ಟಾಟಾ ಮೋಟರ್ಸ್ ನ ಅಲ್ಟ್ರಾ ಇವಿ ಎಲೆಕ್ಟ್ರಿಕ್ ಬಸ್ ಗಳೊಂದಿಗೆ ಶ್ರೀನಗರ ಸ್ಮಾರ್ಟ್ ಸಿಟಿಯಲ್ಲಿ ಹಸಿರು ಮಾರ್ಗ ಸೇವೆ ಆರಂಭ
ಬೆಂಗಳೂರು:ಭಾರತದ ಅತಿದೊಡ್ಡ ವಾಣಿಜ್ಯ ವಾಹನಗಳ ತಯಾರಿಕಾ ಸಂಸ್ಥೆಯಾಗಿರುವ ಟಾಟಾ ಮೋಟರ್ಸ್, ಜಮ್ಮು ಮತ್ತು ಕಾಶ್ಮೀರಕ್ಕೆ ತನ್ನ ಮೊದಲ ಕಂತಿನ ಅಲ್ಟ್ರಾ ಇವಿ ಹವಾನಿಯಂತ್ರಿತ ಎಲೆಕ್ಟ್ರಿಕ್ ಬಸ್ ಗಳನ್ನು ಪೂರೈಕೆ ಮಾಡಿರುವುದಾಗಿ ಘೋಷಣೆ ಮಾಡಿದೆ. ಜಮ್ಮು ಮತ್ತು ಕಾಶ್ಮೀರದ ಟಾಟಾ ಮೋಟರ್ಸ್ ಗ್ರೂಪ್ ನ ಅಂಗಸಂಸ್ಥೆಯಾಗಿರುವ ಟಿಎಂಎಲ್ ಸ್ಮಾರ್ಟ್ ಸಿಟಿ ಮೊಬಿಲಿಟಿ ಸಲೂಶನ್ಸ್ (ಜೆ&ಕೆ) ಪ್ರೈವೇಟ್ ಲಿಮಿಟೆಡ್ ಮೂಲಕಶ್ರೀನಗರ ಸ್ಮಾರ್ಟ್ ಸಿಟಿ ಲಿಮಿಟೆಡ್ ಗೆ ಈ ನೂತನ ಬಸ್ ಗಳನ್ನು ಹಸ್ತಾಂತರ ಮಾಡಿದೆ.
ಶ್ರೀನಗರ ನಗರಕ್ಕೆ 100 ಎಲೆಕ್ಟ್ರಿಕ್ ಬಸ್ ಗಳು ಮತ್ತು ಜಮ್ಮುವಿಗೆ 100 ಎಲೆಕ್ಟ್ರಿಕ್ ಬಸ್ ಗಳನ್ನು ಪೂರೈಕೆ ಮಾಡುವ ದೊಡ್ಡ ಯೋಜನೆಯನ್ನು ಟಾಟಾ ಮೋಟರ್ಸ್ ಒಪ್ಪಿಕೊಂಡಿದೆ. ಜಮ್ಮು ಮತ್ತು ಶ್ರೀನಗರ ಸ್ಮಾರ್ಟ್ ಯೋಜನೆಗಳಡಿಯಲ್ಲಿ 12 ವರ್ಷಗಳ ಕಾಲ ಟಾಟಾ ಮೋಟರ್ಸ್ ಈ ಬಸ್ ಗಳ ಪೂರೈಕೆ ಜೊತೆಗೆ ನಿರ್ವಹಣೆ ಮತ್ತು ಕಾರ್ಯಾಚರಣೆಯನ್ನು ನಡೆಸಲಿದೆ. ಜಮ್ಮು & ಕಾಶ್ಮೀರ ಸರ್ಕಾರದ ವಸತಿ ಮತ್ತು ನಗರಾಭಿವೃದ್ಧಿ ಇಲಾಖೆಯ ಉಪಕ್ರಮ ದಲ್ಲಿ ಈ ಸಹಭಾಗಿತ್ವ ಮಾಡಿಕೊಳ್ಳಲಾಗಿದೆ.
