ಕೆಪಿಸಿಸಿಯಿಂದ ಮಾಜಿ ಸಚಿವ ರಾಜಶೇಖರ್ ಗೆ ಶ್ರದ್ಧಾಂಜಲಿ
ಬೆಂಗಳೂರು:
ಇಂದು ಬೆಳಗ್ಗೆ ನಿಧನರಾದ ಕಾಂಗ್ರೆಸ್ ಹಿರಿಯ ನಾಯಕ, ಕೇಂದ್ರದ ಮಾಜಿ ಸಚಿವ ಎಂ.ವಿ ರಾಜಶೇಖರನ್ ಅವರಿಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ಶ್ರದ್ದಾಂಜಲಿ ಸಲ್ಲಿಸಲಾಯಿತು.
ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಕಾರ್ಯಾಧ್ಯಕ್ಷ ಸಲೀಂ ಅಹಮದ್ ಮತ್ತಿತರ ನಾಯಕರು ಸಂತಾಪ ಸೂಚಕ ಸಭೆಯಲ್ಲಿ ಎಂ.ವಿ ರಾಜಶೇಖರನ್ ಅವರ ಭಾವಚಿತ್ರಕ್ಕೆ ಪುಷ್ಟನಮನ ಸಲ್ಲಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಒಂದು ನಿಮಿಷಗಳ ಕಾಲ ಮೌನಚರಣೆ ಮಾಡಿ ಸಂತಾಪ ಸೂಚಿಸಲಾಯಿತು. ಈ ವೇಳೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಿಷ್ಟು:
‘ಹಿರಿಯ ನಾಯಕ ಎಂ.ವಿ. ರಾಜಶೇಖರನ್ ಅವರನ್ನು ಬಹಳ ಹತ್ತಿರದಿಂದ ನೋಡಿದ್ದೇನೆ. ನಮ್ಮ ಕನಕಪುರ ತಾಲೂಕಿನವರೇ ಆಗಿದ್ದಾರೆ. ನಮ್ಮ ಕ್ಷೇತ್ರದಿಂದಲೇ ಲೋಕಸಭೆ ಸಂಸದರಾಗಿ ಆಯ್ಕೆಯಾಗಿದ್ದರು. ಈ ದೇಶದ ಪ್ರಜಾತಂತ್ರ ವ್ಯವಸ್ಥೆಯ ನಾಲ್ಕು ಮನೆಗಳಾದ ಲೋಕಸಭೆ, ರಾಜ್ಯಸಭೆ, ವಿಧಾನಸಭೆ, ವಿಧಾನ ಪರಿಷತ್ ನ ಸದಸ್ಯರಾಗಿದ್ದ ನಾಯಕ. ಯುಪಿಎ ಸರ್ಕಾರದಲ್ಲಿ ಕೇಂದ್ರದ ಮಂತ್ರಿಯೂ ಆಗಿದ್ದರು. ಇನ್ನು ಪಕ್ಷದ ಕಾರ್ಯಕಾರಿ ಸಮಿತಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಅವರದು ಬಹಳ ಶಿಸ್ತುಬದ್ಧ ಜೀವನ. ಯಾವ ಸಂದರ್ಭದಲ್ಲೂ ಕೂಡ ಅವರ ಕುಟುಂಬ ಒಂದು ದಿನವೂ ರಾಜಕಾರಣದ ಕಡೆ ಬರಲಿಲ್ಲ. ನಾವು ಎಷ್ಟೋ ಬಾರಿ ನಿಮ್ಮ ಮನೆಯಿಂದ ಮತ್ತೊಬ್ಬರನ್ನು ರಾಜಕಾರಣಕ್ಕೆ ತನ್ನಿ ಎಂದು ಕೇಳಿಕೊಂಡರೂ ಅದಕ್ಕೆ ಒಪ್ಪಲಿಲ್ಲ. ಈ ರೀತಿ ತಮ್ಮದೇ ಆದ ತತ್ವ, ನೀತಿ ಇಟ್ಟುಕೊಂಡು ಕೆಲಸ ಮಾಡಿಕೊಂಡು ಬಂದಿದ್ದರು. ಅವರು ಯುವಕರಿಗೆ ಸ್ಫೂರ್ತಿ ನೀಡುವಂತದ್ದು, ಮಾರ್ಗದರ್ಶನ ನೀಡುವುದನ್ನು, ಕೆಲವು ಬಾರಿ ಅನೇಕ ವಿಚಾರಗಳನ್ನು ನೇರವಾಗಿ ಮನದಟ್ಟು ಮಾಡಿಕೊಟ್ಟಿದ್ದನ್ನು ನಾವು ನೋಡಿದ್ದೇವೆ.
