: ಬಿಜೆಪಿ ಶಾಸಕ ಮುನಿರತ್ನಗೆ 14 ದಿನ ನ್ಯಾಯಾಂಗ ಬಂಧನ
ಬೆಂಗಳೂರು: ಜಾತಿನಿಂದನೆ () ಹಾಗೂ ಕೊಲೆ ಬೆದರಿಕೆ ( ) ಪ್ರಕರಣದಲ್ಲಿ ಪೊಲೀಸ್‌ ಕಸ್ಟಡಿಯಲ್ಲಿದ್ದ ರಾಜರಾಜೇಶ್ವರಿ ನಗರ ಶಾಸಕ, ಬಿಜೆಪಿ ಮುಖಂಡ ಮುನಿರತ್ನ (  ) ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ( ) ಒಪ್ಪಿಸಲಾಗಿದೆ.
ಬೆಂಗಳೂರಿನ ಗುತ್ತಿಗೆದಾರರೊಬ್ಬರಿಗೆ ಅವಾಚ್ಯ ಶಬ್ದಗಳಿಂದ ಜಾತಿನಿಂದನೆ ಮಾಡಿದ ಹಾಗೂ ಜೀವ ಬೆದರಿಕೆ ಹಾಕಿದ ಪ್ರಕರಣದಲ್ಲಿ ಪೊಲೀಸರು ಮಾಜಿ ಸಚಿವ ಮುನಿರತ್ನ ಅವರನ್ನು ನಿನ್ನೆ ಬಂಧಿಸಿದ್ದರು. ಇಂದು ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ಪ್ರಕರಣದ ಬಗ್ಗೆ ವಿಚಾರಣೆ ನಡೆಸಿದ ಕೋರ್ಟ್ ಅವರನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಇಂದು ಮುನಿರತ್ನ ಪೊಲೀಸ್ ಕಸ್ಟಡಿ ಅಂತ್ಯ ಹಿನ್ನೆಲೆಯಲ್ಲಿ ಮಂಗಳವಾರ ನ್ಯಾಯಾಲಯದ ಮುಂದೆ ವೈಯಾಲಿಕಾವಲ್ ಠಾಣೆ ಪೊಲೀಸರು ಹಾಜರುಪಡಿಸಿದ್ದರು. ಈ ವೇಳೆ ಪ್ರಕರಣದ ತನಿಖೆಗಾಗಿ ಮುನಿರತ್ನ ಅವರನ್ನು ಮತ್ತೆ ಪೊಲೀಸರು ವಶಕ್ಕೆ ಕೋರಿದ್ದರು. ಆದರೆ, ಮುನಿರತ್ನ ಪರ ವಕೀಲರು ಜಾಮೀನು ನೀಡುವಂತೆ ಅರ್ಜಿ ಸಲ್ಲಿಕೆ ಮಾಡಿ, ಜಾಮೀನು ಅರ್ಜಿ ಕುರಿತು ವಾದ ಮಂಡಿಸಲು ಅವಕಾಶ ನೀಡುವಂತೆ ಮನವಿ ಮಾಡಿದರು. ಆದರೆ, ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ ಮಾಡಿದ ನ್ಯಾಯಾಲಯ ಮುನಿರತ್ನ ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಇದರೊಂದಿಗೆ ಬಹುಕೋಟಿ ʼಕುರುಕ್ಷೇತ್ರʼ ಚಲನಚಿತ್ರದ ಇಬ್ಬರು ಜೈಲುಪಾಲಾದಂತಾಗಿದೆ. ʼಕುರುಕ್ಷೇತ್ರʼವನ್ನು ಮುನಿರತ್ನ ನಿರ್ಮಿಸಿದ್ದರು. ಅದರಲ್ಲಿ ನಟ ದರ್ಶನ್ ದುರ್ಯೋಧನನ ಪಾತ್ರ ಮಾಡಿದ್ದರು. ಮೂರು ತಿಂಗಳ ಹಿಂದೆ ನಟ ದರ್ಶನ್, ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ವಿಚಾರಣಾಧೀನ ಕೈದಿಯಾಗಿ ಜೈಲು ಪಾಲಾಗಿದ್ದಾರೆ. ಇದೀಗ ಕುರುಕ್ಷೇತ್ರ ಸಿನಿಮಾದ ನಿರ್ಮಾಪಕ ಮುನಿರತ್ನ 14 ದಿನ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದಾರೆ.
