ಪವರ್ ಟಿವಿ ಪ್ರಸಾರಕ್ಕೆ ಅನುಮತಿ ನಿರಾಕರಣೆ ಆದೇಶಕ್ಕೆ ಹೈಕೋರ್ಟ್ ’ಜೈ’
ಬೆಂಗಳೂರು:ಕನ್ನಡದ ಸುದ್ದಿ ವಾಹಿನಿ ಪವರ್ ಟಿವಿ ಪ್ರಸಾರ ಮತ್ತೆ ಆರಂಭಿಸಲು ಕರ್ನಾಟಕ ಹೈಕೋರ್ಟ್ ಅನುಮತಿ ನೀಡಿಲ್ಲ ಜತೆಗೆ ಪರವಾನಿಗೆ ನವೀಕರಿಸುವವರೆಗೂ ಪ್ರಸಾರ ರದ್ದು ಮಾಡಿದ್ದ ಏಕಸದಸ್ಯ ಪೀಠದ ಆದೇಶವನ್ನು ಎತ್ತಿಹಿಡಿಯಲಾಗಿದೆ.
ಪವರ್ ಟಿವಿ ಕಡೆಯಿಂದ ಶೋಕಾಸ್ ನೋಟಿಸ್‌ಗೆ ಸಲ್ಲಿಸಿರುವ ಉತ್ತರವನ್ನು ಪರಿಗಣಿಸಿ ಪರವಾನಿಗೆ ನವೀಕರಿಸುವ ಕುರಿತು 6 ವಾರಗಳಲ್ಲಿ ನಿರ್ಧಾರ ಕೈಗೊಳ್ಳುವಂತೆ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಪ್ರಕರಣ ಸ್ಥಗಿತಗೊಳಿಸಿದ್ದ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಮೆಸರ್ಸ್ ಪವರ್ ಸ್ಮಾರ್ಟ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿ ನಿರ್ದೇಶಕ ದಬ್ಬೇಗಟ್ಟ ಮಧು ಲಕ್ಷ್ಮಣ, ಮೆಸರ್ಸ್ ಮಿಟ್ಕಾನ್ ಇನ್ಫ್ರಾಪ್ರಾಜೆಕ್ಟ್‌ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ನಿರ್ದೇಶಕ ಶ್ರೀಕಾಂತ್ ಮಿಥೇಶ್ ಬಾಂಗ್ಡಿಯಾ, ಪವರ್ ಸ್ಮಾರ್ಟ್ ಮೀಡಿಯಾದ ಬೆಂಗಳೂರಿನ ಹೆಚ್ಚುವರಿ ನಿರ್ದೇಶಕ ರಾಕೇಶ್ ಶೆಟ್ಟಿ ಮೇಲ್ಮನವಿ ಸಲ್ಲಿಸಿದ್ದರು.
ಕೇಬಲ್‌ ಟೆಲಿವಿಷನ್‌ ನೆಟ್‌ವರ್ಕ್‌ಗಳ (ನಿಯಂತ್ರಣ) ಕಾಯಿದೆ-1995ರ ಆದೇಶ ಉಲ್ಲಂಘಿಸಿರುವ ಕಾರಣ ತಕ್ಷ ಣದಿಂದಲೇ ತಮ್ಮ ಚಾನಲ್‌ನಲ್ಲಿ ಸುದ್ದಿಗಳೂ ಸೇರಿದಂತೆ ಯಾವುದೇ ಕಾರ್ಯಕ್ರಮಗಳನ್ನು ಜು.8ರವರೆಗೆ ಪ್ರಸಾರ ಮಾಡಬಾರದು ಎಂದು ಪ್ರಕರಣದ ಪ್ರತಿವಾದಿ ಮೆಸರ್ಸ್‌ ಪವರ್‌ ಸ್ಮಾರ್ಟ್‌ ಮೀಡಿಯಾ ಪ್ರೈವೇಟ್‌ ಲಿಮಿಟೆಡ್‌ ಕಂಪನಿಯ ಪ್ರತಿನಿಧಿ, ಹೆಚ್ಚುವರಿ ನಿರ್ದೇಶಕ ರಾಕೇಶ್‌ ಸಂಜೀವ ಶೆಟ್ಟಿ ಅಲಿಯಾಸ್‌ ರಾಕೇಶ್‌ ಶೆಟ್ಟಿಗೆ ನಿರ್ದೇಶನ ನೀಡಿ ಆದೇಶ ಹೊರಡಿಸಿತ್ತು.