ಶ್ರೀಮತಿ ವೀಣಾ ಆರ್ ಧ್ರುವನಾರಾಯಣ್ ವಿಧಿವಶ
ಬೆಂಗಳೂರು:ದಿವಂಗತ ಆರ್.ಧ್ರುವನಾರಾಯಣ್ ರವರ ಪತ್ನಿ ಶ್ರೀಮತಿ ವೀಣಾ ಆರ್ ಧ್ರುವನಾರಾಯಣ್ ವಿಧಿವಶರಾಗಿದ್ದಾರೆ.
ಮಾರ್ಚ್ 11ರಂದು ನಿಧನರಾದ ಕಾಂಗ್ರೆಸ್ ಕಾರ್ಯಧ್ಯಕ್ಷ ಆರ್. ಧ್ರುವ ನಾರಾಯಣ ಅವರ ಪತ್ನಿ ವೀಣಾ ಅವರು ಅನಾರೋಗ್ಯ ದಿಂದ ಬಳಲುತ್ತಿದ್ದರು. ಪತಿ ಸಾವಿನ ಕೊರಗಿನಲ್ಲಿದ್ದ ವೀಣಾ ಅವರು ಜೀವನದ ಪಯಣ ಮುಗಿಸಿದ್ದಾರೆ.
ಅಜಾತಶತ್ರು ಧ್ರುವನಾರಾಯಣ ಅವರು ಮಾರ್ಚ್ 11ರಂದು ಹೃದಯಾಘಾತದಿಂದ ಮೃತಪಟ್ಟರು. ಅದಾಗಿ ತಿಂಗಳ ಒಳಗೇ ಆ ಮನೆಯಲ್ಲಿ ಮತ್ತೊಂದು ಮೃತ್ಯು ಸಂಭವಿಸಿದೆ. ಧ್ರುವ ನಾರಾಯಣ ಅವರ ಸಾವಿಗೆ ಇಡೀ ನಾಡು ಕಂಬನಿ ಮಿಡಿದಿತ್ತು. ಅಕಾಲಿಕ ಸಾವು ಅವರ ಕುಟುಂಬವನ್ನಂತೂ ಇನ್ನಷ್ಟು ಕಂಗೆಡಿಸಿತ್ತು.
ಮೊದಲೇ ಅನಾರೋಗ್ಯವನ್ನು ಎದುರಿಸುತ್ತಿದ್ದ ವೀಣಾ ಅವರು ಪತಿಯ ಸಾವಿನ ಸಂದರ್ಭ ದಲ್ಲಿ ತುಂಬಾ ನೋವು ಅನುಭವಿಸಿ ದ್ದರು. ಅದಾದ ಬಳಿ ಸಾಕಷ್ಟು ಮಾನಸಿಕವಾಗಿ ಕುಗ್ಗಿದ್ದರು. ಇದೀಗ ಅವರ ಸಾವೇ ಸಂಭವಿಸಿದೆ. ವೀಣಾ ಅವರು ಮಕ್ಕಳಾದ ದರ್ಶನ್, ಧೀರನ್ ಅವರನ್ನು ಅಗಲಿದ್ದಾರೆ.
ಆರ್. ಧ್ರುವನಾರಾಯಣ ದೀನ ದಲಿತರ ಏಳಿಗೆಗಾಗಿ ಶ್ರಮಿಸಿದ ಧೀಮಂತ ನಾಯಕ. 2004ರ ಕರ್ನಾಟಕ ವಿಧಾನಸಭಾ ಚುನಾವಣೆ ಚಾಮರಾಜನಗರ ಜಿಲ್ಲೆಯ ಸಂತೇಮರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಅಖಾಡಕ್ಕೆ ಧುಮುಕಿದ್ದ ಧ್ರುವನಾರಾಯಣ, ಆ ಚುನಾವಣೆಯಲ್ಲಿ ಒಂದೇ ಮತದ ಅಂತರದಲ್ಲಿ ಗೆದ್ದು ಬಂದಿದ್ದರು. ದೇಶದ ಇತಿಹಾಸದಲ್ಲೇ ಹೀಗಾಗಿದ್ದು ಅದೇ ಮೊದಲು.