   : ಮೈಸೂರಿನಲ್ಲಿ ಫಿಲ್ಮ್‌ ಸಿಟಿ; 110 ಎಕರೆ ಭೂಮಿ ನೀಡಲು ಕೆಐಎಡಿಬಿಗೆ ಸಿಎಂ ಸೂಚನೆ
ಬೆಂಗಳೂರು:ಮೈಸೂರಿನಲ್ಲಿ ಫಿಲ್ಮ್ ಸಿಟಿ ನಿರ್ಮಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಹೇಳಿದ್ದ ಸಿಎಂ ಸಿದ್ದರಾಮಯ್ಯ ಅವರು ಇದೀಗ, ಮೈಸೂರು ಜಿಲ್ಲೆಯ ಇಮ್ಮಾವು ಗ್ರಾಮದಲ್ಲಿ ಚಿತ್ರನಗರಿ (   ) ನಿರ್ಮಿಸಲು 110 ಎಕರೆ ಕೆಐಎಡಿಬಿ ಭೂಮಿ ಹಸ್ತಾಂತರಿಸಲು ಆದೇಶ ಹೊರಡಿಸಬೇಕು ಹಾಗೂ ಹೆಚ್ಚುವರಿಯಾಗಿ ಎರಡನೇ ಹಂತದ ವಿಸ್ತರಣೆಗೆ 50 ಎಕರೆ ಗುರುತಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಮೈಸೂರು ಜಿಲ್ಲೆಯ ಇಮ್ಮಾವು ಗ್ರಾಮದಲ್ಲಿ ಚಿತ್ರನಗರಿ ನಿರ್ಮಿಸುವ ಕುರಿತು ನಡೆದ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಭೂಮಿ ಮಂಜೂರು ಮಾಡಲು ಸೂಚನೆ ನೀಡಲಾಗಿದೆ. ನೆರೆಯ ತೆಲಂಗಾಣದ ಹೈದರಾಬಾದ್‌ನಲ್ಲಿ ಇರುವ ರಾಮೋಜಿ ಫಿಲ್ಮ್‌ ಸಿಟಿ ಮಾದರಿಯಲ್ಲಿ ಕರ್ನಾಟಕದಲ್ಲೂ ಚಿತ್ರನಗರಿ ನಿರ್ಮಿಸಬೇಕೆಂಬುದು ಡಾ.ರಾಜ್‌ಕುಮಾರ್ ಅವರ ಕನಸಾಗಿತ್ತು. ಇದಕ್ಕಾಗಿ ಪ್ರಯತ್ನಗಳನ್ನು ಮಾಡುತ್ತಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಇತ್ತೀಚೆಗೆ ಹೇಳಿದ್ದರು. ಇದೀಗ ಫಿಲ್ಮ್‌ ಸಿಟಿ ನಿರ್ಮಾಣಕ್ಕೆ ಭೂಮಿ ಮಂಜೂರು ಮಾಡಲು ಸೂಚನೆ ನೀಡಿದ್ದಾರೆ.
ಇನ್ನು ಫಿಲ್ಮ್‌ ಸಿಟಿ ಮೊದಲ ಹಂತದ ಯೋಜನೆಯನ್ನು ಕೂಡಲೇ ಪ್ರಾರಂಭಿಸಲು ಸೂಚಿಸಿರುವ ಸಿಎಂ, 2015-16 ರಲ್ಲಿ ಆಯವ್ಯಯ ಘೋಷಣೆ ಮಾಡಲಾಗಿತ್ತು. ಆದರೆ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಇದನ್ನು ಪಿಪಿಪಿ ಮಾದರಿಯಲ್ಲಿ ಅನುಷ್ಠಾನಗೊಳಿಸಲು ಟ್ರಾನ್ಸಾಕ್ಷನ್‌ ಅಡ್ವೈಸರ್‌ ನೇಮಕ ಮಾಡಲು ಟೆಂಡರ್‌ ಕರೆಯುವಂತೆ ಸೂಚಿಸಿದರು.
ಭೂಮಿಯನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ಹಸ್ತಾಂತರ ಮಾಡಿದ ನಂತರ ಪಿಪಿಪಿ ಮಾದರಿಯಲ್ಲಿ ಎಕ್ಸ್‌ಪ್ರೆಷನ್‌ ಆಫ್‌ ಇಂಟರೆಸ್ಟ್ ಕರೆಯಲು ಕ್ರಮ ಕೈಗೊಳ್ಳಬೇಕು. ಇಂದಿನ ಚಿತ್ರರಂಗಕ್ಕೆ ಅಗತ್ಯವಿರುವ ತಂತ್ರಜ್ಞಾನಗಳನ್ನೊಳಗೊಂಡ ಅತ್ಯಾಧುನಿಕ ಮಾದರಿಯ ಚಿತ್ರನಗರಿ ನಿರ್ಮಿಸಬೇಕು. ಚಿತ್ರನಗರಿಯಲ್ಲಿ ಥಿಯೇಟರ್‌, ಸ್ಟುಡಿಯೋ, ಮಲ್ಟಿಪ್ಲೆಕ್ಸ್‌, ಥೀಮ್‌ ಪಾರ್ಕ್‌, ಹೋಟೆಲ್‌ಗಳನ್ನೂ ನಿರ್ಮಿಸಲು ಸೂಚಿಸಿದರು.
ಟ್ರಾನ್ಸಾಕ್ಷನ್‌ ಅಡ್ವೈಸರ್‌ ನೇಮಕವಾದ ನಂತರ ಚಿತ್ರರಂಗದ ಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಿ, ಚಿತ್ರನಗರಿಯ ರೂಪರೇಷೆಗಳನ್ನು ಅಂತಿಮಗೊಳಿಸಬೇಕು.  ಇದರಿಂದ ಪ್ರವಾಸೋದ್ಯಮಕ್ಕೂ ಹೆಚ್ಚಿನ ಉತ್ತೇಜನ ದೊರೆಯಬೇಕು. ಹೊಸ ಪ್ರವಾಸೋದ್ಯಮ ನೀತಿಯಲ್ಲಿ ಚಿತ್ರ ಪ್ರವಾಸೋದ್ಯಮಕ್ಕೆ ( ) ಒತ್ತು ನೀಡಲು ಸೂಚಿಸಿದರು.
ಈ ಸುದ್ದಿಯನ್ನೂ ಓದಿ | : ನವೀಕರಿಸಬಹುದಾದ ಇಂಧನ; 32.45 ಲಕ್ಷ ಕೋಟಿ ರೂ. ಜಾಗತಿಕ ಹೂಡಿಕೆ ಸೆಳೆದ ಭಾರತ
ಸಭೆಯಲ್ಲಿ ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ. ಮಹದೇವಪ್ಪ, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಸೀರ್‌ ಅಹ್ಮದ್‌, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲ, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್‌, ಮುಖ್ಯಮಂತ್ರಿಯವರ ಕಾರ್ಯದರ್ಶಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಾರ್ಯದರ್ಶಿ ಡಾ. ಕೆ.ವಿ. ತ್ರಿಲೋಕ್‌ ಚಂದ್ರ, ಆಯುಕ್ತ ಹೇಮಂತ್‌ ಎಂ. ನಿಂಬಾಳ್ಕರ್‌ ಹಾಗೂ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.