ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ ವೇನಲ್ಲಿ ಇಂದಿನಿಂದ ಈ ವಾಹನಗಳಿಗೆ ನಿರ್ಬಂಧ..!
ರಾಮನಗರ:ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ ವೇನಲ್ಲಿ ಇಂದಿನಿಂದ ಟ್ರ್ಯಾಕ್ಟರ್‌, ಆಟೋ, ಬೈಕ್ ಸೇರಿದಂತೆ ಇನ್ನಿತರ ದ್ವಿಚಕ್ರ ವಾಹನಗಳ ಸಂಚಾರಕ್ಕೆನಿರ್ಬಂಧ ಹೇರಲಾಗಿದೆ. ಬೆಳಗ್ಗೆ 8 ಗಂಟೆಯಿಂದಲೇ ಹೆದ್ದಾರಿಯಲ್ಲಿ ಬೈಕ್, ಆಟೋ, ಟ್ರ್ಯಾಕ್ಟರ್ ಸಂಚಾರಕ್ಕೆ ನಿಷೇಧ ಹೇರಲಾಗಿದೆ.
ನಿಯಮ ಮೀರಿದರೆ 500 ರೂಪಾಯಿ ದಂಡ ಕಟ್ಟಬೇಕಾಗುತ್ತದೆ ಅಂತಲೂ ಎಚ್ಚರಿಕೆ ನೀಡಿಲಾಗಿದೆ. ಆದರೆ ಈ ಬಗ್ಗೆ ಎಲ್ಲಿಯೂ ಮಾಹಿತಿ ಫಲಕ ಹಾಕದೇ ಪೊಲೀಸ್ ಇಲಾಖೆ ನಿರ್ಲಕ್ಷ್ಯ ವಹಿಸಿದೆ ಎನ್ನುವ ಆರೋಪಗಳು ಕೇಳಿಬಂದಿದ್ದವು. ಬಳಿಕ ಎಚ್ಚೆತ್ತ ಪೊಲೀಸರು ನಾಮಫಲಕಗಳನ್ನು ಅಳವಡಿಕೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಒಂದು ವೇಳೆ ನಿಯಮ ಮೀರಿ ಬೈಕ್, ಟ್ರ್ಯಾಕ್ಟರ್‌ ಹಾಗೂ ಆಟೋ ಸವಾರರು ಬೆಂಗಳೂರು-ಮೈಸೂರು ಹೆದ್ದಾರಿ ಬಳಸಿದರೆ 500 ರೂಪಾಯಿ ದಂಡ ಕಟ್ಟ ಬೇಕಾಗುತ್ತದೆ. 9 ಕಡೆಗಳಲ್ಲಿ ಪೊಲೀಸರು ತಪಾಸಣೆ ನಡೆಸಲಿದ್ದು, ಹೆದ್ದಾರಿಯ ಎಂಟ್ರಿ ಅಂಡ್ ಎಕ್ಸಿಟ್ ಪಾಯಿಂಟ್‌ಗಳಲ್ಲಿ ಚೆಕಿಂಗ್ ಮಾಡುತ್ತಿದ್ದಾರೆ. ಈ ಮೂಲಕ ಪೊಲೀಸರು ಹಾಗೂ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಎಕ್ಸ್‌ಪ್ರೆಸ್‌ ಹೈವೇ ಕೇವಲ ಶ್ರೀಮಂತರ ಹೆದ್ದಾರಿ ಎಂಬುದನ್ನು ಸಾಬೀತು ಮಾಡುತ್ತಿದ್ದಾರೆ ಎನ್ನುವ ವ್ಯಾಪಕ ಆಕ್ರೋಶಗಳು ಕೂಡ ವ್ಯಕ್ತವಾಗುತ್ತಿವೆ.
ಮತ್ತೊಂದೆಡೆ ಹೆದ್ದಾರಿ ನಿರ್ಮಾಣಕ್ಕೆ ಭೂಮಿ ನೀಡಿದ ತಪ್ಪಿಗೆ‌ ನಮಗೆ ಸಂಚಾರ ಮಾಡಲು ಬಂದ್ ಮಾಡಿದ್ದಾರೆ. ಸೂಕ್ತ ಸರ್ವಿಸ್ ರಸ್ತೆ ನಿರ್ಮಾಣ ಮಾಡದೆ ಲಘು ವಾಹನ ನಿಷೇಧ ಮಾಡಿರುವ ಕ್ರಮ ಸರಿಯಲ್ಲ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.
ಈ ವಾಹನಗಳಿಗೆ ನಿಷೇಧ
1. ಮೋಟಾರ್ ಸೈಕಲ್ (ಸ್ಕೂಟರ್ ಮತ್ತು ಇತರೆ ದ್ವಿಚಕ್ರ ವಾಹನಗಳು ಸೇರಿದಂತೆ)
2. ತ್ರಿಚಕ್ರ ವಾಹನಗಳು (ಆಟೋ ರಿಕ್ಷಾ, ಇ-ಕಾರ್ಟ್, ಇ-ರಿಕ್ಷಾ ಸೇರಿದಂತೆ)
3. ಮೋಟಾರು ಅಲ್ಲದ ವಾಹನಗಳು
4. ಟ್ರ್ಯಾಕ್ಟರ್‌ಗಳು
5. ಮಲ್ಟಿ ಆಕ್ಸಲ್ ಹೈಡ್ರಾಲಿಕ್ ಟ್ರೈಲರ್ ವಾಹನಗಳು
6. ಕ್ಯಾಡ್ರಿ ಸೈಕಲ್‌ಗಳು.