 : ಚನ್ನಪಟ್ಟಣ ಕ್ಷೇತ್ರದಲ್ಲಿ ಜೆಡಿಎಸ್‌-ಬಿಜೆಪಿ ಒಟ್ಟಾಗಿ ಚುನಾವಣೆ ಎದುರಿಸುತ್ತೇವೆ: ನಿಖಿಲ್
ಚನ್ನಪಟ್ಟಣ :ಕ್ಷೇತ್ರದ ಅಕ್ಕೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಅಕ್ಕೂರು, ಬಾಣಗಹಳ್ಳಿ, ಸೋಗಲ ಗ್ರಾಮ ಪಂಚಾಯತಿ ವ್ಯಾಪ್ತಿಯ ಪ್ರಮುಖ ಮುಖಂಡರೊಂದಿಗೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ( ) ಅವರು ಮಂಗಳವಾರ ಸಭೆ ನಡೆಸಿ, ಪಕ್ಷ ಸಂಘಟನೆ ಮತ್ತು ಪಕ್ಷ ಬಲವರ್ಧನೆ ಬಗ್ಗೆ ಚರ್ಚಿಸಿದರು.
ನಂತರ ಚನ್ನಪಟ್ಟಣ ಕ್ಷೇತ್ರಕ್ಕೆ ನನಗೆ ಟಿಕೆಟ್ ಆಗಲಿದೆ ಎಂದಿದ್ದ ಸಿ.ಪಿ ಯೋಗೇಶ್ವರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಯೋಗೇಶ್ವರ್ ಅವರ ಹೇಳಿಕೆಯನ್ನು ನಾನು ಗ್ರಹಿಸಿದ್ದೇನೆ. ಅವರು ಸ್ಪಷ್ಟವಾಗಿ ಹೇಳಿದ್ದಾರೆ, ಜೆಡಿಎಸ್ – ಬಿಜೆಪಿ ಒಟ್ಟಾಗಿ ಚುನಾವಣೆ ಎದುರಿಸುತ್ತೇವೆಂದು ಅವರು ಹೇಳಿದ್ದಾರೆ. ಹಾಗಾಗಿ ಇಲ್ಲಿ ಯಾವುದೇ ಗೊಂದಲ ಇಲ್ಲ ಎಲ್ಲವೂ ಕೂಡ ಸುಗಮವಾಗಿ ಬಗೆ ಹರಿಯುತ್ತೆ. ಟಿಕೆಟ್ ವಿಚಾರವಾಗಿ ದೆಹಲಿಯ ನಾಯಕರು ಮುಂದಿನ ದಿನಗಳಲ್ಲಿ ನಿರ್ಧಾರ ಮಾಡ್ತಾರೆ ಎಂದು ತಿಳಿಸಿದರು.
ಕಾನೂನು ಎಲ್ಲರಿಗೂ ಒಂದೇ
ಶಾಸಕ ಮುನಿರತ್ನ ಅರೆಸ್ಟ್ ವಿಚಾರಕ್ಕೆ ಮಾತನಾಡಿದ ಅವರು, ಆ ಆಡಿಯೊದಲ್ಲಿರುವುದು ಅವರ ಧ್ವನಿನಾ? ಅಲ್ಲವಾ ಎಂಬುದು ತಿಳಿಯಲು  ವರದಿ ಬರಬೇಕಿದೆ. ಹಾಗಾಗಿ ನಾವು ಈ ಬಗ್ಗೆ ಮಾತನಾಡುವುದು ಸೂಕ್ತ ಅಲ್ಲ. ಆದರೆ ಈ ನೆಲದ ಕಾನೂನಿನ ಮುಂದೆ ಎಲ್ಲರೂ ಒಂದೇ. ಎಷ್ಟೇ ಪ್ರಭಾವಿ ವ್ಯಕ್ತಿ ಆಗಿದ್ದರೂ ಸಹ ಕಾನೂನು ಎಲ್ಲರಿಗೂ ಒಂದೇ ಎಂದರು.
ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ
ನಾಗಮಂಗಲ ಗಲಭೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ಸರ್ಕಾರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದಕ್ಕೆ ನಾಗಮಂಗಲ‌ ಘಟನೆ ಸಾಕ್ಷಿ. ಜಿಲ್ಲಾ ಉಸ್ತುವಾರಿ ಸಚಿವರಿಗೆ ಕೇಳ್ತೇನೆ, ಒಂದು ಸಮುದಾಯ ಓಲೈಸಲು ಇನ್ನೊಂದು ಸಮುದಾಯಕ್ಕೆ ಅನ್ಯಾಯ ಮಾಡುವುದು ಎಷ್ಟು ಸರಿ ಎಂದು ಸಚಿವ ಚಲುವರಾಯ ಸ್ವಾಮಿ ಅವರಿಗೆ ಪ್ರಶ್ನಿಸಿದರು.
ಈ ಸುದ್ದಿಯನ್ನೂ ಓದಿ | : ಮಾನವ ಸರಪಳಿಯಿಂದ ಪ್ರಜಾಪ್ರಭುತ್ವ ಉಳಿಯಲ್ಲ, ಸ್ಥಳೀಯ ಸಂಸ್ಥೆ ಚುನಾವಣೆ ನಡೆಸಿ: ಎಚ್‌ಡಿಕೆ
ವರ್ಷಕ್ಕೊಮ್ಮೆ ಗಣೇಶನ ಹಬ್ಬ ಬರಲಿದೆ, ನಾವು ಒಂದು ತಿಂಗಳವರೆಗೂ ಗಣೇಶನನ್ನ ವಿಸರ್ಜನೆ ಮಾಡ್ತೇವೆ. ಮುಸ್ಲಿಂ ಸಮುದಾಯದವರು ದಿನಕ್ಕೆ 5 ಬಾರಿ ನಮಾಜ್ ಕೂಗುತ್ತಾರೆ. ನಾವು ಅದನ್ನು ಗೌರವಿಸುತ್ತೇವೆ. ಹಿಂದು – ಮುಸ್ಲಿಂ ಸಾಮರಸ್ಯ ಕದಡುತ್ತಿರುವುದು ಕಾಂಗ್ರೆಸ್ ಪಕ್ಷದವರು. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಮಾತನಾಡಲಿ, ಮುಂದೆ ಜನರೇ ಇದಕ್ಕೆ ಉತ್ತರ ಕೊಡ್ತಾರೆ ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚೆಲುವರಾಯಸ್ವಾಮಿಗೆ ನಿಖಿಲ್ ಕುಮಾರಸ್ವಾಮಿ ಅವರು ತಿರುಗೇಟು ಕೊಟ್ಟರು.