 : ಹಲವು ರೈಲ್ವೆ ಯೋಜನೆಗಳಿಗೆ ಕೇಂದ್ರ ಸಚಿವ ಸೋಮಣ್ಣ ಮುಂದೆ ಬೇಡಿಕೆ ಇಟ್ಟ ಎಂ.ಬಿ.ಪಾಟೀಲ್‌
ಬೆಂಗಳೂರು:ಬೆಂಗಳೂರು-ಮಂಗಳೂರು ಹಾಗೂ ಹುಬ್ಬಳ್ಳಿ- ಅಂಕೋಲ ನಡುವೆ ಜೋಡಿ ರೈಲು ಮಾರ್ಗ ನಿರ್ಮಾಣ, ಚಿತ್ರದುರ್ಗ- ಹೊಸಪೇಟೆ- ಆಲಮಟ್ಟಿ ನಡುವೆ ಹೊಸ ರೈಲು ಮಾರ್ಗ ಯೋಜನೆಯನ್ನು ಕೈಗೆತ್ತಿಕೊಳ್ಳಬೇಕು ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ, ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ( ) ಅವರಿಗೆ ಬೇಡಿಕೆ ಇಟ್ಟು ಗಮನ ಸೆಳೆದರು.
ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ನಡೆದ ರೈಲ್ವೆ ಯೋಜನೆಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಪಾಟೀಲ ಅವರು ಹಲವು ರೈಲ್ವೆ ಯೋಜನೆಗಳ ಬಗ್ಗೆ ಸಚಿವ ಸೋಮಣ್ಣ ಅವರ ಗಮನ ಸೆಳೆದರು. ಬಳಿಕ ಈ ಕುರಿತ ಪತ್ರಗಳನ್ನೂ ಸಚಿವರು ಸೋಮಣ್ಣ ಅವರಿಗೆ ನೀಡಿದರು.
ಬಂದರು ನಗರವಾದ ಮಂಗಳೂರಿಗೆ ರೈಲ್ವೆ ಸಂಪರ್ಕ ಇದ್ದರೂ ಅದು ಜೋಡಿ ಮಾರ್ಗವಾಗಿ ಇನ್ನೂ ಮಾರ್ಪಾಡಾಗಿಲ್ಲ. ಹೀಗಾಗಿ ಸರಕು ಸಾಗಣೆ ಸೇರಿದಂತೆ ಕೈಗಾರಿಕಾ ಬೆಳವಣಿಗೆಯೂ ಕುಂಠಿತವಾಗಿದೆ. ಇದೇ ರೀತಿ ಹುಬ್ಬಳ್ಳಿ- ಅಂಕೋಲಾ ರೈಲ್ವೆ ಯೋಜನೆ ಜಾರಿಯಾದರೂ ಅಲ್ಲಿನ ಬಂದರನ್ನು ಉತ್ತರ ಕರ್ನಾಟಕಕ್ಕೆ ಸಂಪರ್ಕ ಕಲ್ಪಿಸಿದಂತಾಗುತ್ತದೆ. ಹೀಗೆ ಮಾಡುವುದರಿಂದ ರಾಜ್ಯದ ಕೈಗಾರಿಕಾಭಿವೃದ್ಧಿಗೆ ಹೆಚ್ಚಿನ ಅನುಕೂಲ ಆಗುತ್ತದೆ ಎಂದು ಪಾಟೀಲ ಅವರು ರೈಲ್ವೆ ಸಚಿವರ ಗಮನ ಸೆಳೆದರು.
ಬೆಂಗಳೂರು- ಮಂಗಳೂರು ನಡುವೆ ಜೋಡಿ ರೈಲು ಮಾರ್ಗ ನಿರ್ಮಾಣದ ಜತೆಗೆ ಸಕಲೇಶಪುರ- ಸುಬ್ರಹ್ಮಣ್ಯ ನಡುವೆ ಸುರಂಗ ರೈಲ್ವೆ ಮಾರ್ಗ ನಿರ್ಮಾಣದ ಅಗತ್ಯವನ್ನೂ ಸಚಿವರು ರೈಲ್ವೆ ಸಚಿವರ ಗಮನಕ್ಕೆ ತಂದರು. ಇತ್ತೀಚೆಗೆ ಮಳೆ ಕಾರಣಕ್ಕೆ ಭೂಕುಸಿತವಾಗಿ, ಹಲವು ಬಾರಿ ರೈಲ್ವೆ ಸಂಚಾರವನ್ನು ಈ ಮಾರ್ಗದಲ್ಲಿ ರದ್ದು ಮಾಡಲಾಯಿತು. ಹೀಗಾಗಿ ಸುರಂಗ ರೈಲ್ವೆ ಮಾರ್ಗ ನಿರ್ಮಾಣದ ಸಾಧ್ಯತೆ ಕಡೆಗೂ ಹೆಚ್ಚಿನ ಗಮನ ನೀಡಬೇಕು ಎಂದು ಸಚಿವ ಪಾಟೀಲ್‌ ಮನವಿ ಮಾಡಿದರು.