ಶ್ರೀನಗರದಲ್ಲಿ ಪರಿಸರಸ್ನೇಹಿ ಮತ್ತು ಆರ್ಥಿಕ ಸುಸ್ಥಿರತೆಯ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಜಾಲ ವನ್ನು ನಿರ್ಮಾಣ ಮಾಡುವ ಉದ್ದೇಶದಿಂದ ಎಲೆಕ್ಟ್ರಿಕ್ ಸಾರ್ವಜನಿಕ ಬಸ್ ಗಳನ್ನು ಪರಿಚಯಿಸ ಲಾಗುತ್ತಿದೆ. ಈ ಬಸ್ ಗಳು ಶೂನ್ಯ-ಮಾಲಿನ್ಯವನ್ನು ಹೊಂದಿದ್ದು, ಮುಂದಿನ ಪೀಳಿಗೆಗೆ ಹೊಂದಿಕೊಳ್ಳು ವಂತಹ ರೀತಿಯಲ್ಲಿ ದೇಶೀಯವಾಗಿ ತಯಾರಿಸ ಲಾಗಿದೆ. ಇತ್ತೀಚಿನ ಅತ್ಯಾಧುನಿಕ ವೈಶಿಷ್ಟ್ಯತೆಗಳನ್ನು ಹೊಂದಿದ್ದು, ಅಡ್ವಾನ್ಸ್ಡ್ ಬ್ಯಾಟರಿ ಸಿಸ್ಟಂಗಳಿಂದ ಚಾಲಿತವಾಗುವ ಬಸ್ ಗಳು ಇವಾಗಿವೆ. ಸುರಕ್ಷತೆ, ಆರಾಮದಾಯಕತೆ ಮತ್ತು ಅನುಕೂಲಕರವಾದ ರೀತಿಯಲ್ಲಿ ಅಂತರ ನಗರ ಪ್ರಯಾಣಕ್ಕೆ ಹೊಂದಿಕೊಳ್ಳುವ ರೀತಿಯಲ್ಲಿ ಈ ಬಸ್ ಗಳನ್ನು ನಿರ್ಮಾಣ ಮಾಡಲಾಗಿದೆ.
ಈ ಇ-ಬಸ್ ಗಳಿಗೆ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗೌರ್ನರ್ ಮನೋಜ್ ಸಿನ್ಹಾ ಅವರು ಹಸಿರು ನಿಶಾನೆ ತೋರಿದರು. ಈ ಸಂದರ್ಭದಲ್ಲಿ ಜಮ್ಮು ಮತ್ತು ಕಾಶ್ಮೀರದ ಮುಖ್ಯ ಕಾರ್ಯದರ್ಶಿ ಅರುಣ್ ಕುಮಾರ್ ಮೆಹ್ತಾ, ಶ್ರೀನಗರದ ಮೇಯರ್ ಜುನೈದ್ ಅಝೀಂ ಮಟ್ಟು, ಎಚ್ & ಯುಡಿಡಿ ಪ್ರಧಾನ ಕಾರ್ತದರ್ಶಿ ಪ್ರಶಾಂತ್ ಗೋಯಲ್, ಜಿಲ್ಲಾಧಿಕಾರಿ ಮತ್ತು ಶ್ರೀನಗರ ಸ್ಮಾರ್ಟ್ ಸಿಟಿ ಯೋಜನೆಯ ಅಧ್ಯಕ್ಷ ವಿಜಯ್ ಕುಮಾರ್ ಬಿಧೂರಿ, ಸಾರಿಗೆ ಇಲಾಖೆಯ ಆಡಳಿತ ಕಾರ್ಯದರ್ಶಿ ಪ್ರಸನ್ನ ರಾಮಸ್ವಾಮಿ, ಶ್ರೀನಗರ ಮುನ್ಸಿಪಲ್ ಕಾರ್ಪೊರೇಶನ್ ನ ಆಯುಕ್ತ ಮತ್ತು ಶ್ರೀನಗರ ಸ್ಮಾರ್ಟ್ ಸಿಟಿ ಯೋಜನೆ ಸಿಇಒ ಅತ್ತರ್ ಅಮೀರ್ ಖಾನ್ ಸೇರಿದಂತೆ ಜಮ್ಮು & ಕಾಶ್ಮೀರ ಸರ್ಕಾರದ ಪ್ರತಿನಿಧಿಗಳು, ಶ್ರೀನಗರ ಮುನ್ಸಿಪಲ್ ಕಾರ್ಪೊರೇಶನ್ ಮತ್ತು ಟಾಟಾ ಮೋಟರ್ಸ್ ನ ಅಧಿಕಾರಿಗಳು ಮತ್ತು ಪ್ರತಿನಿಧಿಗಳು ಇದ್ದರು.
