ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ : ನಿವ್ವಳ ಲಾಭ ₹ 301 ಕೋಟಿ
ಹಣಕಾಸು ವರ್ಷ 2024-25ರ ಮೊದಲ ತ್ರೈಮಾಸಿಕದ ಹಣಕಾಸು ಸಾಧನೆ
• ರಿಟೇಲ್‌ ಠೇವಣಿ ನಿರಂತರ ಹೆಚ್ಚಳ• ಸಾಲ ನೀಡಿರುವ ಒಟ್ಟಾರೆ ಮೊತ್ತ ₹ 30,069 ಕೋಟಿ
ಬೆಂಗಳೂರು ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಲಿಮಿಟೆಡ್‌, 2024ರ ಜೂನ್ 30ಕ್ಕೆ ಕೊನೆಗೊಂಡ ತ್ರೈಮಾಸಿಕದ ಹಣಕಾಸು ಸಾಧನೆ ಪ್ರಕಟಿಸಿದ್ದು, ₹ 301 ಕೋಟಿ ಮೊತ್ತದ ನಿವ್ವಳ ಲಾಭ ಗಳಿಸಿದೆ.
ಈ ಅವಧಿಯಲ್ಲಿ ಸಾಲ ನೀಡಿಕೆ ಮತ್ತು ಠೇವಣಿ ಸಂಗ್ರಹದಲ್ಲಿ ಗಣನೀಯ ಹೆಚ್ಚಳ ಸಾಧಿಸಲಾಗಿದೆ. ಠೇವಣಿಗಳ ಸಂಗ್ರಹವು ವರ್ಷದಿಂದ ವರ್ಷಕ್ಕೆ ಶೇ 22ರಷ್ಟು ಮತ್ತು ತ್ರೈಮಾಸಿಕದಿಂದ ತ್ರೈಮಾಸಿಕದಲ್ಲಿ ಶೇ 3ರಷ್ಟು ಹೆಚ್ಚಳ ಸಾಧಿಸಿ ₹ 32,514 ಕೋಟಿಗಳಿಗೆ ತಲುಪಿದೆ. ಒಟ್ಟಾರೆ ಸಾಲ ನೀಡಿಕೆ ಮೊತ್ತವು ವರ್ಷದಿಂದ ವರ್ಷಕ್ಕೆ ಶೇ 19ರಷ್ಟು ಹೆಚ್ಚಳಗೊಂಡು ₹ 30,069 ಕೋಟಿಗೆ ಏರಿಕೆಯಾಗಿದೆ.
ಸಾಲಗಳ ಮೇಲಿನ ಲಾಭದ ಪ್ರಮಾಣವು ಆರೋಗ್ಯಕರವಾಗಿದ್ದು, ಒಟ್ಟು ವಸೂಲಾಗದ ಸಾಲ (ಜಿಎನ್‌ಪಿಎ) ಮತ್ತು ನಿವ್ವಳ ವಸೂಲಾಗದ ಸಾಲದ ಪ್ರಮಣಾವು ಕ್ರಮವಾಗಿ ಶೇ 2.3 ಮತ್ತು ಶೇ 0.4ರಷ್ಟಿದೆ. ಈ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಗ್ರಾಹಕರಿಗೆ ವಿತರಿಸಿರುವ ಒಟ್ಟಾರೆ ಸಾಲದ ಮೊತ್ತವು ₹ 5,286 ಕೋಟಿಗಳಷ್ಟಿದ್ದು, ಹಿಂದಿನ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇ 21ರಷ್ಟು ಕಡಿಮೆಯಾಗಿದೆ. ನಿವ್ವಳ ಬಡ್ಡಿ ವರಮಾನವು ವರ್ಷದಿಂದ ವರ್ಷಕ್ಕೆ (ಎನ್‌ಐಐ) ಶೇ 19 ಮತ್ತು ತ್ರೈಮಾಸಿಕ ಅವಧಿಯಲ್ಲಿ ಶೇ 1ರಷ್ಟು ಏರಿಕೆಯಾಗಿ ₹ 941 ಕೋಟಿಗೆ ತಲುಪಿದೆ.
