ಯುವಜನತೆ ಶೈಕ್ಷಣಿಕವಾಗಿ ಏಳಿಗೆಯಾಗಬೇಕು
ತುಮಕೂರು: ಯಾವುದೇ ಒಂದು ಸಮುದಾಯದ ಯುವಜನತೆ ಆರ್ಥಿಕವಾಗಿ ಸದೃಢವಾಗಿದ್ದರೆ, ಶೈಕ್ಷಣಿಕವಾಗಿ ಪ್ರಬುದ್ಧರಾಗಿದ್ದರೆ ಅಂತಹ ಸಮಾಜ ಮಾತ್ರ ಸಮಗ್ರವಾಗಿ ಏಳಿಗೆ ಹೊಂದಲು ಸಾಧ್ಯ ಎಂದು ಸಿದ್ಧಗಂಗಾ ವಿದ್ಯಾಸಂಸ್ಥೆ ಕಾರ್ಯದರ್ಶಿ ಟಿ.ಕೆ.ನಂಜುಂಡಪ್ಪ ತಿಳಿಸಿದರು.
ನಗರದ ಸ್ನೇಹಸಂಗಮ ಬ್ಯಾಂಕ್ ಆವರಣದಲ್ಲಿ ನಡೆದ ಅಖಿಲಭಾರತ ವೀರಶೈವ ಲಿಂಗಾಯತ ಮಹಾಸಭಾದ ನೂತನ ಕಾರ್ಯನಿರ್ವಾಹಕ ಸಮಿತಿಯ ಅಧ್ಯಕ್ಷರು ಹಾಗೂ ಸಮಿತಿಯ ಸದಸ್ಯರಿಗೆ ಕಾರ್ಯಕಾರಿ ಮಂಡಳಿಗೆ ಪ್ರಮಾಣ ಪತ್ರ ನೀಡುವ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿ ನೂತನವಾಗಿ ಮಹಾಸಭಾಗೆ ಆಯ್ಕೆಯಾಗಿರುವ ಎಲ್ಲಾ ಸದಸ್ಯರು ಯುವಜನರಿಗೆ ಮಾರ್ಗದರ್ಶನವಾಗುವಂತಹ ಕಾರ್ಯಕ್ರಮಗಳನ್ನು ರೂಪಿಸಬೇಕು, ಅಶಕ್ತರಿಗೆ ಆಸರೆ, ಮಹಿಳೆಯರಿಗೆ ಆತ್ಮವಿಶ್ವಾಸ ಮೂಡಿಸುವಲ್ಲಿ ಮಹಸಭಾದ ಕಾರ್ಯಗಳು ನಿರಂತರವಾಗಿ ನಡೆಯಬೇಕು ಎಂದು ಕರೆನೀಡಿದರು.
ಸಮಾಜದ ಮುಖಂಡರಾದ ಕೋರಿ ಮಂಜಣ್ಣ ಮಾತನಾಡಿ ಅಖಿಲ ಭಾರತ ಲಿಂಗಾಯತ ವೀರಶೈವ ಮಹಾಸಭಾ ಸಮುದಾಯದ ಸಂಘಟನೆಯಲ್ಲಿ ದಶಕಗಳಿಂದ ಇಡೀ ದೇಶದಾದ್ಯಂತ ಸೇವೆ ಸಲ್ಲಿಸುತ್ತಾ ಬಂದಿದೆ. ನೂತನ ಕಾರ್ಯಕಾರಣಿ ಸದಸ್ಯರು ಕ್ರಿಯಾಶೀಲ ಅಧ್ಯಕ್ಷರಾದ ಡಾ.ಎಸ್.ಪರಮೇಶ್ ನೇತೃತ್ವದಲ್ಲಿ ಅವರ ಕೈ ಬಲಪಡಿಸಿ ಸಂಘದಲ್ಲಿ ಹೊಸತನ ತರಬೇಕು ಎಂದರು.
