ವಿಜ್ಞಾನಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಎಂ.ಆರ್.ಎಸ್.ರಾವ್ ಹೃದಯಾಘಾತದಿಂದ ನಿಧನ
ಬೆಂಗಳೂರು:ಭಾರತದ ವಿಜ್ಞಾನಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಎಂ.ಆರ್.ಎಸ್.ರಾವ್ ಎಂದೇ ಖ್ಯಾತರಾಗಿದ್ದ ಮಂಚನಹಳ್ಳಿ ರಂಗಸ್ವಾಮಿ ಸತ್ಯನಾರಾಯಣ ರಾವ್ ಅವರು ಭಾನುವಾರ ಸಂಜೆ 7 ಗಂಟೆಗೆ ಬೆಂಗಳೂರಿನ ಟಾಟಾ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾದ್ದಾರೆ.
ಅವರು ತಮ್ಮ ಶಿಸ್ತು, ವೈಜ್ಞಾನಿಕ ಜ್ಞಾನ, ತಾಳ್ಮೆ, ಮೃದು-ಮಾತನಾಡುವ ಸ್ವಭಾವ ಮತ್ತು ಪಿಎಚ್‌ಡಿ ವಿದ್ಯಾರ್ಥಿಗಳ ಮಾರ್ಗದರ್ಶನಕ್ಕಾಗಿ ಹೆಸರುವಾಸಿ ಯಾಗಿದ್ದರು.
ಎಂ.ಆರ್.ಎಸ್.ರಾವ್ ಅವರು ಪತ್ನಿ ಪದ್ಮ ಎಸ್‌.ರಾವ್ ಮತ್ತು ಇಬ್ಬರು ಪುತ್ರರಾದ ಶರತ್ ಮತ್ತು ರೋಹನ್ ಅವರನ್ನು ಅಗಲಿದ್ದಾರೆ. ಇನ್ನು ಎಂ.ಆರ್.ಸತ್ಯ ನಾರಾಯಣ ರಾವ್ ಅವರ ಪುತ್ರರೊಬ್ಬರು ಬ್ರಿಸ್ಬೇನ್‌ನಿಂದ ಹಿಂದಿರುಗಿದ ನಂತರ ಅವರ ಅಂತ್ಯಕ್ರಿಯೆಯನ್ನು ಮಂಗಳವಾರ ನಡೆಸಲಾಗುವುದು.
ಜನವರಿ 21, 1948ರಂದು ಮೈಸೂರಿನಲ್ಲಿ ಜನಿಸಿದ ರಾವ್ (75) ಭಾರತದಲ್ಲಿ ಕ್ರೊಮಾಟಿನ್ ಬಯಾಲಜಿ ಸಂಶೋಧನೆ ಪ್ರಾರಂಭಿಸಿದ ಮೊದಲ ವಿಜ್ಞಾನಿ ಎಂದೇ ಪ್ರಸಿದ್ದರಾಗಿದ್ದಾರೆ. ಅವರು ಜವಾಹರಲಾಲ್ ನೆಹರು ಉನ್ನತ ವೈಜ್ಞಾನಿಕ ಸಂಶೋಧನಾ ಕೇಂದ್ರದಲ್ಲಿ ಗೌರವ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಮತ್ತು ಸಂಸ್ಥೆಯಲ್ಲಿ ಕ್ರೊಮಾಟಿನ್ ಜೀವಶಾಸ್ತ್ರ ಪ್ರಯೋಗಾಲಯವನ್ನು ಸಕ್ರಿಯವಾಗಿ ನಡೆಸಿದ್ದರು.
ವಿಜ್ಞಾನ ಮತ್ತು ಎಂಜಿನಿಯರಿಂಗ್ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳಿಗಾಗಿ 2010ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.