ಒಮ್ಮೆ ಶ್ರೀಮತಿ ಸೋನಿಯಾಗಾಂಧಿ ಅವರಿಗೆ ಗಮನ ಸೆಳೆದು ನಿಜಲಿಂಗಪ್ಪ ಅವರ ಮನೆಗೆ ಭೇಟಿ ಮಾಡಿಸಬೇಕು ಎಂದು ಪ್ರಯತ್ನ ಮಾಡಿ ಯಶಸ್ಸಾಗಿದ್ದನ್ನು ನಾವು ನೋಡಿದ್ದೇವೆ. ಹಾಗೆ ತಮ್ಮದೇ ಆದ ರೀತಿಯಲ್ಲಿ ದೇಶಕ್ಕೆ ಹಾಗೂ ಪಕ್ಷಕ್ಕೆ ಸೇವೆ ಸಲ್ಲಿಸಿದ್ದಾರೆ. ಅವರು ಹತ್ತಾರು ವರ್ಷಗಳ ರಾಜಕಾರಣದಲ್ಲಿ ಅಜಾತಶತ್ರುವಂತೆ ಮಾರ್ಗದರ್ಶನ ನೀಡಿದ್ದಾರೆ.
ಹದಿನೈದು ದಿನಗಳ ಹಿಂದೆ ಅವರನ್ನು ಆಸ್ಪತ್ರೆಯಲ್ಲಿ ನೋಡಿಕೊಂಡು ಬಂದಿದ್ದೆ. ಅವರು ಅಷ್ಟೊತ್ತಿಗಾಗಲೆ ಅನೇಕ ಬಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಆರೋಗ್ಯ ಕುಸಿದಿದ್ದರೂ ಕೂಡ ಅವರ ಚಿಂತನೆ, ವಿಚಾರದಲ್ಲಿ ಬದಲಾವಣೆ ಇರಲಿಲ್ಲ. ಇಂದು ಅವರು ಕೊನೆಯುಸಿರೆಳೆದಿದ್ದಾರೆ. ಈ ಸಂದರ್ಭದಲ್ಲಿ ನಾವೆಲ್ಲ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ನಾಯಕರು ಹಾಗೂ ಅವರ ಸಹೋದ್ಯೋಗಿಯಾಗಿದ್ದ ಮಲ್ಲಿಕಾರ್ಜುನ ಖರ್ಗೆ ಸಾಹೇಬರು ಗೌರವ ಸಲ್ಲಿಸಿದ್ದೇವೆ.
ಪ್ರಸ್ತುತ ಪರಿಸ್ಥಿತಿ ಸರಿಯಾಗಿಲ್ಲ ಎಂಬ ಕಾರಣಕ್ಕಾಗಿ ನಾವು ಹೆಚ್ಚು ಜನಕ್ಕೆ ಈ ಕಾರ್ಯಕ್ರಮದ ಬಗ್ಗೆ ತಿಳಿಸಲಿಲ್ಲ. ಸಾಂಕೇತಿಕವಾಗಿ ಗೌರವ ಸಲ್ಲಿಸಲು ನಾವು ಶ್ರದ್ದಾಂಜಲಿ ಕಾರ್ಯಕ್ರಮ ಮಾಡುತ್ತಿದ್ದೇವೆ. ಈ ಸಂದರ್ಭದಲ್ಲಿ ಅವರ ಕುಟುಂಬಕ್ಕೆ ಶ್ರೀಮತಿ ಸೋನಿಯಾ ಗಾಂಧಿ ಅವರು ಪತ್ರ ಬರೆದು ನನಗೆ ತಲುಪಿಸಿದ್ದಾರೆ. ರಾಹುಲ್ ಗಾಂಧಿ ಹಾಗೂ ನಮ್ಮ ರಾಜ್ಯದ ಉಸ್ತುವಾರಿ ಹೊತ್ತಿರುವ ವೇಣುಗೋಪಾಲ್ ಅವರೂ ಕೂಡ ನಮ್ಮ ಬಳಿ ಮಾಹಿತಿ ಪಡೆದು ಸಂತಾಪ ಸೂಚಿಸಿದ್ದಾರೆ. ಈ ಸಂದೇಶವನ್ನು ನಾನು ರಾಜಶೇಖರನ್ ಅವರ ಕುಟುಂಬಕ್ಕೆ ತಲುಪಿಸುತ್ತೇನೆ. ಅವರ ಅಗಲಿಕೆ ನಮ್ಮ ಪಕ್ಷ ಹಾಗೂ ದೇಶಕ್ಕೆ ತುಂಬಲಾರದ ನಷ್ಟವಾಗಿದೆ.’