 : ವಿಚಾರಣೆಗೆ ಮೊದಲೇ ಕ್ಲೀನ್‌ ಚಿಟ್‌ ನೀಡುವ ಕಾಂಗ್ರೆಸ್ :‌ ಆರ್‌. ಅಶೋಕ್‌ ಆರೋಪ
ಬೆಂಗಳೂರು:ನಾಗಮಂಗಲದಲ್ಲಿ ವಿಚಾರಣೆ ನಡೆಸುವ ಮೊದಲೇ ಕಾಂಗ್ರೆಸ್‌ ಸರ್ಕಾರ ( ) ತಪ್ಪಿತಸ್ಥರಿಗೆ ಕ್ಲೀನ್‌ ಚಿಟ್‌ ನೀಡುತ್ತಿದೆ. ಮೊದಲು ತನಿಖೆ () ನಡೆಸಿ, ನಂತರ ತಪ್ಪಿತಸ್ಥರು ಯಾರೆಂದು ತೀರ್ಮಾನಿಸಲಿ ಎಂದು ಪ್ರತಿಪಕ್ಷ ನಾಯಕ ಆರ್‌. ಅಶೋಕ್‌ ( ) ಆಗ್ರಹಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ಸರ್ಕಾರ ಸಂಪೂರ್ಣ ಭ್ರಷ್ಟಾಚಾರದಲ್ಲಿ ಮುಳುಗಿದೆ. ವಿಧಾನಸೌಧದಲ್ಲಿ ಪಾಕ್‌ ಜಿಂದಾಬಾದ್‌ ಕೂಗಿದಾಗ ಹಾಗೆ ಆಗಿಯೇ ಇಲ್ಲ ಎಂದು ಕಾಂಗ್ರೆಸ್‌ ನಾಯಕರು ಹೇಳಿದ್ದರು. ಬಾಂಬ್‌ ಸ್ಫೋಟವಾದಾಗಲೂ ಅದು ವ್ಯಾಪಾರದ ಜಗಳ ಎಂದು ಹೇಳಿದ್ದರು. ಕುಕ್ಕರ್‌ ಬಾಂಬ್‌ ಸ್ಫೋಟದ ಬಗ್ಗೆಯೂ ಹೀಗೆಯೇ ಹೇಳಿದ್ದರು. ನಾಗಮಂಗಲದಲ್ಲಿ ಪಾಕಿಸ್ತಾನಕ್ಕೆ ಜೈಕಾರ ಹಾಕಿರುವ ಬಗ್ಗೆ ಮೊದಲು ಪರಿಶೀಲಿಸಲಿ. ಆದರೆ ಸಚಿವ ಪ್ರಿಯಾಂಕ್‌ ಖರ್ಗೆಯಂಥವರು ಅದನ್ನು ಸಮರ್ಥಿಸಿಕೊಳ್ಳುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿಯನ್ನೂ ಓದಿ | : ಕಾಂಗ್ರೆಸ್ ಸರ್ಕಾರದಿಂದ ದ್ವೇಷ ರಾಜಕಾರಣ; ಸಿ.ಟಿ. ರವಿ ಆರೋಪ
ಭಾರತವನ್ನು ಎರಡು ಭಾಗ ಮಾಡಿದ ಕಾಂಗ್ರೆಸ್‌ ಮತ್ತೆ ತಲೆಯತ್ತಿ ಮಂಡ್ಯದಲ್ಲಿ ಕೋಮುಗಲಭೆಗೆ ಕಾರಣವಾಗಿದೆ. ವಿದೇಶಕ್ಕೆ ಹೋದ ರಾಹುಲ್‌ ಗಾಂಧಿ, ಭಾರತದ ವಿರುದ್ಧ ಮಾತಾಡುವುದರ ಜತೆಗೆ ಮೀಸಲಾತಿ ತೆಗೆದುಹಾಕುವ ಬಗ್ಗೆ ಹೇಳಿದ್ದಾರೆ. ಕಾಂಗ್ರೆಸ್‌ ಆಡಳಿತ ಬರುವ ಕಡೆಗಳಲ್ಲಿ ಮುಸ್ಲಿಂ ಮೂಲಭೂತವಾದಿಗಳಿಗೆ ಹಬ್ಬದ ವಾತಾವರಣ ಇರುತ್ತದೆ. ಸವಾಲು ಹಾಕುವವರನ್ನು ಜೈಲಿಗೆ ಹಾಕುವ ಬದಲು ಪೊಲೀಸರು ಅವರನ್ನು ಕರೆದು ಕಾಫಿ ಕೊಟ್ಟಿದ್ದಾರೆ. ಇದಕ್ಕಾಗಿಯೇ ಕೋಮು ದಳ್ಳುರಿ ಉಂಟಾಗಿದೆ. ಒಂದೇ ಸಮುದಾಯವನ್ನು ವೈಭವೀಕರಿಸಲಾಗುತ್ತಿದೆ. ಆ ಸಮುದಾಯದವರು ಏನು ಮಾಡಿದರೂ ಕ್ರಮ ಕೈಗೊಳ್ಳುವುದಿಲ್ಲ ಎಂದು ದೂರಿದರು.