ಗುತ್ತಿಗೆದಾರನಿಗೆ ಕೊಲೆ ಬೆದರಿಕೆ ಹಾಗೂ ಜಾತಿ ನಿಂದನೆ ಆರೋಪದಲ್ಲಿ ಬಿಜೆಪಿ ಶಾಸಕ ಮುನಿರತ್ನ () ವಿರುದ್ದ ಸೆ.14ರಂದು ವೈಯಾಲಿಕಾವಲ್‌ ಠಾಣೆಯಲ್ಲಿ ಎರಡು ಎಫ್‌ಐಆರ್‌ ದಾಖಲಾಗಿತ್ತು. ಕಸ ನಿರ್ವಹಣೆ ಹಾಗೂ ವಿಲೇವಾರಿ ಸಂಬಂಧ 30 ಲಕ್ಷ ಲಂಚ ನೀಡುವಂತೆ ಒತ್ತಾಯಿಸಿ, ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ರಾಜರಾಜೇಶ್ವರಿ ನಗರ ಕ್ಷೇತ್ರದ ಶಾಸಕ ಮುನಿರತ್ನ ವಿರುದ್ಧ ನಗರ ಪೊಲೀಸ್ ಆಯುಕ್ತರಿಗೆ ಬಿಬಿಎಂಪಿ ಗುತ್ತಿಗೆದಾರ ಚೆಲುವರಾಜು ದೂರು ನೀಡಿದ್ದರು. ಹೀಗಾಗಿ ವೈಯಾಲಿಕಾವಲ್‌ ಪೊಲೀಸ್ ಠಾಣೆಯಲ್ಲಿ ಶಾಸಕ ಮುನಿರತ್ನ ವಿರುದ್ಧ ಎಫ್‌ಐಆರ್‌ ದಾಖಲಾಗಿತ್ತು.
ಇನ್ನು ಜಾತಿ ನಿಂದನೆ ಮಾಡಿದ್ದಾರೆ ಎಂದು ವೇಲುನಾಯಕ್‌ ಎಂಬುವವರು ನೀಡಿದ ದೂರಿನ ಮೇರೆಗೆ ಇದೇ ಠಾಣೆಯಲ್ಲಿ ಮುನಿರತ್ನ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿತ್ತು. ಗುತ್ತಿಗೆದಾರ ನೀಡಿದ ದೂರಿನ ಮೇರೆಗೆ ಸರ್ಕಾರಿ ಅಧಿಕಾರಿ ವಿಜಯ್‌ ಕುಮಾರ್‌, ಕಾರ್ಯದರ್ಶಿ ಅಭಿಷೇಕ್, ಶಾಸಕರ ಆಪ್ತ ವಸಂತ ಕುಮಾರ್‌ ವಿರುದ್ಧವೂ ಪ್ರಕರಣ ದಾಖಲಾಗಿದೆ.
ಪ್ರಕರಣ ದಾಖಲಾದ ಮೇಲೆ ಶಾಸಕ ಮುನಿರತ್ನ ತಲೆಮರೆಸಿಕೊಂಡಿದ್ದರು. ಅವರಿಗಾಗಿ ಹುಡುಕಾಟ ನಡೆಸುತ್ತಿದ್ದ ಪೊಲೀಸರು, ಲೋಕೇಶನ್‌ ಆಧರಿಸಿ ತೆರಳಿ, ಕೋಲಾರದ ನಂಗಲಿ ಬಳಿ ವಶಕ್ಕೆ ಪಡೆದಿದ್ದರು. ಆಂಧ್ರದ ಚಿತ್ತೂರಿಗೆ ತೆರಳಲು ಕಾರಿನಲ್ಲಿ ಶಾಸಕ ಹೋಗುತ್ತಿದ್ದಾಗ ಅವರನ್ನು ವಶಕ್ಕೆ ಪಡೆಯಲಾಗಿತ್ತು. ನಂತರ ಸುದೀರ್ಘ ವಿಚಾರಣೆ ನಡೆಸಿ ಶಾಸಕನನ್ನು ಬಂಧಿಸಿದ್ದರು.
ಕೊಲೆ ಬೆದರಿಕೆ, ಜಾತಿ ನಿಂದನೆ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಶಿಸ್ತು ಸಮಿತಿಯಿಂದ ಶಾಸಕ ಮುನಿರತ್ನಗೆ ನೋಟಿಸ್‌ ನೀಡಲಾಗಿದೆ. ನೀವು ಮಾತನಾಡಿರುವುದು ಎನ್ನಲಾದ ಅವಾಚ್ಯ ಪದ ಬಳಕೆಯ ಆಡಿಯೊ ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ. ಈ ಬಗ್ಗೆ 5 ದಿನಗಳಲ್ಲಿ ಸ್ಪಷ್ಟನೆ ನೀಡಬೇಕು ಎಂದು ನೋಟಿಸ್‌ನಲ್ಲಿ ಸೂಚಿಸಲಾಗಿದೆ.
ಇದನ್ನೂ ಓದಿ: : ಮಾಡಿದ್ದುಣ್ಣೋ ಮಾರಾಯ; ಮುನಿರತ್ನ ಬಂಧನದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಲೇವಡಿ