ಕಟ್ಟು ನೀರು ಪದ್ದತಿಯಲ್ಲಿ ಕಾಲುವೆಗಳಿಗೆ ನೀರು ಹರಿಸಲು ನಿರ್ಧಾರ
ಚಿಕ್ಕನಾಯಕನಹಳ್ಳಿ:ಬೋರನ ಕಣಿವೆ ಡ್ಯಾಂನಿ0ದ ಅಚ್ಚುಕಟ್ಟು ಪ್ರದೇಶಕ್ಕೆ ಜನ-ಜಾನುವಾರುಗಳಿಗೆ ಕುಡಿಯಲು ಹಾಗು ಮೇವು ಬೆಳೆ ಬೆಳೆಯಲು ಕಟ್ಟು ನೀರು ಪದ್ದತಿಯಲ್ಲಿ (೧೫ ದಿನ ಹರಿಸಿ, ೧೫ ನಿಲ್ಲಿಸುವುದು) ಕಾಲುವೆಗಳಿಗೆ ನೀರು ಹರಿಸಲು ನಿರ್ಧರಿಸಲಾಗಿದೆ.
ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಉಪವಿಭಾಗಾಧಿಕಾರಿ ಸಪ್ತಶ್ರೀ ಅಧ್ಯಕ್ಷತೆಯಲ್ಲಿ ನಡೆದ ನೀರಾವರಿ ಸಲಹಾ ಸಮಿತಿಯಲ್ಲಿ ಈ ನಿರ್ಣಯ ಕೈಗೊಳ್ಳ ಲಾಯಿತು. ಜನವರಿ ಕೊನೆಯ ವಾರದಿಂದ ೪೫ ದಿನ ನೀರು ಹರಿಸುವುದಾಗಿ ಪ್ರಕಟಿಸಲಾಯಿತು.
ರೈತರ ಹಿತ ಕಾಯುವುದು ನಮ್ಮೆಲ್ಲರ ಬಯಕೆಯಾಗಿದೆ. ಮಳೆ ಕೊರತೆಯಾಗಿರುವುದರಿಂದ ಕುಡಿಯುವ ನೀರಿಗೆ ಮೊದಲ ಆದ್ಯತೆ ಕೊಡಲಾಗುವುದು. ಕೃಷಿ ಇಲಾಖೆಯಿಂದ ಮೇವಿನ ಬಿತ್ತನೆ ಬೀಜ ವಿತರಿಸಲಾಗುವುದು. ನಾಲೆಗಳಲ್ಲಿ ಬೆಳದಿರುವ ಅನುಪಯುಕ್ತ ಗಿಡಗಳನ್ನು ಹಾಗು ಹೂಳು ತೆರವು ಗೊಳಿಸುವ ಮೂಲಕ ಕೊನೆಯವರೆಗೂ ನೀರು ತಲುಪುವಂತೆ ನಿರ್ವಹಣೆ ಮಾಡುವಂತೆ ಅಧಿಕಾರಿಗಳಿಗೆ ಶಾಸಕ ಸುರೇಶಬಾಬು ಸೂಚಿಸಿದರು.
ನಾಲೆಗಳಿಗೆ ನೀರು ಹರಿಸದಿದ್ದರೆ ರೈತರಿಗೆ ಹಾಗು ಕೃಷಿಗೆ ಬಹಳ ಸಮಸ್ಯೆಯಾಗುತ್ತದೆ. ನಾಲೆಯ ಕೊನೆಯ ಪ್ರದೇಶ ಉರಿಹಕ್ಕಿಬಯಲು ತಲುಪಬೇಕಾದರೆ ನಿರ್ವಹಣೆಯು ಬಹಳ ಮುಖ್ಯ. ಇದನ್ನು ಅಧಿಕಾರಿಗಳು ಸಮರ್ಥವಾಗಿ ನಿರ್ವಹಿಸಬೇಕು ಎಂದು ರೈತ ದಬ್ಬಗುಂಟೆ ಶ್ರೀನಿವಾಸ್ ಹೇಳಿದರು. ರೈತರು ಹಾಗು ಅಧಿಕಾರಿಗಳು ಸಹಾನೂಭೂತಿಯಿಂದ ಕೆಲಸ ಮಾಡುವಂತೆ ಶಾಸಕರು ಪ್ರತಿಕ್ರಿಯಿಸಿದರು.
ಸಭೆಯಲ್ಲಿ ತಹಸೀಲ್ದಾರ್ ಗೀತಾ, ಪ್ರೊಬೇಷನರಿ ಉಪವಿಭಾಗಾಧಿಕಾರಿ ಮೈತ್ರಿ, ಆರಕ್ಷಕ ನಿರೀಕ್ಷಕ ಯತೀಷ್, ರೈತ ಸಂಘದ ರಾಮನಹಳ್ಳಿ ಕುಮಾರಯ್ಯ, ಮೂರುಕಣ್ಣಪ್ಪ, ದಬ್ಬಗುಂಟೆ ರವಿಕುಮಾರ್, ಹಾಗು ಇತರರು ಹಾಜರಿದ್ದರು.
ಡ್ಯಾಂನಲ್ಲಿ ಎಷ್ಟಿದೆ ನೀರು ?ಡ್ಯಾಂ ಒಟ್ಟು ಸಂಗ್ರಹ ಸಾಮರ್ಥ್ಯ ೨೪೨೩ ಎಂಸಿಎಫ್‌ಟಿ ಆಗಿದೆ. ಉಪಯುಕ್ತ ಸಂಗ್ರಹಣಾ ಸಾಮರ್ಥ್ಯವು ೨೩೩೭ ಎಂಸಿಎಫ್‌ಟಿ, ಪ್ರಸ್ತುತ ಉಪಯುಕ್ತ ಸಂಗ್ರಹಣೆಯು ೧೮೦೦ ಎಂಸಿಎಫ್‌ಟಿಯಷ್ಟು ಇದೆ. ಈ ಡ್ಯಾಂನಿAದ ೬೭೫ ಹೆಕ್ಟೇರ್ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಒದಗಿಸಬೇಕಿದೆ. ನಾಲೆಗಳಿಗೆ ಪ್ರತಿನಿತ್ಯ ೫೫ ಕ್ಯುಸೆಕ್ ಅನ್ನು ೪೫ ದಿನಗಳವರೆಗೆ ಹರಿಸಲು ಸುಮಾರು ೨೫೦ ಎಂಸಿಎಫ್‌ಟಿ ಅಗತ್ಯವಿದೆ ಎಂದು ಸಣ್ಣ ನೀರಾವರಿ ಇಲಾಖೆಯ ಎಇಇ ಪ್ರಭಾಕರ್ ಮಾಹಿತಿ ನೀಡಿದರು.