ಜಮ್ಮು & ಕಾಶ್ಮೀರದ ಲೆಫ್ಟಿನೆಂಟ್ ಗೌರ್ನರ್ ಮನೋಜ್ ಸಿನ್ಹಾ ಅವರು ಮಾತನಾಡಿ, “ಎಲೆಕ್ಟ್ರಿಕ್ ಬಸ್ ಸೇವೆ ಆರಂಭವಾಗುತ್ತಿರುವುದಕ್ಕೆ ಶ್ರೀನಗರ ಜನತೆಗೆ ಅಭಿನಂದನೆ ಸಲ್ಲಿಸುತ್ತೇನೆ. ಇನ್ನು ಮುಂದೆ ನಗರದ ಸಾರ್ವಜನಿಕ ಸಾರಿಗೆ ಕ್ಷೇತ್ರದಲ್ಲಿ ಈ ಎಲೆಕ್ಟ್ರಿಕ್ ಬಸ್ ಗಳು ಸಾಕಷ್ಟು ಬದಲಾವಣೆ ತರಲಿವೆ. ನಗರಕ್ಕೆ ಸಮಗ್ರ ಸುಸ್ಥಿರವಾದ ಸಾರಿಗೆ ವ್ಯವಸ್ಥೆಯ ಕಲ್ಪಿಸುವ ಯೋಜನೆಯ ಭಾಗ ಇದಾಗಿದೆ. ಈ ದಿಸೆಯಲ್ಲಿ ಕೇಂದ್ರಾಡಳಿತ ಪ್ರದೇಶದ ಅಭಿವೃದ್ಧಿಗೆ ಬೆಂಬಲವಾಗಿ ನಿಂತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ’’ ಎಂದು ತಿಳಿಸಿದರು.
ಜಮ್ಮು ಮತ್ತು ಕಾಶ್ಮೀರ ಸರ್ಕಾರದ ವಸತಿ & ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಗೋಯಲ್ ಅವರು ಮಾತನಾಡಿ, “ಜಮ್ಮು ಮತ್ತು ಕಾಶ್ಮೀರವು ನಗರಾಭಿವೃದ್ಧಿಯ ಹೊಸ ಹಂತವನ್ನು ಆರಂಭಿಸಿದೆ. ಈ ಬಸ್ ಗಳ ಸೇವೆಯ ಆರಂಭದಿಂದ ರಸ್ತೆಗಳ ವಾಹನ ದಟ್ಟಣೆಯನ್ನು ಕಡಿಮೆ ಮಾಡುತ್ತದೆ. ಈ ದಿಸೆಯಲ್ಲಿ ಟಾಟಾ ಮೋಟರ್ಸ್ ಶ್ರೀನಗರ ಸ್ಮಾರ್ಟ್ ಸಿಟಿ ಲಿಮಿಟೆಡ್ ನೊಂದಿಗೆ 12 ವರ್ಷಗಳ ಸಹಭಾಗಿತ್ವವನ್ನು ಮಾಡಿಕೊಂಡಿದೆ. ಶ್ರೀನಗರದ ಕೊನೆಯ ಮೈಲಿಯ ಪ್ರಯಾಣವನ್ನು ಸುಧಾರಣೆ ಮಾಡುವ ನಿಟ್ಟಿನಲ್ಲಿ ಈ ಸಾರಿಗೆ ವ್ಯವಸ್ಥೆ ಸಹಾಯ ಮಾಡುತ್ತದೆ.
ಶ್ರೀನಗರ ಸ್ಮಾರ್ಟ್ ಸಿಟಿ ಲಿಮಿಟೆಡ್ ನ ಸಿಇಒ ಅತ್ತರ್ ಅಮೀರ್ ಖಾನ್ ಅವರು ಮಾತನಾಡಿ, “ಶ್ರೀನಗರದ ಎಲೆಕ್ಟ್ರಿಕ್ ಬಸ್ ಯೋಜನೆಯು ನಗರದ ನಮ್ಮ ಸಮಗ್ರ ಸುಸ್ಥಿರ ನಗರ ಸಾರಿಗೆ ವ್ಯವಸ್ಥೆಯ ಭಾಗವಾಗಿದೆ.
ಶ್ರೀನಗರದಲ್ಲಿ ಇದೇ ಮೊದಲ ಬಾರಿಗೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಇಂತಹ ಬೃಹತ್ ಪರಿವರ್ತನೆಯಾಗಿದೆ. ಇದು ನಗರದ ವಾಹನ ದಟ್ಟಣೆ ಯನ್ನು ಕಡಿಮೆ ಮಾಡಲು, ವಿಶ್ವಾಸಾರ್ಹ, ಕೈಗೆಟುಕುವ ಮತ್ತು ಆರಾಮದಾಯಕವಾದ ಸಾರ್ವಜನಿಕ ಸಾರಿಗೆಯನ್ನು ನಮ್ಮ ನಾಗರಿಕರಿಗೆ ನೀಡುತ್ತದೆ’’ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಟಿಎಂಎಲ್ ಸ್ಮಾರ್ಟ್ ಸಿಟಿ ಮೊಬಿಲಿಟಿ ಸಲೂಶನ್ಸ್ (ಜೆ&ಕೆ) ಪ್ರೈವೇಟ್ ಲಿಮಿಟೆಡ್ ನ ಅಧ್ಯಕ್ಷ ಅಸಿಂ ಕುಮಾರ್ ಮುಖೋಪಾಧ್ಯಾಯ್ ಅವರು, “ಸುಸ್ಥಿರ ಸಾರ್ವಜನಿಕ ಸಾರಿಗೆ ವ್ಯವಸ್ಥೆಯು ಈ ಸಮಯದಲ್ಲಿ ಅಗತ್ಯವಾಗಿದೆ. ಸುಂದರ ನಗರವಾಗಿರುವ ಶ್ರೀನಗರದಲ್ಲಿ ಪ್ರಯಾಣಿಕರಿಗೆ ಪರಿವರ್ತನೆ ತರುವಂತಹ ಪರಿಹಾರಗಳನ್ನು ಒದಗಿಸುವ ನಿಟ್ಟಿನಲ್ಲಿ ಟಾಟಾ ಮೋಟರ್ಸ್ ಅನ್ನು ಆಯ್ಕೆ ಮಾಡಿಕೊಂಡಿರುವುದಕ್ಕೆ ನಮಗೆ ಹೆಮ್ಮೆ ಎನಿಸುತ್ತಿದೆ. ನಮ್ಮ ಸುಧಾರಿತವಾದ ಎಲೆಕ್ಟ್ರಿಕ್ ಬಸ್ ಗಳು ಅತ್ಯಾಧುನಿಕ ವೈಶಿಷ್ಟ್ಯತೆಗಳನ್ನು ಒಳಗೊಂದಿದ್ದು, ಜನರ ಪ್ರಯಾಣವನ್ನು ಸುಖಕರವಾಗಿಸುತ್ತವೆ.
ಪ್ರಯಾಣಿಕರಿಗೆ ಸುರಕ್ಷತೆ ಮತ್ತು ಆರಾಮದಾಯಕವನ್ನು ಈ ಬಸ್ ಗಳು ನೀಡಲಿದ್ದು, ಈ ಪ್ರದೇಶದ ಪ್ರಶಾಂತ ಮತ್ತು ಪ್ರಾಚೀನ ಪರಿಸರದೊಂದಿಗೆ ಹೊಂದಿಕೆಯಾಗುವ ರೀತಿಯಲ್ಲಿ ಪರಿಸರ ಸ್ನೇಹಿ, ಶಬ್ದರಹಿತ ಮತ್ತು ಶೂನ್ಯ-ಮಾಲಿನ್ಯದ ಸಾರಿಗೆ ಪರಿಹಾರಗಳನ್ನು ನೀಡಲಿವೆ. ಈ ಮೂಲಕ ನಾವು ಜಮ್ಮು ಮತ್ತು ಕಾಶ್ಮೀರ ಸರ್ಕಾರದೊಂದಿಗೆ ಕೈಜೋಡಿಸಿದ್ದೇವೆ. ಇದು ಸುರಕ್ಷಿತ, ಚುರುಕಾದ ಮತ್ತು ಹಸಿರು ಚಲನಶೀಲತೆಯ ಪರಿಹಾರಗಳಿಗೆ ನಮ್ಮ ಬದ್ಧತೆಯನ್ನು ಪ್ರದರ್ಶಿಸುವ ಮೈಲಿಗಲ್ಲಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಸಾರ್ವಜನಿಕ ಸಾರಿಗೆಯ ಭವಿಷ್ಯವನ್ನು ರೂಪಿಸುವಲ್ಲಿ ನಾವು ಪ್ರಮುಖ ಪಾತ್ರ ವಹಿಸಲಿದ್ದೇವೆ ಎಂಬ ವಿಶ್ವಾಸವಿದೆ’’ ಎಂದು ತಿಳಿಸಿದರು.
