ಲೋಕಸಭಾ ಚುನಾವಣೆಗೆ ಬಹಿಷ್ಕಾರ: ವಿವಿಧ ಸ್ಥಳಗಳಲ್ಲಿ ಬ್ಯಾನರ್‌
ಮೂಡಲಗಿ :ತಮ್ಮ ಮಕ್ಕಳಿಗೆ ಶಿಕ್ಷಣದ ಜೊತೆಗ ಕ್ರೀಡಾ ಚಟುವಟಿಕೆಗಳಿಗೆ ಸಿದ್ದತೆ ಮಾಡಿಕೊಳ್ಳವುದಕ್ಕೆ ಸರ್ಕಾರಿ ಶಾಲೆಗೆ ಆಟದ ಮೈದಾನದ ನಿರ್ಮಾಣ ಮತ್ತು ಅದಕ್ಕೆ ಜಾಗ ನೀಡದ ಹಿನ್ನಲೆ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸಿದ ಗ್ರಾಮಸ್ಥರು ವಿವಿಧ ಸ್ಥಳಗಳಲ್ಲಿ ಬ್ಯಾನರ್‌ಗಳನ್ನು ಅಳವಡಿಸಿ ದ್ದಾರೆ.
ತಾಲೂಕಿನ ಯಾದವಾಡ ಗ್ರಾಮದ ಗಿರಿಸಾಗರ ಸರ್ಕಾರಿ ಶಾಲೆಯ ಮಕ್ಕಳಿಗೆ ಆಟದ ಮೈದಾನದ ಸಲುವಾಗಿ ಸಾಕಷ್ಟು ಬಾರಿ ಮನವಿ ಮಾಡಿದರು ಪ್ರಯೋಜನೆವಾಗದ ಹಿನ್ನಲೆ ಗಿರಿಸಾಗರದ ಗ್ರಾಮಸ್ಥರು ಈ ಬಾರಿ ಮೇ 7ರಂದು ನಡೆಯುವ ಲೋಕಸಭಾ ಚುನವಾಣೆಯಲ್ಲಿ ಮತದಾನ ಮಾಡದಂತೆ ನಿರ್ಧರಿಸಿರುವ ಘಟನೆ ರವಿವಾರ ಸಂಜೆ ಜರುಗಿದೆ.
ಈ ವೇಳೆ ಗ್ರಾಪಂ ಉಪ್ಯಾಧ್ಯಕ್ಷ ಕಲ್ಮೇಶ ಗಾಣಿಗೇರ ಮಾತನಾಡಿ, ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಪಠ್ಯ ಎಷ್ಟು ಅವಶ್ಯವೋ ಅಷ್ಟೇ ಪಠ್ಯೇತರ ಚುಟುವಟಿಕೆಗಳು ಅವಶ್ಯವಾಗಿದೆ. ಆದರೆ ಆಟದ ಮೈದಾನವೇ ಹೊಂದಿರದ ಕಾರಣ ಕ್ರೀಡಾ ಚುಟುವಟಿಕೆಯೇ ಇಲ್ಲದೇ ಹೆಚ್ಚಿನ ಸಾಧನೆ ಮಾಡಲು ವಿದ್ಯಾರ್ಥಿಗಳಿಗೆ ಸಾಧ್ಯವಾಗುತ್ತಿಲ್ಲ ಹಾಗೂ ಸ್ವಲ್ಪ ಜಾಗದಲೇ ಪ್ರಾರ್ಥನೆ, ಶಾಲಾ ವಾರ್ಷಿಕೋತ್ಸವ ಇತರೆ ಚಟುವಟಿಕೆಗಳನ್ನು ಮಾಡುವಂತ ಪರಿಸ್ಥಿತಿ ಇರುವುದರಿಂದ ಮಕ್ಕಳು ಆಟದಿಂದ ವಂಚಿತರಾಗುವoತಾಗಿದೆ ಎಂದರು.
ವಿದ್ಯಾರ್ಥಿಗಳಿಗೆ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಪಾಠದ ಜೊತೆಗೆ ಆಟವೂ ಮುಖ್ಯ. ಸರ್ಕಾರವು ಬಿಸಿಯೂಟ, ಸಮವಸ್ತ್ರ, ಶೂ, ಹಾಲು, ಮೊಟ್ಟೆ ನೀಡುತ್ತದೆ. ಆದರೆ ಕ್ರೀಡೆಗೆ ಅಗತ್ಯಕ್ಕೆ ತಕ್ಕಷ್ಟು ಪ್ರೋತ್ಸಾಹ ನೀಡುತ್ತಿಲ್ಲ. ಇದರಿಂದ ಕ್ರೀಡಾಕೂಟದಲ್ಲಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಹೆಚ್ಚಿನ ಸಾಧನ ಮಾಡಲಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಎಸ್‌ಡಿಎಮ್‌ಸಿ ಅಧ್ಯಕ್ಷ ಕಲ್ಲಪ್ಪ ಮಾಲಮನಿ, ಶಂಕರ ತೋಟಗಿ, ಸೈದುಸಾಬ ಚಿಪ್ಪಲಕಟ್ಟಿ, ಶಂಕರ ಭಂಜತ್ರಿ, ಮಂಜು ಸಣ್ಣಕ್ಕಿ, ತುಳಜಪ್ಪ ಜಾಧವ್, ಹಣಮಂತ ತೋಟಗಿ, ಮಹಮ್ಮದಸಾಬ್ ಪರಾಸ್, ಕರೇಪ್ಪ ಇಟ್ಟನ್ನವರ ಇದ್ದರು.