ಈ ಸುದ್ದಿಯನ್ನೂ ಓದಿ |  : ಉಪನಗರ ರೈಲು ಯೋಜನೆ; 2026ರ ಡಿಸೆಂಬರ್‌ಗೆ ಕಾರಿಡಾರ್‌ 2, 4 ಪೂರ್ಣ
ಚಿತ್ರದುರ್ಗ- ಹೊಸಪೇಟೆ- ಕೊಪ್ಪಳ- ಆಲಮಟ್ಟಿ- ವಿಜಯಪುರ ಮಾರ್ಗದ ಹೊಸ ರೈಲ್ವೆ ಯೋಜನೆಗೆ ಒಪ್ಪಿಗೆ ನೀಡುವಂತೆಯೂ ಕೋರಿಕೆ ಸಲ್ಲಿಸಿದ ಸಚಿವರು, ಇದರಿಂದ ಬೆಂಗಳೂರು- ವಿಜಯಪುರ ಮತ್ತು ಸೊಲ್ಲಾಪುರ ನಡುವಿನ ಪ್ರಯಾಣ ಅವಧಿ ಕಡಿಮೆ ಆಗಲಿದೆ. ಇದಕ್ಕೆ ತಕ್ಷಣ ಸ್ಪಂದಿಸಿದ ಸಚಿವ ಸೋಮಣ್ಣ ಅವರು, ಈ ಮಾರ್ಗದ ಸಮೀಕ್ಷೆ ನಡೆಯುತ್ತಿದ್ದು, ಬಳಿಕ ಯೋಜನೆ ಅನುಷ್ಠಾನ ಕುರಿತು ತೀರ್ಮಾನಿಸಲಾಗುವುದು ಎಂದು ಪ್ರತಿಕ್ರಿಯೆ ನೀಡಿದರು.
ಬೆಂಗಳೂರು- ವಿಜಯಪುರ ನಡುವಿನ ರೈಲ್ವೆ ಪ್ರಯಾಣವನ್ನು ಸಣ್ಣ ಪುಟ್ಟ ಬದಲಾವಣೆಗಳೊಂದಿಗೆ ಕನಿಷ್ಠ ನಾಲ್ಕು ಗಂಟೆ ಕಡಿಮೆ ಮಾಡಬಹುದು. ಸದ್ಯ 14 ಗಂಟೆ ಆಗುತ್ತಿದೆ. ಅದನ್ನು 10 ಗಂಟೆಗೆ ಇಳಿಸಲು ಕೆಲವು ಮಾರ್ಗೋಪಾಯಗಳು ಇವೆ ಎಂದು ಸಚಿವ ಪಾಟೀಲ ವಿವರಿಸಿದರು. ವಿಜಯಪುರ ಕಡೆಗೆ ಹೋಗುವ ರೈಲುಗಳನ್ನು ಹುಬ್ಬಳ್ಳಿ ಕೇಂದ್ರ ನಿಲ್ದಾಣಕ್ಕೆ ಬರದ ಹಾಗೆ ತಡೆದು, ಹುಬ್ಬಳ್ಳಿ ದಕ್ಷಿಣ ರೈಲ್ವೆ ಸ್ಟೇಷನ್‌ನಿಂದ ನೇರವಾಗಿ ಗದಗ ಕಡೆ ಹೋಗುವ ಹಾಗೆ ಮಾಡಬೇಕು. ಗದಗದಲ್ಲೂ ಬೈಪಾಸ್ ಮೂಲಕ ವಿಜಯಪುರದ ಕಡೆ ಹೋಗುವ ಹಾಗೆ ಮಾಡುವುದರಿಂದ ಸಾಕಷ್ಟು ಸಮಯ ಉಳಿತಾಯ ಮಾಡಬಹುದು‌ ಎಂದು ಸಚಿವರು ಸಲಹೆ ನೀಡಿದರು. ಈ ಪರಿಕಲ್ಪನೆಯನ್ನು ರೈಲ್ವೆ ಸಚಿವರು ಪರಿಶೀಲಿಸುವಂತೆ ರೈಲ್ವೆ ಅಧಿಕಾರಿಗಳಿಗೆ ಸೂಚಿಸಿದರು. ಗದಗ ಬೈಪಾಸ್‌ ಮೂಲಕ ರೈಲು ಹಾದು ಹೋಗಲು ಸ್ಥಳೀಯರ ವಿರೋಧ ಇದೆ ಎಂದು ಅಧಿಕಾರಿಗಳು ಹೇಳಿದ್ದಕ್ಕೆ ಹೊಸ ರೈಲು ಬಿಟ್ಟಾಗ ಆ ಸಮಸ್ಯೆ ಬರುವುದಿಲ್ಲ ಎಂದು ಪಾಟೀಲ ಸಲಹೆ ನೀಡಿದರು.
