ಪೋಷಕರು ಮಕ್ಕಳ ಬಗ್ಗೆ ಗಮನಹರಿಸಬೇಕು: ಬಿಇಒ ಹನುಮಾನಾಯ್ಕ್
ತುಮಕೂರು:ಪೋಷಕರು ಮಕ್ಕಳ ಬಗ್ಗೆ ಗಮನ ಹರಿಸಬೇಕೆಂದು ಬಿಇಒ ಹನುಮಾನಾಯ್ಕ್ ಕರೆ ನೀಡಿದರು.
ತಾಲೂಕಿನ ನರುಗನಹಳ್ಳಿ ಕಟ್ಟೆ ಬಳಿ ನೂತನವಾಗಿ ಆರಂಭಿಸಲಾಗಿರುವ ಶ್ರೀ ಸದ್ವಿದ್ಯಾ ಪರಿಕಲ್ಪನೆ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಮೊದಲ ಶೈಕ್ಷಣಿಕ ವರ್ಷದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಮಕ್ಕಳನ್ನು ಯಾವುದೇ ಶಾಲೆಗೆ ಕಳುಹಿಸಿದರೂ ಮನೆಯಲ್ಲಿ ಪೋಷಕರು ಮಕ್ಕಳು ಬಗ್ಗೆ ಗಮನ ಹರಿಸದಿದ್ದರೆ ಯಾವುದೇ ರೀತಿಯ ಪ್ರಯೋಜನ ವಾಗುವುದಿಲ್ಲ. ಶಾಲೆಯಿಂದ ಮಕ್ಕಳು ಮನೆಗೆ ಬಂದ ನಂತರ ಶಾಲೆಯಲ್ಲಿ ಕಲಿತಿರುವ ಶಿಕ್ಷಣದ ಬಗ್ಗೆ ವಿಚಾರಿಸುವುದರ ಜತೆಗೆ ಅದರ ಪರಿಶೀಲಿಸು ವಂತೆಯೂ ಸಲಹೆ ನೀಡಿದರು.
ನಿವೃತ್ತ ಪ್ರಾಂಶುಪಾಲ ಡಾ.ಗುರುಬಸಪ್ಪ ಮಾತನಾಡಿ, ಮನೆಯಲ್ಲಿ ಪುಸ್ತಕವನ್ನು ಗಟ್ಟಿಯಾಗಿ ಓದುವಂತೆ ಮಕ್ಕಳಿಗೆ ತಿಳಿಸಬೇಕು. ಮಕ್ಕಳು ಓದುತ್ತಿರುವ ಬಗ್ಗೆ ಪೋಷಕರು ಗಮನ ಹರಿಸಿ ತಪ್ಪುಗಳನ್ನು ತಿದ್ದಿ ಹೇಳುವ ಕೆಲಸ ಮಾಡಬೇಕು. ಹೀಗೆ ಮಾಡಿದಾಗ ಮಾತ್ರ ಮಕ್ಕಳ ಶೈಕ್ಷಣಿಕ ಪ್ರಗತಿ ಸಾಧ್ಯವಾಗುತ್ತದೆ. ಕೇವಲ ಶಿಕ್ಷಕರ ಮೇಲೆ ಹೊಣೆ ಹಾಕಿ ಪೋಷಕರು ಸುಮ್ಮನಾಗಬಾರದು ಎಂದರು.
ಜಿಪಂ ಹಣಕಾಸು ಅಧಿಕಾರಿ ನರಸಿಂಹಮೂರ್ತಿ ಮಾತನಾಡಿ, ಆಗಿಂದಾಗ್ಗೆ ಪೋಷಕರು ಶಾಲೆಗಳಿಗೆ ತೆರಳಿ ತಮ್ಮ ಮಗುವಿನ ವ್ಯಾಸಂಗದ ಬಗ್ಗೆ ಗಮನ ಹರಿಸುವ ಕೆಲಸ ಮಾಡಬೇಕು. ತಮ್ಮ ದಿನನಿತ್ಯ ಕೆಲಸ ಕಾರ್ಯಗಳಲ್ಲೇ ಮಗ್ನರಾದರೆ ಸಾಲದು, ಮಕ್ಕಳ ಭವಿಷ್ಯದ ದೃಷ್ಠಿಯಿಂದ ಅವರ ಕಲಿಕೆ ಬಗ್ಗೆಯೂ ಆಸಕ್ತಿ ವಹಿಸಬೇಕು ಎಂದು ಅವರು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಶ್ರೀ ಸದ್ವಿದ್ಯಾ ಪರಿಕಲ್ಪನೆ ಶಾಲೆಯ ಅಧ್ಯಕ್ಷ ಕೆ.ಎನ್. ರಂಗಸ್ವಾಮಿ, ಪ್ರಾಂಶುಪಾಲೆ ಸೌಮ್ಯ ಜೆ., ಹಾಗೂ ಪೋಷಕರು ಉಪಸ್ಥಿತರಿದ್ದರು.