ಮದ್ಯ ಸೇವನೆ ಪ್ರಮಾಣ ಕಡಿತಕ್ಕೆ ತಜ್ಞರ ಸಲಹೆ
• ಸಾರ್ವಜನಿಕ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮದ ಹಿನ್ನೆಲೆಯಲ್ಲಿ ಆಲ್ಕೋಹಾಲ್ ಉತ್ಪನ್ನಗಳಿಗೆ ಹೆಚ್ಚು ಹೆಚ್ಚು ತೆರಿಗೆ ವಿಧಿಸುವಂತೆ ಶಿಫಾರಸು
ಬೆಂಗಳೂರು:ರಾಜ್ಯದಲ್ಲಿ ಮದ್ಯಪಾನ ಪ್ರಮಾಣವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕನ್ಸೂಮರ್ ವಾಯ್ಸ್ ಸಂಸ್ಥೆಯು ಇನ್ ಸ್ಟಿಟ್ಯೂಟ್ ಫಾರ್ ಪಾಲಿಸಿ ರೀಸರ್ಚ್() ಸಹಭಾಗಿತ್ವದಲ್ಲಿ ಹೆಜ್ಜೆ ಇಟ್ಟಿದೆ. ಈ ಸಂಬಂಧ ರಾಜ್ಯ ಸರ್ಕಾರಕ್ಕೆ ಮಹತ್ವದ ಸಲಹೆ ಸೂಚನೆಗಳನ್ನು ನೀಡಲು ವಿವಿಧ ಕ್ಷೇತ್ರಗಳ ತಜ್ಞರ ಸಭೆಯನ್ನು ನಡೆಸಿದೆ.
ಈ ತಜ್ಞರ ತಂಡದಲ್ಲಿ ರಾಜ್ಯ ಹೈಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಪಿ.ಕೃಷ್ಣ ಭಟ್, ಎನ್ ಸಿಡಿ ಕಾರ್ಯಪಡೆಯ ಸದಸ್ಯ ಡಾ.ವಿಶಾಲ್ ರಾವ್ ಯು.ಎಸ್., ಮುಖ್ಯಮಂತ್ರಿಗಳ ಕಾರ್ಯದರ್ಶಿ ಡಾ.ಕೆ.ವಿ. ತ್ರಿಲೋಕ್ ಚಂದ್ರ, ಆರೋಗ್ಯ ಇಲಾಖೆ ಆಯುಕ್ತ ಡಿ.ರಣದೀಪ್ ಸೇರಿದಂತೆ ಇನ್ನಿತರ ಗಣ್ಯರು ಇದ್ದರು.
ಮದ್ಯದ ಸೇವನೆ ಬಳಕೆ ಪ್ರಮಾಣವನ್ನು ಕಡಿಮೆ ಮಾಡುವ ಕುರಿತು ನೀತಿ, ಶಿಫಾರಸುಗಳನ್ನು ರೂಪಿಸು ವುದು ಮತ್ತು ಈ ನಿಟ್ಟಿನಲ್ಲಿ ಕಾರ್ಯೋನ್ಮುಖ ರಾಗುವ ಸಹಭಾಗಿತ್ವವನ್ನು ಹೊಂದುವುದರ ಬಗ್ಗೆ ಸಭೆಯಲ್ಲಿ ವಿಸ್ತೃತವಾಗಿ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಸರ್ಕಾರದ ಎನ್ ಸಿಡಿ ಕಾರ್ಯಪಡೆ ಸದಸ್ಯ ಡಾ.ವಿಶಾಲ್ ರಾವ್ ಯು.ಎಸ್. ಅವರು, “ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಮದ್ಯ ಸೇವನೆ ಪ್ರಮಾಣ ದ್ವಿಗುಣವಾಗುತ್ತಿದೆ. ಇದನ್ನು ತಗ್ಗಿಸುವ ಬಗ್ಗೆ ಸಮಗ್ರ ಚರ್ಚೆಗಳನ್ನು ನಡೆಸಿ ಒಂದು ನೀತಿಯನ್ನು ರೂಪಿಸ ಬೇಕಿದೆ’’ ಎಂದು ಅಭಿಪ್ರಾಯಪಟ್ಟರು.
ಕನ್ಸೂಮರ್ ವಾಯ್ಸ್ ನ ಸಲಹೆಗಾರ ಹೇಮಂತ್ ಉಪಾಧ್ಯಾಯ ಅವರು, “ಮದ್ಯದ ಸೇವನೆಯನ್ನು ವ್ಯಸನವನ್ನಾಗಿ ಮಾಡಿಕೊಳ್ಳುವುದನ್ನು ತಪ್ಪಿಸ ಬೇಕಿದೆ’’ ಎಂದರು.
