ಮಹಿಳೆಯರು ನಮಗೆ ಮತ ಹಾಕಬೇಕು: ಮುರುಳೀಧರ ಹಾಲಪ್ಪ
ಚಿಕ್ಕನಾಯಕನಹಳ್ಳಿ:ರಾಜ್ಯ ಸರಕಾರ ಶಕ್ತಿ ಯೋಜನೆಯನ್ನು ಜಾರಿಗೆ ತಂದಿದ್ದು ಪಕ್ಷ ತನ್ನ ಚುನಾವಣೆ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಎಲ್ಲಾ ಯೋಜನೆಗಳು ಕಡ್ಡಾಯವಾಗಿ ಜಾರಿಗೆ ಬರಲಿದೆ. ಇದಕ್ಕೆ ಬೆಂಬಲವಾಗಿ ಜಿ.ಪಂ, ತಾಪಂ, ಲೋಕಸಭೆ ಚುನಾವಣೆಗಳಲ್ಲಿ ಮಹಿಳೆಯರು ಕಾಂಗ್ರೆಸ್ ಪಕ್ಷಕ್ಕೆಮತ ಹಾಕಬೇಕೆಂದು ನಾನು ಬಯಸುತ್ತೇನೆ ಎಂದು ಕೆಪಿಸಿಸಿ ಕಾರ್ಯದರ್ಶಿ ಮುರುಳೀಧರ ಹಾಲಪ್ಪ ತಿಳಿಸಿದರು.
ರಾಜ್ಯ ಸರಕಾರ ಶಕ್ತಿ ಯೋಜನೆ ಜಾರಿಗೆ ತಂದ ಹಿನ್ನಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಟ್ಟಣದ ಬಸ್ ನಿಲ್ದಾಣ ದಲ್ಲಿ ಮಹಿಳೆಯರಿಗೆ ಸಿಹಿ ವಿತರಿಸಿ ಸಂಭ್ರಮಿಸಿದರು.
ಸರಕಾರಿ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅನುಕೂಲವಾಗುವ ಯೋಜನೆ ಇದಾಗಿದ್ದು ಮಹಿಳೆಯರು ಇದರ ಸದುಪಯೋಗ ಪಡೆಯಬೇಕು. ನುಡಿದಂತೆ ನಡೆಯುತ್ತಿದ್ದೇವೆ ಬಿಜೆಪಿಯವರು ಹಲವಾರು ಪ್ರಶ್ನೆಗಳನ್ನು ಎತ್ತಿದ್ದರು ಅವರ ಟೀಕೆ, ವ್ಯಂಗ್ಯಗಳಿಗೆ ಈ ಯೋಜನೆಯ ಮೂಲಕ ತಿರುಗೇಟು ನೀಡಿದ್ದೇವೆ. ೪೨ ಲಕ್ಷ ಮಹಿಳೆಯರು ಸರಕಾರಿ ಬಸ್ಸುಗಳಲ್ಲಿ ಪ್ರಯಾಣ ಮಾಡಿದ್ದಾರೆಂದು ವಿವರಿಸಿದರು.
ಮಾಜಿ ಶಾಸಕ ಕಿರಣಕುಮಾರ್ ಮಾತನಾಡಿ ಉಚಿತ ಬಸ್ ಸೇವೆ ಮಹಿಳೆಯರ ಸಬಲೀಕರಣಕ್ಕೆ ನಾಂದಿ ಹಾಡಿ ದಂತಾಗಿದೆ. ಐದು ಗ್ಯಾರೆಂಟಿಗಳಲ್ಲಿ ಮೊದಲನೆ ಗ್ಯಾರಂಟಿ ಈಡೇರಿದ್ದು ಹಂತ ಹಂತವಾಗಿ ಐದು ಗ್ಯಾರೆಂಟಿಗಳು ಜನ ಸಾಮಾನ್ಯರಿಗೆ ತಲುಪಲಿದೆ. ದೇಶ ಸಧೃಡವಾಗಿರಲು ತಾಯಂದಿರ ಕೊಡುಗೆ ಅಪಾರವಾಗಿದೆ. ಸಾರಿಗೆ ಸಚಿವ ರಾಮಲಿಂಗರೆಡ್ಡಿ ಹೇಳಿರುವಂತೆ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆ ಐದು ವರ್ಷ ಪೂರ್ತಿ ಯಾಗಿ ಇರಲಿದ್ದು ಮತ್ತೆ ನಮ್ಮ ಸರಕಾರವೇ ಅಸ್ತಿತ್ವಕ್ಕೆ ಬರಲಿದ್ದು ಈ ಮೂಲಕ ಒಟ್ಟು ಹತ್ತು ವರ್ಷ ಶಕ್ತಿ ಯೋಜನೆ ಮಹಿಳೆಯರಿಗೆ ಸಿಗಲಿದೆ ಎಂದು ಹೇಳಿದರು.
ಸಮಾರಂಭದಲ್ಲಿ ಬ್ಲಾಕ್ ಅಧ್ಯಕ್ಷ ಬಸವರಾಜು, ಚಿಕ್ಕಣ್ಣ, ಕೆಪಿಸಿಸಿ ಹಿಂದುಳಿದ ವರ್ಗಗಳ ಸಂಘಟನಾ ಕಾರ್ಯದರ್ಶಿ ಜಗದೀಶ್, ಮಹಿಳಾ ಘಟಕದ ಅಧ್ಯಕ್ಷೆ ರಾಧ, ಸೇವಾದಳದ ಜಿಲ್ಲಾಧ್ಯಕ್ಷ ನಿಶಾನಿ ಕಿರಣ್, ಉಪಾಧ್ಯಕ್ಷ ಚಂದ್ರಶೇಖರ್, ಕಾರ್ಯದರ್ಶಿ ಬ್ರಹ್ಮಾನಂದ್, ಯುವ ಕಾಂಗ್ರೆಸ್ ಅಧ್ಯಕ್ಷ ಸಾಸಲು ಮಂಜುನಾಥ್ ಹಾಗು ಇತರರಿದ್ದರು.