ಇಲ್ಲಿವರೆಗೆ ಟಾಟಾ ಮೋಟರ್ಸ್ ಭಾರತದ ವಿವಿಧ ನಗರಗಳಿಗೆ 1,000 ಬಸ್ ಗಳನ್ನು ಪೂರೈಕೆ ಮಾಡಿದೆ. ಈ ಬಸ್ ಗಳು 9.6 ಕೋಟಿ ಕಿಲೋಮೀಟರ್ ಗಳನ್ನು ಕ್ರಮಿಸಿದ್ದು, ಶೇ.95 ರಷ್ಟು ಅವಧಿಯ ಸಂಚಾರ ನಡೆಸಿವೆ. ಟಾಟಾ ಅಲ್ಟ್ರಾ ಇವಿ ಒಂದು ಕಟ್ಟಿಂಗ್-ಎಡ್ಜ್ ಇ-ಬಸ್ ಆಗಿದ್ದು, ನಗರ ಪ್ರಯಾಣಕ್ಕೆ ಅಗತ್ಯವಾಗಿರುವ ಎಲ್ಲಾ ರೀತಿಯ ವೈಶಿಷ್ಟ್ಯತೆಗಳನ್ನು ಹೊಂದಿದೆ. ಇದರ ಪೂರ್ಣ-ಎಲೆಕ್ಟ್ರಿಕ್ ಡ್ರೈವ್ ಟ್ರೇನ್ ನೊಂದಿಗೆ ಈ ಅತ್ಯಾಧುನಿಕ ವಾಹನವು ಇಂಧನ ಬಳಕೆಯನ್ನು ಉತ್ತಮಗೊಳಿಸುತ್ತದೆ. ಇದು ಕಡಿಮೆ ವಿದ್ಯುತ್ ಬಳಕೆ ಮತ್ತು ಕಾರ್ಯಾಚರಣೆಯನ್ನು ವೆಚ್ಚಗಳನ್ನು ಉತ್ತಮಗೊಳಿಸುತ್ತದೆ.
ಇದು ಬೋರ್ಡಿಂಗ್ ಸುಲಭ, ಆರಾಮದಾಯಕ ಆಸನಗಳು ಮತ್ತು ಚಾಲಕ-ಸ್ನೇಹಿ ಕಾರ್ಯಾಚರಣೆಯ ವೈಶಿಷ್ಟ್ಯತೆಗಳನ್ನು ನೀಡುತ್ತದೆ. ಇದೇ ವೇಳೆ, ಶೂನ್ಯ ಮಾಲಿನ್ಯ ಹೊರಸೂಸುವಿಕೆಯನ್ನು ಖಾತ್ರಿಪಡಿಸುತ್ತದೆ. ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಎಲೆಕ್ರಾನಿಕ್ ಬ್ರೇಕ್ ಡೆಲಿವರಿ, ಏರ್ ಸಸ್ಪೆನ್ಷನ್, ಇಂಟಲಿಜೆಂಟ್ ಟ್ರಾನ್ಸ್ ಪೋರ್ಟ್ ಸಿಸ್ಟಂ (ಐಟಿಎಸ್), ಪ್ಯಾನಿಕ್ ಬಟನ್ ಸೇರಿದಂತೆ ಇನ್ನಿತರೆ ಸುಧಾರಿತ ವೈಶಿಷ್ಟ್ಯತೆಗಳನ್ನು ಒಳಗೊಂಡಿರುವ ಸುಸಜ್ಜಿತ ವಾಹನವಾಗಿದೆ. ಇದು ಪ್ರಯಾಣಿಕರಿಗೆ ಸೌಕರ್ಯ ಮತ್ತು ಸುರಕ್ಷತೆಗೆ ಆದ್ಯತೆ ನೀಡುತ್ತದೆ. ಈ ಎಲೆಕ್ಟ್ರಿಕ್ ಬಸ್ ಸ್ವಚ್ಛವಾದ ಸಾರ್ವಜನಿಕ ಸಾರಿಗೆಯ ಬದ್ಧತೆಯನ್ನು ಸಾಕಾರಗೊಳಿಸುತ್ತದೆ ಮತ್ತು ಪ್ರಯಾಣಿಕರ ಸಾರಿಗೆ ಅಗತ್ಯತೆಗಳಿಗೆ ಸೂಕ್ತವಾದ ಆಯ್ಕೆಯಾಗಿದೆ.