ದೇವಾಲಯ‌ ಸ್ಥಳಾಂತರಿಸಿದರೆ ತುಮಕೂರು ಚಲೋ: ಪ್ರಮೋದ್ ಮುತಾಲಿಕ್
ತುಮಕೂರು :ನಗರದಲ್ಲಿ ಮಲ್ಟಿ ಯುಟಿಲಿಟಿ ಮಾಲ್‌ ನಿರ್ಮಾಣಕ್ಕಾಗಿ ವಿನಾಯಕ ದೇವಾಲಯ ಸ್ಥಳಾಂತರಕ್ಕೆ ಮುಂದಾದರೆ ಹಿಂದೂಪರ ಸಂಘಟನೆ ಗಳ ನೇತೃತ್ವದಲ್ಲಿ ತುಮಕೂರು ಚಲೋ ಹಮ್ಮಿಕೊಳ್ಳಲಾಗುವುದು ಎಂದು ಶ್ರೀರಾಮಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ತಿಳಿಸಿದ್ದಾರೆ.
ಗುರುವಾರ ಮಲ್ಟಿ ಮಾಲ್ ನಿರ್ಮಿಸಲು ಮುಂದಾಗಿರುವ ಸ್ಥಳಕ್ಕೆ ಭೇಟಿ ನೀಡಿ ಹಿಂದೂಪರ ಸಂಘಟನೆಗಳ ಮುಖಂಡರು ಹಾಗೂ ಸ್ಥಳೀಯ ವರ್ತಕ ರೊಂದಿಗೆ ಚರ್ಚಿಸಿ ಮಾತನಾಡಿದರು.
ರಾಜ್ಯದಲ್ಲಿ ಸಾಕಷ್ಟು ವಿವಾದಿತ ದೇವಾಲಯಗಳು, ಪ್ರಾರ್ಥನಾ ಮಂದಿರಗಳಿದ್ದು ಅವುಗಳ ಸ್ಥಳಾಂತರಕ್ಕೆ ಮುಂದಾಗದ ಸ್ಥಳೀಯ ಆಡಳಿತ ಹಾಗೂ ಸರ್ಕಾರ ಏಕಾಏಕಿ ಮಾಲ್ ನಿರ್ಮಾಣದ ಹೆಸರಿನಲ್ಲಿ ಹಲವು ವರ್ಷಗಳಿಂದ ಪೂಜೆ ಸಲ್ಲಿಸುತ್ತಿರುವ ವಿನಾಯಕ ದೇವಾಲಯವನ್ನು ಸ್ಥಳಾಂತರಕ್ಕೆ ಮುಂದಾಗಿರುವುದು ನಿಜಕ್ಕೂ ಖಂಡನೀಯ ಎಂದರು.
ಹಲವು ವರ್ಷಗಳಿಂದ ಸ್ಥಳದಲ್ಲಿ ಇರುವ ದೇವಾಲಯಕ್ಕೆ ಪೂಜೆ ಸಲ್ಲಿಸುತ್ತಿರುವ ಹಿಂದೂಗಳ ಭಾವನೆಗೆ ಧಕ್ಕೆಯಾಗದಂತೆ ನಡೆದುಕೊಳ್ಳಬೇಕಿರುವುದು, ಸ್ಥಳೀಯ ಆಡಳಿತ,ಸರ್ಕಾರ ಹಾಗೂ ಗೃಹ ಸಚಿವರ ಕರ್ತವ್ಯ. ಕಾನೂನು ಬಾಹಿರವಾದ ಕಂಟ್ರಾಕ್ಟರ್ ಗೆ ಕಾಮಗಾರಿಯ ಗುತ್ತಿಗೆ ನೀಡಿದ್ದು ಇದರ ನಡುವೆ ದೇವಾಲಯ ಹಾಗೂ ಪಾರ್ಕ್‌ ವಿಚಾರದಲ್ಲಿ ಕೈ ಹಾಕಿರುವುದು ಒಳ್ಳೆಯ ನಡೆಯಲ್ಲ .ಒಂದು ವೇಳೆ ದೇವಾಲಯದ ಸ್ಥಳಾಂತರ ಹಾಗೂ ಮಾಲ್ ನಿರ್ಮಾಣಕ್ಕೆ ಮುಂದಾದರೆ ರಾಜ್ಯದ್ಯಂತ ಹಿಂದೂಪರ ಸಂಘಟನೆಗಳನ್ನ ಒಗ್ಗೂಡಿಸಿ ತುಮಕೂರು ಚಲೋ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್‌ ಮುಖಂಡ ಶ್ರೀನಿವಾಸ್‌,ಬಜರಂಗದಳದ ಮಂಜು ಭಾರ್ಗವ್, ಯತೀಶ್ ಇತರರು ಉಪಸ್ಥಿತರಿದ್ದರು.