ಕುಣಿಗಲ್ ಗೆ ಹರಿದ ಹೇಮಾವತಿ ನೀರು
ತುಮಕೂರು :ಹೇಮಾವತಿ ನೀರು ತುಮಕೂರಿನಿಂದ ಹಾದು ಕುಣಿಗಲ್ ಗೆ ಶುಕ್ರವಾರ ಹರಿದಿದೆ.
ಚಾನಲ್ ವೀಕ್ಷಿಸಿ ಮಾತನಾಡಿದ ಮಾಜಿ ಸಚಿವ ಸೊಗಡು ಶಿವಣ್ಣ, ಕುಣಿಗಲ್ ದೊಡ್ಡ ಕೆರೆ ಬಳಿಯ ಚಾನಲ್ ಗೇಟ್ ತೆರೆದರೆ , ಈಗಾಗಲೇ ಆಧುನಿಕರಣ ಗೊಂಡಿರುವ ಚಾಲನ್192 ಕಿ.ಮೀ. ನಿಂದ ಕುಣಿಗಲ್ ನ ಹುತ್ತರೀದುರ್ಗ ಮತ್ತು ಹುಲಿಯೂರುದುರ್ಗಕ್ಕೂ ಹೇಮಾವತಿ ನೀರನ್ನು ಹರಿಸಬಹುದೆಂದು ತಿಳಿಸಿದ್ದಾರೆ.
ಶ್ರೀರಂಗ ಏತ ನೀರಾವರಿ ಯೋಜನೆ ಸ್ಥಗಿತಕ್ಕೆ ಆಗ್ರಹ
ಹೇಮಾವತಿ ನೀರನ್ನು ಪ್ರತಿ ವರ್ಷದ ಮಳೆಗಾಲ ಪ್ರಾರಂಭಗೊಂಡ ನಂತರ ಸುಮಾರು 8 ರಿಂದ 10 ಟಿ.ಎಂ.ಸಿ. ನೀರು ಸಂಗ್ರಹವಾದ ನಂತರ ಗೊರೂರು ಜಲಾಶಯದಿಂದ ನೀರನ್ನು ಆಧುನೀಕರಣಗೊಂಡ ನಾಲೆಯ ಮೂಲಕ ತುಮಕೂರು ಜಿಲ್ಲೆಗೆ ಪೂರ್ಣ ಪ್ರಮಾಣದಲ್ಲಿ ಹರಿಸಿದರೆ, ಜಿಲ್ಲೆಯ ಕೊನೆಯ ಭಾಗವಾದ ಕುಣಿಗಲ್ ಗೆ ಸರ್ಕಾರ ನಿಗದಿಪಡಿಸಿರುವ 3 ಟಿ.ಎಂ.ಸಿ. ನೀರನ್ನು ಸಂಪೂರ್ಣವಾಗಿ ಹರಿಸಲು ಸಾಧ್ಯವಾಗುತ್ತದೆ.
ಇದರಿಂದ ಗುಬ್ಬಿ ಬಳಿಯ ರಾಂಪುರದಿಂದ ಕುಣಿಗಲ್-ಮಾಗಡಿ ಭಾಗಕ್ಕೆ 12 ಅಡಿ ವಿನ್ಯಾಸದ ಬೃಹತ್ ಪೈಪ್ ಅಳವಡಿಸಿ, ಹೇಮಾವತಿ ನೀರು ಹರಿಸುವ 34.5 ಕಿ.ಮೀ. ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಸುಮಾರು ಒಂದು ಸಾವಿರ ಕೋಟಿ ರೂ.ಗಳ ಶ್ರೀರಂಗ ಏತ ನೀರಾವರಿ ಯೋಜನೆ ಅವಶ್ಯಕತೆ ಬೇಡವಾಗುತ್ತದೆ. ಇದೊಂದು ಅವೈಜ್ಞಾನಿಕ ಹಾಗೂ ಜನ ವಿರೋಧಿ ಯೋಜನೆಯಾಗಿದ್ದು , ತುಮಕೂರು ಜಿಲ್ಲೆಯ ಜನ-ಜಾನುವಾರು, ಕೈಗಾರಿಕಾ ಭಿವೃದ್ಧಿ, ಶ್ಯೆಕ್ಷಣಿಕ ಕ್ಷೇತ್ರವೂ ಸೇರಿದಂತೆ ತುಮಕೂರು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಮಾರಕವಾಗಿ, ಮರಣಶಾಸನವಾಗಿದೆ ಎಂದು ಎಚ್ಚರಿಸಿರುವ ಸೊಗಡು ಶಿವಣ್ಣ , ಕುಣಿಗಲ್-ಮಾಗಡಿಗೆ ಎಕ್ಸ್‌ಪ್ರೆಸ್ ಲಿಂಕ್ ಚಾನಲ್ ಯೋಜನೆ ಸ್ಥಗಿತಕ್ಕೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ವಿರೋಧಿ ಹೋರಾಟ ತುಮಕೂರು ಜಿಲ್ಲಾ ಸಮಿತಿಯ ಪ್ರಮುಖರಾದ ಪಂಚಾಕ್ಷರಯ್ಯ, ಧನಿಯಾಕುಮಾರ್, ಸ್ಥಳೀಯರಾದ ಆಕಾಶ್, ಶಶಾಂತ್ ಇದ್ದಾರೆ.