ನಾಯಂಡಹಳ್ಳಿ ಫ್ಲೈ ಓವರ್ ಮೇಲಿಂದ ಹಾರಿ ಯುವಕ ಆತ್ಮಹತ್ಯೆ
ಬೆಂಗಳೂರು:ರಾಜಧಾನಿ ಬೆಂಗಳೂರಿನ ಪ್ರಮುಖ ಮೇಲ್ಸೇತುವೆ ನಾಯಂಡಹಳ್ಳಿ ಫ್ಲೈ ಓವರ್ ಮೇಲಿಂದ ಹಾರಿ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ಬೈಕ್‌ ಅನ್ನು ಫ್ಲೈ ಓವರ್ ಮೇಲೆ ಪಾರ್ಕಿಂಗ್ ಮಾಡಿ ಏಕಾಏಕಿ ಯುವಕ ಕೆಳಗೆ ಜಿಗಿದಿದ್ದು, ಘಟನಾ ಸ್ಥಳಕ್ಕೆ ಬ್ಯಾಟರಾಯನಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಯುವಕ ಮೇಲ್ಸೇತುವೆಯಿಂದ ಜಿಗಿದ ಕೂಡಲೇ ಸ್ಥಳದಲ್ಲಿದ್ದ ಟ್ರಾಫಿಕ್ ಪೊಲೀಸ್​ ಯುವಕ ರಕ್ಷಣೆಗೆ ಧಾವಿಸಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲು ಮುಂದಾಗಿದ್ದರು. ಆದರೆ ಆ ವೇಳೆಗಾಗಲೇ ಯುವಕ ಕೊನೆಯುಸಿರೆಳಿದ್ದ ಎನ್ನಲಾಗಿದೆ. ಮೃತ ಯುವಕನನ್ನು 32 ವರ್ಷದ ನವೀನ್ ಎಂದು ಗುರುತಿಸಲಾಗಿದ್ದು, ನಗರದ KPTCLನಲ್ಲಿ ಕೆಲಸ ಮಾಡುತ್ತಿದ್ದನಂತೆ.
ಯುವಕ ಸಾವಿನ ಬಗ್ಗೆ ಪೊಲೀಸರು ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದು, ಘಟನೆ ಸಂಬಂಧ ಬ್ಯಾಟರಾಯನಪುರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.
ಮೃತ ನವೀನ್​​ಗೆ ಎರಡು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದು, ಎರಡು ತಿಂಗಳ ಹಿಂದೆ ಕವಿಕಾದಲ್ಲಿ ಕೆಲಸಕ್ಕೆ ಸೇರಿದ್ದನಂತೆ.