ಝೀ5ನಲ್ಲಿ ಕನ್ನಡ ಡಬ್ಬಿಂಗ್‌ನೊಂದಿಗೆ ಸೆ.13ಕ್ಕೆ ಪ್ರಸಾರವಾಗಲಿರುವ ಮಲಯಾಳಂನ ಹಾಸ್ಯಮಯ ಚಿತ್ರ ‘ನುನಕುಝಿ’
ಬೆಂಗಳೂರು:ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಂಡಿರುವ ಮಲಯಾಳಂನ ಚಲನಚಿತ್ರ ʼನುನಕುಝಿʼ, ಓಣಂ ವೇಳೆಗೆ (ಇದೇ 13ರಂದು) ಝೀ5 (ZEE5) ವೇದಿಕೆಯಲ್ಲಿ ವಿಶ್ವದಾದ್ಯಂತ ಪ್ರಸಾರವಾಗಲಿದೆ.
ವಿಶ್ವದಾದ್ಯಂತ ಬಾಕ್ಸ್‌ಆಫೀಸ್‌ನಲ್ಲಿ ₹ 20 ಕೋಟಿ ಮತ್ತು ಭಾರತದಾದ್ಯಂತ ₹ 8 ಕೋಟಿ ಗಳಿಸಿರುವ ಈ ಹಾಸ್ಯ ಪ್ರಧಾನ ಚಿತ್ರವನ್ನು ಖ್ಯಾತ ಚಿತ್ರ ನಿರ್ಮಾಪಕ ಜೀತು ಜೋಸೆಫ್‌ ಅವರು ನಿರ್ಮಿಸಿದ್ದು, ಬಹುಮುಖ ಪ್ರತಿಭೆಯ ಬಾಸಿಲ್‌ ಜೋಸೆಫ್‌ ಮತ್ತು ಗ್ರೇಸ್‌ ಆಂಟೋನಿ ಅವರು ನಟಿಸಿದ್ದಾರೆ.
ಇದೇ 13ರಂದು ʼ ನುನಕುಝಿʼ, ಝೀ5 -ನಲ್ಲಿ ಕನ್ನಡ ಮತ್ತು ತೆಲುಗು ಭಾಷೆಯ ಡಬ್ಬಿಂಗ್‌ನೊಂದಿಗೆ ಪ್ರಸಾರ ವಾಗಲಿದೆ.
ಆದಾಯ ತೆರಿಗೆ ಅಧಿಕಾರಿ ವಶಪಡಿಸಿಕೊಂಡಿದ್ದ ತನ್ನ ಲ್ಯಾಪ್‌ಟಾಪ್ ಮರುಪಡೆಯಲು ಪ್ರಯತ್ನಿಸುತ್ತಿದ್ದ ಚಿತ್ರದ ನಾಯಕ ಇಬಿ, ತನ್ನ ವಿಚ್ಛೇದನದ ಪ್ರಕರಣದಲ್ಲಿ ಸಿಲುಕಿರುವ ರೆಸ್ಮಿತಾಳನ್ನು ಮುಖಾಮುಖಿಯಾಗುತ್ತಾನೆ. ಮೃತ ದಂತವೈದ್ಯ, ಬಂಧಿತ ಮಹಿಳೆ ಮತ್ತು ಮಹತ್ವಾಕಾಂಕ್ಷಿ ಚಿತ್ರ ನಿರ್ಮಾಪಕ ಒಳಗೊಂಡ ವಿಚಿತ್ರ ಸನ್ನಿವೇಶಗಳ ಜಾಲದಲ್ಲಿ ಇವರಿಬ್ಬರೂ ಸಿಲುಕಿಕೊಳ್ಳುತ್ತಾರೆ. ಗೊಂದಲ ಮತ್ತು ಅನಿರೀಕ್ಷಿತ ತಿರುವು ಪಡೆಯುವ ಘಟನಾವಳಿಗಳು ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸುತ್ತವೆ. ತಪ್ಪುಗ್ರಹಿಕೆ ಮತ್ತು ಕಾಕತಾಳೀಯ ಘಟನಾವಳಿಗಳ ಸುಳಿಯಲ್ಲಿ ಸಿಲುಕಿ ಕೊಳ್ಳುವ ಇಬಿ, ಈ ಗೋಜಲಿನಿಂದ ಹೊರ ಬರುವನೆ ಎನ್ನುವ ಕುತೂಹಲ ಒಳಗೊಂಡಿರುವ ಚಲನಚಿತ್ರವು ಚಿತ್ರ ರಸಿಕರ ಮನರಂಜಿಸುವಲ್ಲಿ ಸಫಲವಾಗಿದೆ.
ʼನುನಕುಝಿʼ ಚಿತ್ರವು ಬದುಕಿನ ಅನಿರೀಕ್ಷಿತ ತಿರುವುಗಳ ಸಂಭ್ರಮಾಚರಣೆಯ ಚಿತ್ರಣ ಒಳಗೊಂಡಿದ್ದು, ಸರಣಿ ಯೋಪಾದಿ ಹಾಸ್ಯ ಪ್ರಸಂಗಗಳನ್ನು ಹೆಣೆದಿರುವುದು ಚಿತ್ರ ರಸಿಕರಿಗೆ ಮೆಚ್ಚುಗೆ ಆಗಲಿದೆʼ ಎಂದು ನಿರ್ದೇಶಕ ಜೀತು ಜೋಸೆಫ್‌ ಹೇಳಿದ್ದಾರೆ.
ʼಸಾಮಾನ್ಯ ವ್ಯಕ್ತಿಯು ಅಸಾಮಾನ್ಯ ಸನ್ನಿವೇಶಗಳಲ್ಲಿ ಸಿಲುಕಿಕೊಂಡು ಒದ್ದಾಡುವ ಸಂದರ್ಭಗಳು ವೀಕ್ಷಕರಲ್ಲಿ ನಗೆ ಉಕ್ಕಿಸಲಿವೆ. ಚಿತ್ರಮಂದಿರಗಳಲ್ಲಿ ನಮಗೆ ಉತ್ತೇಜಕರ ಸ್ಪಂದನೆ ದೊರೆತಿದ್ದು, ಈಗ ಝೀ5ನಲ್ಲಿ ಪ್ರಸಾರವಾಗುವ ಹಾಸ್ಯ ಹಾಗೂ ಮನರಂಜನೆಯೇ ಪ್ರಧಾನವಾಗಿರುವ ಚಿತ್ರವನ್ನು ವೀಕ್ಷಿಸಿ ಓಣಂ ಅನ್ನು ಹೆಚ್ಚಿನ ಸಂಭ್ರಮದಿಂದ ಆಚರಿಸಲಿ ʼ ಎಂದು ನಟ ಬಾಸಿಲ್‌ ಜೋಸೆಫ್‌ ಶುಭ ಹಾರೈಸಿದ್ದಾರೆ.