ಭವಿಷ್ಯದ ವೆಚ್ಚಗಳಿಗೆ ತೆಗೆದು ಇರಿಸಿದ ಮೊತ್ತದ ಮುಂಚಿನ ಲಾಭವು ವರ್ಷದಿಂದ ವರ್ಷಕ್ಕೆ ಶೇ 11 ರಷ್ಟು ಏರಿಕೆಯಾಗಿ ₹ 510 ಕೋಟಿಗೆ ತಲುಪಿದೆ. ತೆರಿಗೆ ಪಾವತಿ ನಂತರದ ನಿವ್ವಳ ಲಾಭವು (ಪಿಎಟಿ) ₹ 301 ಕೋಟಿಗಳಷ್ಟಾಗಿದೆ. ಇದು ವರ್ಷದಿಂದ ವರ್ಷಕ್ಕೆ ಶೇ 7ರಷ್ಟು ಮತ್ತು ತ್ರೈಮಾಸಿಕದಿಂದ ತ್ರೈಮಾಸಿಕ ದಲ್ಲಿ ಶೇ 9ರಷ್ಟು ಇಳಿಕೆ ದಾಖಲಿಸಿದೆ.
ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮತ್ತು ಸಿಇಒ ಸಂಜೀವ್ ನೌತಿಯಾಲ್ ಅವರು ಮಾತನಾಡಿ, ʼಬ್ಯಾಂಕ್‌ನ ಸಾಲ ಮತ್ತು ಠೇವಣಿಗಳ ಮೊತ್ತವು ಈ ತ್ರೈಮಾಸಿಕ ಅವಧಿಯಲ್ಲಿ ₹ 30,069 ಕೋಟಿಗೆ ತಲುಪಿದೆ. ವಹಿವಾಟಿಗೆ ಸಂಬಂಧಿಸಿದ ನಮ್ಮ ಗುರಿ ಸಾಧಿಸುವ ನಿಟ್ಟಿನಲ್ಲಿ ನಾವು ಸರಿಯಾದ ಹಾದಿಯಲ್ಲಿ ಸಾಗುತ್ತಿರುವ ಬಗ್ಗೆ ನನಗೆ ಸಂತಸವಾಗುತ್ತಿದೆ.
ನಮ್ಮ ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ಕಿರು ಅಡಮಾನ, ಚಿನ್ನದ ಮೇಲಿನ ಸಾಲ ಮತ್ತು ವಾಹನ ಖರೀದಿ ಸಾಲಗಳು ನಮ್ಮ ವಹಿವಾಟು ಹೆಚ್ಚಳದಲ್ಲಿ ಗಮನಾರ್ಹ ಕೊಡುಗೆ ನೀಡುತ್ತಿವೆ. ಈ ಹಣಕಾಸು ವರ್ಷದ ದ್ವಿತೀಯಾರ್ಧದಲ್ಲಿ ವಹಿವಾಟು ಸುಧಾರಣೆಯಾಗುವ ಬಗ್ಗೆ ನಮಗೆ ದೃಢ ವಿಶ್ವಾಸ ಇದೆ. ನಮ್ಮ ಗ್ರಾಹಕರಿಗೆ ಇನ್ನಷ್ಟು ಉತ್ತಮ ಸೇವೆ ಒದಗಿಸಲು ಮೌಲ್ಯವರ್ಧಿತ ಸೇವೆಗಳ ವಿಸ್ತರಣೆ, ಸೇವಾ ಗುಣಮಟ್ಟ ಸುಧಾರಣೆ, ತಂತ್ರಜ್ಞಾನದ ಗರಿಷ್ಠ ಬಳಕೆಗೆ ಗಮನ ನೀಡಲಾಗುವುದುʼ ಎಂದು ಹೇಳಿದ್ದಾರೆ.