 :  ಸರ್ಕಾರದ ಹಗರಣ ಮುಚ್ಚಿಹಾಕಲು ನಾಗಮಂಗಲ ಗಲಭೆ ಸೃಷ್ಟಿ: ಎಚ್‌ಡಿಕೆ ಆರೋಪ
ಬೆಂಗಳೂರು:ಮುಖ್ಯಮಂತ್ರಿ ಹಾಗೂ ರಾಜ್ಯ ಸರ್ಕಾರದ ವಿರುದ್ಧ ನಿತ್ಯವೂ ಕೇಳಿಬರುತ್ತಿರುವ ಭ್ರಷ್ಟಾಚಾರ ಹಗರಣಗಳಿಂದ ( ) ಜನರ ಗಮನ ಬೇರೆಡೆಗೆ ಸೆಳೆಯಲು ಸರ್ಕಾರ ನಾಗಮಂಗಲ ಗಲಭೆಯನ್ನು ( ) ಸೃಷ್ಟಿಸಿರುವ ಸಾಧ್ಯತೆ ಇದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ( ) ಆರೋಪಿಸಿದ್ದಾರೆ.
ಪಕ್ಷದ ರಾಜ್ಯ ಕಚೇರಿಯಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಮುಡಾ ಹಗರಣ, ಸರ್ಕಾರದ ಹಗರಣಗಳ ಬಗ್ಗೆ ಚರ್ಚೆ ನಡೆಯುವ ಹೊತ್ತಿನಲ್ಲಿಯೇ ಎಸ್‌ಐಟಿ ತನಿಖೆಯ ಆರೋಪ ಪಟ್ಟಿಗಳ ಬಗ್ಗೆ, ವೈಯಕ್ತಿಕ ಚಾಟ್ ಬಗ್ಗೆ ಚರ್ಚೆ ಶುರುವಾಗುತ್ತದೆ. ಇದೆಲ್ಲಾ ಹೇಗೆ ಸಾರ್ವಜನಿಕವಾಗಿ ಬಹಿರಂಗವಾಗಲು ಸಾಧ್ಯ? ತನಿಖಾ ಸಂಸ್ಥೆಗಳೇ ಸೋರಿಕೆ ಮಾಡುತ್ತಿವೆ. ಜನರ ಗಮನವನ್ನು ಬೇರೆಡೆಗೆ ಹೊರಳಿಸಲು ಸರ್ಕಾರ ಇಂಥ ತಂತ್ರಗಾರಿಕೆ ಮಾಡುತ್ತಿದೆ ಎಂದು ದೂರಿದರು.
ಈ ಸುದ್ದಿಯನ್ನೂ ಓದಿ | : ಬ್ರದರ್‌ಗಳ ಹಿನ್ನೆಲೆ ಜಗತ್ತಿಗೇ ಗೊತ್ತಿದೆ: ಡಿ.ಕೆ.ಸುರೇಶ್‌ಗೆ ತಿರುಗೇಟು ಕೊಟ್ಟ ಎಚ್.ಡಿ.ಕೆ
ನಾಗಮಂಗಲ ಘಟನೆಯಲ್ಲಿ ಅಮಾಯಕರನ್ನು ಬಂಧಿಸಿರುವದು ಸತ್ಯ ಎಂದು ಸಚಿವ ಚಲುವರಾಯಸ್ವಾಮಿ ಅವರು ಒಪ್ಪಿಕೊಂಡಿದ್ದಾರೆ. ಮೊದಲು ಇದನ್ನು ಗೃಹ ಸಚಿವರು ಸಣ್ಣ ಘಟನೆ, ಆಕಸ್ಮಿಕ ಘಟನೆ ಎಂದರು. ಎಫ್ಐಆರ್‌ನಲ್ಲಿ ಕೋಮು ಗಲಭೆ ಅಂತ ಸೇರಿಸಿದ್ದಾರೆ. ನಮ್ಮನ್ನು ಕೊಲೆ ಮಾಡಲು ಬಂದಿದ್ದಾರೆ ಎಂದು ಉಲ್ಲೇಖ ಮಾಡಲಾಗಿದೆ. ಮೂರು ಬಾರಿ ಗೃಹಮಂತ್ರಿ ಆಗಿದ್ದವರ ಅನುಭವ ಇದು. ವಿಷಯ ಹೇಳಬೇಕಾದರೆ ಮಾಹಿತಿ ಕ್ರೋಡೀಕರಿಸಿ ಹೇಳಬೇಕು. ಪಾಪ ಅವರು ಬಹಳ ದೊಡ್ಡವರು ಇದ್ದಾರೆ ಎಂದು ಕೇಂದ್ರ ಸಚಿವರು ಛೇಡಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರಿಗೆ ಈಗ ಅರಿವಾಗಿದೆ. ಅಲ್ಲಿ ಗಲಾಟೆ ಆಗಲಿಕ್ಕೆ ಅವಕಾಶ ಇರಲಿಲ್ಲ. ಇದ್ದಿದ್ದು 150 ಜನ, ನಿಯಂತ್ರಣ ಮಾಡಬಹುದಿತ್ತು. ಇಂತಹ ಪ್ರಕರಣ ನಡೆಯಬೇಕು ಎಂಬ ಉದ್ದೇಶ ಸರ್ಕಾರಕ್ಕೆ ಇದ್ದಂತಿದೆ. ಕಳೆದ ಮೂರು ತಿಂಗಳಲ್ಲಿ ಹಲವಾರು ವಿಚಾರಗಳನ್ನು ಮಾಧ್ಯಮಗಳಲ್ಲಿ ಪ್ರಸಾರ ಮಾಡಿದ್ದನ್ನು ನೋಡಿದ್ದೇನೆ. ಆರೋಪ ಪಟ್ಟಿ ಎಸ್‌ಐಟಿ ಬಳಿ ಇರುತ್ತದೆ. ಅದು ಹೇಗೆ ಹೊರಗೆ ಸೋರಿಕೆ ಆಗುತ್ತದೆ? ಸರ್ಕಾರ ತಪ್ಪುಗಳನ್ನು ಮುಚ್ಚಿಕೊಳ್ಳಲು ಇಂಥ ಸೋರಿಕೆ ಮಾಡುತ್ತದೆ ಎಂದು ಅವರು ದೂರಿದರು.
