ವರುಣನ ಆರ್ಭಟಕ್ಕೆ ಕುಸಿದ ಮನೆ: 5 ಜನ ಪ್ರಾಣಾಪಾಯದಿಂದ ಪಾರು
ಹುಬ್ಬಳ್ಳಿ:ವರುಣನ ಆರ್ಭಟಕ್ಕೆ ಮನೆಯೊಂದು ಕುಸಿದು ಬಿದ್ದು, ಈ ವೇಳೆ ಮನೆಯಲ್ಲಿದ್ದ 5 ಜನ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಘಟನೆ ನಡೆದಿವೆ.
ಹುಬ್ಬಳ್ಳಿಯ ಗಿರಣಿಚಾಳದಲ್ಲಿನ ನಾಗರಾಜ ಕಿರೆಸುರು ಎಂಬವರಿಗೆ ಸೇರಿದ ಮನೆ ಭಾರೀ ಮಳೆಯಿಂದ ಏಕಾಏಕಿ ಕುಸಿದು ಬಿದ್ದಿದೆ. ಮನೆಯಲ್ಲಿ 5 ಜನ ಇದ್ದಾಗ ಈ ಅವಘಡ ಸಂಭವಿ ಸಿದ್ದು, ಅದೃಷ್ಟಾವಶಾತ ಯಾರಿಗೂ ಪ್ರಾಣ ಹಾನಿ ಸಂಭವಿಸಿಲ್ಲ.
ಹಾಗೆಯೇ ಉತ್ತರಕನ್ನಡ ಜಿಲ್ಲೆಯಲ್ಲಿ ನಿರಂತರವಾಗಿ ಮಳೆರಾಯ ಆರ್ಭಟಿಸುತ್ತಲೇ ಇದ್ದಾನೆ. ನದಿಗಳು ಅಪಾಯ ಮಟ್ಟ ಮೀರಿ ಹರಿದು ಪ್ರವಾಹ ಸೃಷ್ಟಿಯಾಗಿದೆ. ಅದರಲ್ಲಿ ಯೂ ಅಘನಾಶಿನಿ ನದಿಯ ನೆರೆಗೆ ಹಲವು ಗ್ರಾಮಗಳು ಜಲಾವೃತವಾಗಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ.
ಜಿಲ್ಲೆಯ ಅಘನಾಶಿನಿ, ಗಂಗಾವಳಿ, ಶರಾವತಿ, ವರದಾ ಕಾಳಿ ನದಿ ತುಂಬಿ ಹರಿಯಲಾ ರಂಭಿಸಿವೆ. ಘಟ್ಟದ ಮೇಲ್ಭಾಗದಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿರುವ ಕಾರಣ, ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ.
ಶಿರಸಿ- ಕುಮಟಾ ರಸ್ತೆಯ ರಾಗಿಹೊಸಳ್ಳಿ ಬಳಿ ಗುಡ್ಡದ ಮಣ್ಣು ರಸ್ತೆಗೆ ಕುಸಿಯುತ್ತಿರುವುದು ಸಂಚಾರಕ್ಕೆ ಅಡೆತಡೆಯಾಗಿದೆ. ಸದ್ಯ ಈ ಮಾರ್ಗದಲ್ಲಿ ಭಾರೀ ವಾಹನಗಳ ಓಡಾಟ ಕಷ್ಟವಿದ್ದು, ಲಘು ವಾಹನಗಳಿಗೆ ಸಂಚರಿಸಲು ಪೊಲೀಸರು ಅವಕಾಶ ಮಾಡಿ ಕೊಡುತ್ತಿದ್ದಾರೆ.
ಅಘನಾಶಿನಿಯಿಂದ ಪ್ರವಾಹ ಬಾಧಿತ ಪ್ರದೇಶಗಳ ಜನರಿಗಾಗಿ 4 ಕಾಳಜಿ‌ ಕೇಂದ್ರಗಳನ್ನು ತೆರೆಯಲಾಗಿದೆ. ಹೊನ್ನಾವರದಲ್ಲಿಯೂ ಶರಾವತಿ ನದಿ ಉಕ್ಕಿ ಹರಿಯುತ್ತಿದ್ದು, ಒಟ್ಟು 5 ಕಡೆ ಕಾಳಜಿ ಕೇಂದ್ರ ತೆರೆದು ವ್ಯವಸ್ಥೆ ಮಾಡಲಾಗಿದೆ.