ಮೀಟರ್ ಬಡ್ಡಿ ದಂಧೆ: ಮೂವರ ಬಂಧನ
ಟ್ರಾವೆಲ್ಸ್ ವ್ಯವಹಾರ ನಡೆಸುತ್ತಿದ್ದ ವ್ಯಕ್ತಿಗೆ ಆರೋಪಿ ಮಂಜುನಾಥ್ ಸಾಲ ನೀಡಿದ್ದ. ಈ ಸಾಲದ ವಸೂಲಿ ಮಾಡಿಕೊಡಲು ಸೈಕಲ್ ರವಿ ಸಹಚರನಾದ ಉಮೇಶ್​ಗೆ ಮಂಜುನಾಥ್ ಹೇಳಿದ್ದ. ಉಮೇಶ್ ತನ್ನ ಸಹಚರನಾದ ಸುರೇಶ್ ಜೊತೆ ಮೀಟರ್ ಬಡ್ಡಿ ವಸೂಲಿಗೆ ಮುಂದಾಗಿದ್ದ. ಈ ವಿಚಾರ ತಿಳಿದ ಸಿಸಿಬಿ ಪೊಲೀಸರು ಉಮೇಶ್, ಸುರೇಶ್ ಹಾಗೂ ಮಂಜುನಾಥ್​​ ಅವರನ್ನು ಬಂಧಿಸಿದ್ದಾರೆ.
ಟ್ರಾವೆಲ್ಸ್ ವ್ಯವಹಾರಕ್ಕಾಗಿ ರಂಗನಾಥ್ ಎಂಬವರು ಮಂಜುನಾಥ್ ಬಳಿ 23 ಲಕ್ಷ ಹಣವನ್ನ ಬಡ್ಡಿಗೆ ಸಾಲ ಪಡೆದಿದ್ದರು. 23 ಲಕ್ಷ ಹಣವನ್ನ ಬಡ್ಡಿ ಸಮೇತ ರಂಗನಾಥ್ ಹಿಂದಿರುಗಿಸಿದ್ದರು. ಆದರೆ ಮಂಜುನಾಥ್ ನಾನು ಮೀಟರ್ ಬಡ್ಡಿಗೆ ಹಣವನ್ನ ಕೊಟ್ಟಿರುವುದು. ಇನ್ನೂ 5 ಲಕ್ಷ ಹಣವನ್ನ ನೀನು ಕೊಡಬೇಕು ಎಂದು ಪಟ್ಟು ಹಿಡಿದಿದ್ದ.
ಹೊಸಕೆರೆಹಳ್ಳಿ ಉಮೇಶ್​ ರಂಗನಾಥನಿಗೆ ಅವಾಜ್ ಹಾಕಿರುವ ಆಡಿಯೋ ವೈರಲ್ ಆಗಿದೆ. ಪ್ರಕರಣ ಸಂಬಂಧ ಸಿಸಿಬಿ ಪೊಲೀಸರು ಮೂವರನ್ನು ಬಂಧಿಸಿ ಆರೋಪಿಗಳ ವಿರುದ್ಧ ಆರ್​ಆರ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.