ಈ ಸುದ್ದಿಯನ್ನೂ ಓದಿ | : ಕೆಎಂಎಫ್‌ ಕೂಡ ಸರ್ಕಾರದಂತೆ ದಿವಾಳಿ ಹಾದಿಯಲ್ಲಿ; ನಂದಿನಿ ಹಾಲಿನ ದರ ಏರಿಕೆಗೆ ಜೋಶಿ ಆಕ್ರೋಶ
ನಾನು ನಾಗಮಂಗಲ ತಾಲೂಕು ಅಧ್ಯಕ್ಷನ ಹೆಸರು ಹೇಳಿಲ್ಲ. ಅವರ ಮಗನ ಹೆಸರು ಹೇಳಿಲ್ಲ. ಅಲ್ಲಿ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಕಾರ್ಯಕರ್ತರು ಇದ್ದರು ಎಂದು ಹೇಳಿದ್ದೇನೆ. ಎಲ್ಲ ಜನಾಂಗ ಶಾಂತಿ ಕಾಪಾಡಿ ಎಂದು ನಾನು ಮನವಿ ಮಾಡಿಕೊಂಡಿದ್ದೇನೆ ಎಂದು ಕುಮಾರಸ್ವಾಮಿ ಅವರು ಹೇಳಿದರು.
ಬಿಜೆಪಿ ಶಾಸಕ ಮುನಿರತ್ನ ಅವರು ಜಾತಿ ನಿಂದನೆ ಮಾಡಿದ್ದಾರೆ ಎನ್ನುವ ವಿಷಯ ನನ್ನ ಗಮನಕ್ಕೆ ಬಂದಿಲ್ಲ. ಬೆಳಗ್ಗೆಯಿಂದ ನಾನು ಪಕ್ಷದ ಕಚೇರಿಯಲ್ಲಿ ಕಾರ್ಯಕರ್ತರು, ಸಾರ್ವಜನಿಕರ ಅಹವಾಲು ಆಲಿಸುತ್ತಿದ್ದೇನೆ. ಹೀಗಾಗಿ ನನಗೆ ಏನೂ ಗೊತ್ತಿಲ್ಲ, ಯಾವುದೇ ಮಾಹಿತಿ ಇಲ್ಲ ಎಂದರು.ಕಾಂಗ್ರೆಸ್‌ನವರು ನನ್ನನ್ನು ಯಾಕೆ ಪ್ರಶ್ನೆ ಮಾಡ್ತಾರೆ? ಅವರನ್ನು ನಾನು ಈಗಾಗಲೇ ಸಾವಿರಾರು ಪ್ರಶ್ನೆಗಳನ್ನು ಕೇಳಿದ್ದೇನೆ. ಮೊದಲು ಅವರ ಮುಖ್ಯಮಂತ್ರಿ ದಲಿತರ ನಿವೇಶನ ಹೊಡೆದುಕೊಂಡಿರುವ ಬಗ್ಗೆ ಉತ್ತರ ಕೊಡಲಿ. ಈ ರೀತಿಯ ಘಟನೆ ನಡೆದಿದ್ದರೆ ಕ್ರಮ ತೆಗೆದುಕೊಳ್ಳಬೇಕಿರೋದು ಸರ್ಕಾರ. ನಾನು ಕ್ರಮ ತೆಗೆದುಕೊಳ್ಳೋಕೆ ಆಗುತ್ತಾ? ಎಂದು ಹೇಳಿದರು.
ಈ ಸುದ್ದಿಯನ್ನೂ ಓದಿ |  : ವೈದ್ಯರ ಪ್ರತಿಭಟನೆಗೆ ಫುಲ್‌ ಸ್ಟಾಪ್‌ ಹಾಕಲು ದೀದಿ ಕಸರತ್ತು; ಮಾತುಕತೆಗೆ ತೆರಳಿದ ಡಾಕ್ಟರ್ಸ್‌
ನಾನು ಇಂತಹ ವಿಷಯಗಳಿಗೆ, ಅದರಲ್ಲಿಯೂ ಒಂದು ಸಮಾಜ ಬಗ್ಗೆ ಅವಹೇಳನ ಮಾಡೋದಕ್ಕೆ, ಹಿಂಸೆ ನೀಡೋಕೆ, ಭ್ರಷ್ಟ ವ್ಯವಸ್ಥೆಗೆ ಬೆಂಬಲ ಕೊಟ್ಟಿಲ್ಲ. ಸರ್ಕಾರ ಅವರ ಜವಾಬ್ದಾರಿ ನಿರ್ವಹಣೆ ಮಾಡಿಕೊಳ್ಳಬೇಕು ಎಂದರು.