ಗೇಟ್ ವೇ ಕನ್ಸಲ್ಟಿಂಗ್ ನ ತುಷಾರ್ ಗಾಂಧಿ ಅವರು ಮಾತನಾಡಿ, ಆಲ್ಕೋಹಾಲ್ ಸೇವನೆ ಪ್ರಮಾಣ ಮತ್ತು ಅದರಿಂದ ಆರೋಗ್ಯದ ಮೇಲೆ ಉಂಟಾಗುವ ಪರಿಣಾಮಗಳ ಬಗ್ಗೆ ಅಂಕಿಅಂಶಗಳನ್ನು ಸಭೆಯ ಮುಂದಿಟ್ಟರು. ಈ ಪ್ರಮಾಣವನ್ನು ಗಂಭೀರವಾಗಿ ಪರಿಗಣಿಸಿದ ಸಭೆಯು ಮದ್ಯ ಸೇವನೆ ಪ್ರಮಾಣ ವನ್ನು ಕಡಿಮೆ ಮಾಡುವಂತೆ ಪ್ರೇರೇಪಿಸುವ ಜಾಗೃತಿ ಅಭಿಯಾನಗಳು ಮತ್ತು ಆಲ್ಕೋಹಾಲ್ ಉತ್ಪನ್ನಗಳ ಮೇಲೆ ಹೆಚ್ಚು ಹೆಚ್ಚು ತೆರಿಗೆ ವಿಧಿಸುವ ನೀತಿಗಳು ಜಾರಿಗೆ ಬರಬೇಕೆಂದು ಪ್ರತಿಪಾದಿಸಿದರು.
ನ್ಯಾಯಮೂರ್ತಿ ಪಿ.ಕೃಷ್ಣ ಭಟ್ ಅವರು ಆಲ್ಕೋಹಾಲ್ ಪ್ರಮಾಣವನ್ನು ಸ್ಪಷ್ಟವಾಗಿ ಸೂಚಿಸುವ ವ್ಯವಸ್ಥೆ ಜಾರಿಗೆ ಬರಬೇಕು ಎಂದು ಸಲಹೆ ನೀಡಿ ದರು. ಇದಕ್ಕೆ ಮುಖ್ಯಮಂತ್ರಿಗಳ ಕಾರ್ಯದರ್ಶಿ ಡಾ.ಕೆ.ವಿ.ತ್ರಿಲೋಕ್ ಚಂದ್ರ ಅವರು ತಮ್ಮ ಸಹಮತ ವ್ಯಕ್ತಪಡಿಸಿ, ಸಿಗರೇಟ್ ಪ್ಯಾಕೇಟ್ ಗಳಲ್ಲಿ ಇರುವ ರೀತಿಯಲ್ಲಿ ಈ ಲೇಬಲಿಂಗ್ ವ್ಯವಸ್ಥೆ ಉತ್ತಮ ಎಂದರು.
ಇಂತಹ ನೀತಿ ನಿರೂಪಣೆಗಳನ್ನು ಸಂರಚಿಸುವ ವಿಚಾರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಇಲಾಖೆ ಆಯುಕ್ತ ಡಿ.ರಣದೀಪ್ ಅವರು ತಿಳಿಸಿದರು.
ಐಪಿಆರ್ ನಿರ್ದೇಶಕ ಅಮಿತ್ ಕಾರ್ಣಿಕ್ ಅವರು ಮಾತನಾಡಿ, “ಮದ್ಯ ಸೇವನೆ ಪ್ರಮಾಣವನ್ನು ಕಡಿಮೆ ಮಾಡುವ ದಿಸೆಯಲ್ಲಿ ಮದ್ಯಪಾನ ಸಂಯಮ ಮಂಡಳಿ ಕಾರ್ಯಪ್ರವೃತ್ತವಾಗಬೇಕಾದ ಅಗತ್ಯವಿದೆ’’ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವರ್ವ್ ಫೌಂಡೇಶನ್ ನ ಅಧ್ಯಕ್ಷ ತಿರುಮಲ ರಾವ್, ಟಿಆರ್ ಇಡಿಎ ಸಂಸ್ಥೆಯ ಲಿಂಗರಾಜು ಸೇರಿದಂತೆ ಇನ್ನಿತರರು ಇದ್ದರು.