ಧಾರವಾಡ- ಕಿತ್ತೂರು- ಬೆಳಗಾವಿ ನಡುವಿನ ನೇರ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಭೂಸ್ವಾಧೀನ ಸಮಸ್ಯೆ ಇದ್ದು ಆದಷ್ಟು ಬೇಗ ಭೂಮಿ ಕೊಡಿಸಲು ಕ್ರಮ ವಹಿಸಲಾಗುವುದು. ಈ‌ ನಿಟ್ಟಿನಲ್ಲಿ ಸದ್ಯದಲ್ಲೇ ಸ್ಥಳೀಯ ಜನಪ್ರತಿನಿಧಿಗಳ ಜತೆ ಸಭೆ ನಡೆಸಲಾಗುವುದು ಎಂದು ಸಚಿವ ಪಾಟೀಲ್‌, ಸೋಮಣ್ಣ ಅವರಿಗೆ ಅಭಯ ನೀಡಿದರು.
ತುಮಕೂರು- ದಾವಣಗೆರೆ ಮತ್ತು ತುಮಕೂರು- ರಾಯದುರ್ಗ ಯೋಜನೆಗಳನ್ನು ನಿಗದಿಗಿಂತ‌ ಮೊದಲೇ ಮುಗಿಸಲು ಆದ್ಯತೆ ನೀಡಬೇಕೆಂದು ಸಚಿವ ಎಂ.ಬಿ. ಪಾಟೀಲ್‌ ಮನವಿ ಮಾಡಿದರು.
ಬಿಡದಿ- ಕನಕಪುರ- ಚಾಮರಾಜನಗರ ರೈಲ್ವೆ ಯೋಜನೆ ಬಹಳ ದಿನಗಳಿಂದ ನನೆಗುದಿಗೆ ಬಿದ್ದಿದೆ. ಇದಕ್ಕೆ ಕಾಯಕಲ್ಪ ನೀಡಬೇಕು ಎನ್ನುವ ಮನವಿಗೂ ಸಚಿವ ಸೋಮಣ್ಣ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಸದ್ಯದಲ್ಲೇ ಈ ಯೋಜನೆಗೆ ಚಾಲನೆ ನೀಡಲಾಗುವುದು ಎಂದರು.
ಇನ್ನೂ 10 ವಂದೇ ಭಾರತ್‌ ರೈಲುಗಳ ಸಂಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸದ್ಯದಲ್ಲೇ ಚಾಲನೆ ನೀಡಲಿದ್ದಾರೆ. ಅದರಲ್ಲಿ ಒಂದು ಕರ್ನಾಟಕಕ್ಕೂ ಬರಲಿದೆ. ಅದು ಯಾವ ಮಾರ್ಗದಲ್ಲಿ ಸಂಚರಿಸಲಿದೆ ಎಂಬುದು ಇನ್ನೂ ನಿಖರವಾಗಿ ಗೊತ್ತಿಲ್ಲ. ಮೂಲಸೌಕರ್ಯ ಅಭಿವೃದ್ಧಿ ಸಚಿವರ ಜಿಲ್ಲೆಯಾದ ವಿಜಯಪುರಕ್ಕೇ ಒಂದು ವಂದೇ ಭಾರತ ರೈಲು ಬಂದರೂ ಆಶ್ಚರ್ಯ ಇಲ್ಲ ಎಂದು ಸಚಿವ ಸೋಮಣ್ಣ ಅವರು ಪಾಟೀಲ ಅವರ ಮನವಿಗೆ ಸ್ಪಂದಿಸಿದರು.
ಈ ಸುದ್ದಿಯನ್ನೂ ಓದಿ |  : ಹುಬ್ಬಳ್ಳಿ-ಪುಣೆ ಮಧ್ಯೆ ವಂದೇ ಭಾರತ್ ರೈಲು; ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಮತ್ತೊಂದು ಗಿಫ್ಟ್!
ಸಭೆಯಲ್ಲಿ ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಅರವಿಂದ ಶ್ರೀವಾಸ್ತವ, ನಮ್ಮ ಮೆಟ್ರೊ ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರ ರಾವ್‌, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ, ಕೆ-ರೈಡ್‌ ವ್ಯವಸ್ಥಾಪಕ ನಿರ್ದೇಶಕಿ ಡಾ.ಎನ್. ಮಂಜುಳಾ ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ಹಾಜರಿದ್ದರು.