ಒಕ್ಕಲಿಗ ಸಮುದಾಯದ ಸರ್ವೋಚ್ಛ ನಾಯಕ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರ ಗೌರವ ಹಾಳು ಮಾಡಲು ಕಾಂಗ್ರೆಸ್‌ ನಾಯಕರು ಯತ್ನಿಸಿದ್ದಾರೆ. ಒಕ್ಕಲಿಗರ ಮೇಲೆ ಅಷ್ಟು ಒಲವಿದ್ದರೆ ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ತೆಗೆದುಹಾಕಿ ಒಕ್ಕಲಿಗರನ್ನೇ ಮುಖ್ಯಮಂತ್ರಿ ಮಾಡಲಿ ಎಂದು ತಿಳಿಸಿದ ಆರ್‌. ಅಶೋಕ್‌, ಡಿ.ಕೆ. ಶಿವಕುಮಾರ್‌ ಪೇಪರ್‌, ಪೆನ್ನು ಹಿಡಿದುಕೊಂಡು ಅಮೇರಿಕಕ್ಕೆ ಹೋಗಿದ್ದಾರೆ ಎಂದು ವ್ಯಂಗ್ಯವಾಡಿದರು.
ಜನಪ್ರಿಯ ನಾಯಕ, ವಿಶ್ವನಾಯಕ ನರೇಂದ್ರ ಮೋದಿಯವರ ಜನ್ಮದಿನ ಪ್ರಯುಕ್ತ ಬಿಜೆಪಿ ಕಾರ್ಯಕರ್ತರು ಸೇವೆ ಮಾಡುತ್ತಿದ್ದಾರೆ. 25,000 ಕಾರ್ಯಕರ್ತರು 58,000 ಬೂತ್‌ಗಳಲ್ಲಿ ರಕ್ತದಾನ ಮಾಡುತ್ತಿದ್ದಾರೆ. ಈ ಮೂಲಕ ಪ್ರಧಾನಿಯವರ ಜನ್ಮದಿನಕ್ಕೆ ಶುಭ ಕೋರಲಾಗುತ್ತಿದೆ. ನರೇಂದ್ರ ಮೋದಿಯವರು ದೇಶದ ನಾಯಕತ್ವ ವಹಿಸಿಕೊಂಡ ನಂತರ ಭಾರತ ಅಭಿವೃದ್ಧಿ ಪಥದತ್ತ ನಡೆಯುತ್ತಿದೆ. ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ದೇಶ ಮುಂಚೂಣಿಯಲ್ಲಿದೆ. ವಂದೇ ಭಾರತ್‌ ರೈಲಿನ ಮೂಲಕ ವಿಶ್ವದರ್ಜೆಯ ಸೇವೆ ದೊರೆತಿದೆ ಎಂದರು.
ಈ ಸುದ್ದಿಯನ್ನೂ ಓದಿ | : ಹಸಿರು ಇಂಧನಕ್ಕೆ ಉತ್ತೇಜನ; ಹಲವು ರಾಷ್ಟ್ರಗಳೊಂದಿಗೆ ಪ್ರಲ್ಹಾದ್‌ ಜೋಶಿ ದ್ವಿಪಕ್ಷೀಯ ಸಭೆ
ಒಂದು ದೇಶದಲ್ಲಿ ಎರಡು ಧ್ವಜ, ಎರಡು ಸಂವಿಧಾನ ಇರಬಾರದೆಂಬುದು ಬಿಜೆಪಿ ಸಿದ್ಧಾಂತ. ಅದನ್ನು ಪ್ರಧಾನಿ ಮೋದಿ ಅನುಷ್ಠಾನಕ್ಕೆ ತಂದು, ಜಮ್ಮು-ಕಾಶ್ಮೀರಕ್ಕೆ ಹೊಸತನ ತಂದಿದ್ದಾರೆ. ಅಲ್ಲಿನ ಜನರು ಭೀತಿಯಿಲ್ಲದೆ ಓಡಾಡುತ್ತಿದ್ದಾರೆ. ರಾಮ ಮಂದಿರ ಕೂಡ ಸುಗಮವಾಗಿ ನಿರ್ಮಾಣವಾಗಿ ಹಿಂದೂಗಳ ಕನಸು ನನಸಾಗಿದೆ ಎಂದು ಆರ್‌.ಅಶೋಕ್‌ ತಿಳಿಸಿದರು.