ನೂತನ ಜಿಲ್ಲಾಧ್ಯಕ್ಷರಾದ ಡಾ.ಎಸ್.ಪರಮೇಶ್ ಮಾತನಾಡಿ ಜಿಲ್ಲೆಯ ಎಲ್ಲಾ ಮಹಾಸಭಾದ ಬಂಧುಗಳು ಬಹಳಷ್ಟು ನಿರೀಕ್ಷೆಯಿಂದ ಗೊಂದಲದ ನಡುವೆಯೂ ನನಗೆ ಮತ ನೀಡಿ ಅವಕಾಶ ನೀಡಿದ್ದಾರೆ. ಸಂಘಟನಾತ್ಮಕ ದೃಷ್ಠಿಕೋನದಿಂದ ಅತ್ಯಂತ ಕ್ರಿಯಾಶೀಲ ಸಮಿತಿ ನಿರ್ಮಾಣವಾಗಿದ್ದು ಇಡೀ ರಾಷ್ಟ್ರದಲ್ಲಿ ಹೆಸರುಗಳಿಸುವಂತಹ ಕಾರ್ಯಕ್ರಮಗಳನ್ನು ರೂಪಿಸಿ ಅಹರ್ನಿಶಿ ದುಡಿಯುವುದಾಗಿ ತಿಳಿಸಿದರು.
ಹಾನಗಲ್ ಕುಮಾರಸ್ವಾಮಿ ಶಿವಯೋಗಿಗಳಿಂದ ಆರಂಭವಾದ ಮಹಾಸಭಾದ ಹುಟ್ಟು ಹಾಗೂ ಬೆಳವಣಿಗೆ ಬಗ್ಗೆ ಸಮಾಜದ ಹಿರಿಯ ಮುಖಂಡ ರಾಜಶೇಖರ್ ತಿಪಟೂರು ಮಾತನಾಡಿದರು.
30 ಜಿಲ್ಲಾ ಕಾರ್ಯಕಾರಿ ಮಂಡಿಳಿ ಸದಸ್ಯರಿಗೆ ಚುನಾವಣಾ ಅಧಿಕಾರಿ ಶಿವಯೋಗಿಸ್ವಾಮಿ ನೇತೃತ್ವದಲ್ಲಿ ಪ್ರಮಾಣಪತ್ರ ವಿತರಿಸಲಾಯಿತು.
ಮಾಜಿ ಸಚಿವರಾದ ಸೊಗಡು ಶಿವಣ್ಣ, ಸಮಾಜದ ಮುಖಂಡರಾದ ಸ್ನೇಹಸಂಗಮ ಮಂಜಣ್ಣ, ಸಮಾಜದ ಹಿರಿಯ ಮುಖಂಡರು ತಿಪಟೂರು ರಾಜಶೇಖರ್, ಸಾಗರನಹಳ್ಳಿ ನಟರಾಜು, ಕೆ.ಜಿ.ವೈ.ಸಿದ್ಧಲಿಂಗಸ್ವಾಮಿ, ಕಸಾಪ ಅಧ್ಯಕ್ಷ ಸಿದ್ಧಲಿಂಗಯ್ಯ, ವೀರಶೈವ ಬ್ಯಾಂಕಿನ ಉಪಾಧ್ಯಕ್ಷರು ಮಲ್ಲಿಕಾರ್ಜುನ್ ಸೇರಿದಂತೆ ತುಮಕೂರು ಜಿಲ್ಲೆಯ ಎಲ್ಲಾ ತಾಲೂಕು ಘಟಕಗಳ ಅಧ್ಯಕ್ಷರು ಹಾಗೂ ಸದಸ್ಯರು ಹಾಗೂ ಡಾ.ಎಸ್.ಪರಮೇಶ್‌ ಹಿತೈಷಿ ಬಳಗದ ಕಾಂತರಾಜು ಹಾಗೂ ಇತರೆ ಸದಸ್ಯರು ಹಾಜರಿದ್ದರು.