, ತಮ್ಮ ಗಮನಕ್ಕೆ ಬಾರದೆ 23 ನಿವೇಶನಗಳನ್ನು ಮಾರಾಟ ಮಾಡಲಾಗಿದೆ ಎಂದು ಉಲ್ಲೇಖಿಸಲಾಗಿದೆ.
ಆ ಮೂಲಕ ವಿಧಾನ ಪರಿಷತ್ ಸದಸ್ಯರ ಕುಟುಂಬ ಹಾಗೂ ಕಾಂಗ್ರೆಸ್‌ನಿಂದ ಶಿಡ್ಲಘಟ್ಟ ಕ್ಷೇತ್ರದ ವಿಧಾನಸಭೆ ಚುನಾವಣೆಗೆ ಟಿಕೆಟ್ ಆಕಾಂಕ್ಷಿಯಾಗಿರುವ ರಾಜಣ್ಣ ಆಲಿಯಾಸ್ ರಾಜೀವ್ ಗೌಡ ಎಂಬುವವರು ನಮಗೆ ಮೋಸ ಮಾಡಿದ್ದಾರೆ ಎಂದು ಪಾಲುದಾರ ಮಹಿಳೆ ಆರೋಪಿಸಿದ್ದಾರೆ.