ಎಸ್‌ಎಸ್ ಎಲ್ ಸಿ: ಉತ್ತರ ಪತ್ರಿಕೆಯ ಮೌಲ್ಯಮಾಪನ ಕಾರ್ಯ ಆರಂಭ
ಬೆಂಗಳೂರು :ರಾಜ್ಯಾದ್ಯಂತ 236 ಮೌಲ್ಯಮಾಪನ ಕೇಂದ್ರಗಳಲ್ಲಿ ಎಸ್‌ಎಸ್ ಎಲ್ ಸಿ ಪರೀಕ್ಷೆಯ ಉತ್ತರ ಪತ್ರಿಕೆಯ ಮೌಲ್ಯಮಾಪನ ಕಾರ್ಯ ಆರಂಭವಾಗಿದ್ದು, ಮೇ ತಿಂಗಳ ಮೊದಲ ವಾರದಲ್ಲೇ ಫಲಿತಾಂಶ ಪ್ರಕಟವಾಗುವ ಸಾಧ್ಯತೆ ಇದೆ.
ಮಾರ್ಚ್ 31 ರಿಂದ ಆರಂಭವಾಗಿದ್ದ ಎಸ್‌ಎಸ್ ಎಲ್ ಸಿ ಪರೀಕ್ಷೆಗಳು ಏಪ್ರಿಲ್ 15 ಕ್ಕೆ ಮುಕ್ತಾಯಗೊಂಡಿದ್ದವು.
ಎಸ್‌ಎಸ್ ಎಲ್ ಸಿ ಪರೀಕ್ಷೆಯನ್ನು 8.6 ಲಕ್ಷ ವಿದ್ಯಾರ್ಥಿಗಳು ಬರೆದಿದ್ದು, ಅಂದಾಜು 45 ಲಕ್ಷ ಉತ್ತರ ಪತ್ರಿಕೆಗಳನ್ನು ಮೌಲ್ಯ ಮಾಪನ ಮಾಡಬೇಕಿದೆ. ಮೌಲ್ಯಮಾಪನ ಕಾರ್ಯವನ್ನು ಮುಂದಿನ 10-11 ದಿನಗಳಲ್ಲಿ ಪೂರ್ಣಗೊಳಿಸುವ ಗುರಿ ಹೊಂದಿದ್ದು, ಮೇ. ಮೊದಲ ವಾರ ಫಲಿತಾಂಶ ಪ್ರಕಟವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಎಸ್‌ಎಸ್ ಎಲ್ ಸಿ ಮೌಲ್ಯಮಾಪನಕ್ಕೆ 62 ಸಾವಿರ ಶಿಕ್ಷಕರನ್ನು ನಿಯೋಜನೆ ಮಾಡಲಾಗಿದೆ. ಬಹುತೇಕ ಮೌಲ್ಯಮಾಪಕರು ಮೊದಲ ದಿನ ಹಾಜರಾಗಿದ್ದು, ಕೆಲವರಷ್ಟೇ ಗೈರಾಗಿದ್ದರು ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.