ಶೂನ್ಯ ಟಿಕೆಟ್‌ ನಿರಾಕರಿಸಿ ಗಮನ ಸೆಳೆದ ಶಂಕ್ರಮ್ಮ ರಾಘವೇಂದ್ರ ಗೌಡರ
ಅಮೀನಗಡ: ಶಂಕ್ರಮ್ಮ ರಾಘವೇಂದ್ರ ಗೌಡರ ಶೂನ್ಯ ಟಿಕೆಟ್‌ ನಿರಾಕರಿಸಿ ಹಣ ನೀಡಿ ಟಿಕೆಟ್ ಪಡೆದು ಗಮನ ಸೆಳೆದಿದ್ದಾರೆ.
ಕಮತಗಿ ಪಟ್ಟಣಕ್ಕೆ ಸಾರಿಗೆ ಸಂಸ್ಥೆ ಬಸ್‌ನಲ್ಲಿ ತೆರಳುವ ವೇಳೆ ನಿರ್ವಾಹಕ ಆಧಾರ್ ಕಾರ್ಡ್ ತೋರಿಸಿ ಟಿಕೆಟ್ ಉಚಿತವಾಗಿ ಕೊಡುತ್ತೇನೆ ಎಂದಾಗ ಅದನ್ನು ನಿರಾಕರಿಸಿದ ಅವರು ಹಣ ನೀಡುತ್ತೇವೆ. ಕಮತಗಿಗೆ ಟಿಕೆಟ್ ಕೊಡಿ ಎಂದಿದ್ದಾರೆ.
’ಒಂದು ಕಡೆ ಉಚಿತವೆಂದು ಮತ್ತೊಂದು ಕಡೆ ತೆರಿಗೆ ಹೇರುವ ಮೂಲಕ ಪರೋಕ್ಷವಾಗಿ ನಾವೇ ಎಲ್ಲವನ್ನು ನಮ್ಮ ಮೈಮೇಲೆ ಎಳೆದುಕೊಳ್ಳುವ ಸನ್ನಿವೇಶದಲ್ಲಿದ್ದೇವೆ. ಹೀಗಾಗಿ ಇಂತಹ ಉಚಿತ ಯೋಜನೆಗಳನ್ನು ವೈಯ ಕ್ತಿಕವಾಗಿ ನಿರಾಕರಿಸಿದ್ದೇನೆ’ ಎಂದು ಶಂಕ್ರಮ್ಮ ಗೌಡರ ಹೇಳುತ್ತಾರೆ.
ಸರ್ಕಾರ ಉಚಿತವಾಗಿ ನೀಡುವುದಾದರೆ ಆರೋಗ್ಯ, ಶಿಕ್ಷಣ ನೀಡಲಿ. ಇಂದಿನ ದಿನದಲ್ಲಿ ಖಾಸಗೀಕರಣ ಸೇವೆಯಿಂದ ಬಹುತೇಕ ಸರ್ಕಾರಿ ವ್ಯವಸ್ಥೆಯಲ್ಲಿ ಸೌಲಭ್ಯ ದೊರೆಯುತ್ತಿಲ್ಲ. ಸರ್ಕಾರಿ ಆಸ್ಪತ್ರೆ, ಸರ್ಕಾರಿ ಶಿಕ್ಷಣ ವ್ಯವಸ್ಥೆಯಲ್ಲಿ ಮತ್ತಷ್ಟು ಯೋಜನೆ, ಸೌಲಭ್ಯ ಒದಗಿಸುವಂತಾಗಲಿ ಎಂದರು.
ಶಂಕ್ರಮ್ಮ ಗೌಡರ ಅವರು ಈ ಹಿಂದೆ ಸ್ಥಳೀಯ ಪಟ್ಟಣ ಪಂಚಾಯ್ತಿ ಉಪಾಧ್ಯಕ್ಷೆಯಾಗಿದ್ದರು.