ಪ್ರಾರಂಭದಲ್ಲಿಯೇ ಕ್ಯಾನ್ಸರ್‌ ಪತ್ತೆ ಹಚ್ಚಿ ಇಬ್ಬರ ಪ್ರಾಣ ಉಳಿಸಿದ ವೈದ್ಯರು
ಬೆಂಗಳೂರು:ಸೂಕ್ತ ಸಮಯದಲ್ಲಿ ಕ್ಯಾನ್ಸರ್‌ ಪರೀಕ್ಷೆ ನಡೆಸಿ ಇಬ್ಬರ ಯುವಕರ ಪ್ರಾಣ ಉಳಿಸಿರುವ ಘಟನೆ ಕನ್ನಿಂಗ್‌ಹ್ಯಾಮ್‌ ಫೋರ್ಟಿಸ್‌ ಆಸ್ಪತ್ರೆಯಲ್ಲಿ ನಡೆದಿದೆ.
ವಿಶ್ವ ಕ್ಯಾನ್ಸರ್‌ ವಾರದ ಅಂಗವಾಗಿ ಈ ಪ್ರಕರಣಗಳ ಕುರಿತು ಮಾಹಿತಿ ನೀಡಿದ ಯುರೋ-ಗೈನಕಾಲಜಿಸ್ಟ್‌ ಡಾ. ಶಾಕಿರ್ ತಬ್ರೇಜ್, ಕ್ಯಾನ್ಸರ್‌ನನ್ನು ಆರಂಭದಲ್ಲಿಯೇ ಪತ್ತೆ ಹಚ್ಚುವುದರಿಂದ ಎಂಥಹ ಕ್ಯಾನ್ಸರ್‌ ಆದರೂ ಗುಣಪಡಿಸಬಹುದು. ಇತ್ತೀಚೆಗೆ ಇಂಥದ್ದೇ ಎರಡು ಪ್ರಕರಣಗಳನ್ನು ನಮ್ಮ ಆಸ್ಪತ್ರೆಯಲ್ಲಿ ಕಂಡಿದ್ದೇವೆ. ಮೊದಲನೇ ಪ್ರಕರಣದಲ್ಲಿ, ಯುವಕನ ಮೂತ್ರದಲ್ಲಿ ರಕ್ತ ಕಂಡುಬಂದಿದ್ದ ಹಿನ್ನೆಲೆಯಲ್ಲಿ ಆ ಯುವಕ ಆಸ್ಪತ್ರೆಗೆ ದಾಖಲಾಗಿದ್ದರು. ಹಲವು ಪರೀಕ್ಷೆ ನಡೆಸಿದ ಬಳಿಕ ಆ ಯುವಕನಿಗೆ ಮೂತ್ರಕೋಶದ ಕ್ಯಾನ್ಸರ್‌ ಪ್ರಾರಂಭವಾಗುತ್ತಿರುವುದು ಕಂಡು ಬಂತು.
ಮೂತ್ರಕೋಶದಲ್ಲಿ ದೊಡ್ಡ ಗಡ್ಡೆಯೊಂದು ಬೆಳೆದಿತ್ತು. ಇದನ್ನು ನಿರ್ಲಕ್ಷಿಸಿ ಹಾಗೇ ಬಿಟ್ಟಿದ್ದರೆ ಇದನ್ನು ಗುಣಪಡಿಸುವುದು ಅಸಾಧ್ಯವಾಗಿತ್ತು. ಆದರೆ, ವೈದ್ಯರ ಪ್ರಜ್ಞೆಯಿಂದ ಕ್ಯಾನ್ಸರ್‌ನನ್ನು ಪತ್ತೆ ಹಚ್ಚಿ, ಕ್ಯಾನ್ಸರ್‌ ಇತರೆ ಅಂಗಾಂಗಳಿಗೆ ಹರಡದಂತೆ ಶಸ್ತ್ರಚಿಕಿತ್ಸೆ ನಡೆಸಿ ಮೂತ್ರಕೋಶವನ್ನು ತೆಗೆದುಹಾಕಲಾಯಿತು. ಈ ಮೂಲಕ ಯುವಕನ ಪ್ರಾಣ ಉಳಿಯಿತು ಎಂದರು. ಎರಡನೇ ಪ್ರಕರಣದಲ್ಲಿ, ಸಾಮಾನ್ಯ ಆರೋಗ್ಯ ತಪಾಸಣೆಗೆ ಬಂದು 30 ವರ್ಷದ ಯುವಕನನ್ನು ಅಲ್ಟ್ರಾಸೌಂಡ್‌ಗೆ ಒಳಪಡಿಸಿದ ಬಳಿಕ ಮೂತ್ರಪಿಂಡದ ಕ್ಯಾನ್ಸರ್‌ ಅಭಿವೃದ್ಧಿಯಾಗಿರುವುದು ಗಮನಕ್ಕೆ ಬಂತು.
ಕೂಡಲೇ ಶಸ್ತ್ರಚಿಕಿತ್ಸೆ ನಡೆಸಿ ಯುವಕನ ಪ್ರಾಣ ಉಳಿಸಲಾಯಿತು. ಹೀಗೆ ಕ್ಯಾನ್ಸರ್‌ನನ್ನು ಆರಂಭದಲ್ಲಿಯೇ ಪತ್ತೆ ಹಚ್ಚುವುದರಿಂದ ಪ್ರಾಣಕ್ಕೆ ಹಾನಿ ಯಾಗದಂತೆ ಶಸ್ತ್ರಚಿಕಿತ್ಸೆ ನಡೆಸಿ ಗುಣಪಡಿಸಬಹುದು. ಇಂದಿನ ಕಾಲದಲ್ಲಿ ವೈದ್ಯಕೀಯ ಲೋಕ ಬೆಳೆದಿದ್ದು, ಎಲ್ಲಾ ರೀತಿಯ ಆರಂಭಿಕ ಕ್ಯಾನ್ಸರ್‌ಗೂ ಚಿಕಿತ್ಸೆ ಲಭ್ಯವಿದೆ. ಕ್ಯಾನ್ಸರ್‌ನ ಯಾವುದೇ ರೋಗ ಲಕ್ಷಣಗಳು ಅಥವಾ ಕುಟುಂಬದ ಇತಿಹಾದ ಇದ್ದಲ್ಲಿ ತಡ ಮಾಡದೇ ಸಂಬಂಧಪಟ್ಟ ಪರೀಕ್ಷೆ ಮಾಡಿಸಿಕೊಳ್ಳುವುದು ಸೂಕ್ತ ಎಂದು ಸಲಹೆ ನೀಡಿದರು.