ಕರೋನಾ ಕಪಿಮುಷ್ಠಿಯಲ್ಲಿ ಭಾರತ, 24 ಗಂಟೆಯಲ್ಲಿ 4,213 ಮಂದಿಗೆ ಪಾಸಿಟಿವ್
ಮುಂಬೈ:
ಭಾರತದಲ್ಲಿ ಕರೋನಾ ವೈರಸ್ ಆರ್ಭಟ ಲಾಕ್‌ಡೌನ್ ಸಡಿಲಿಕೆ ನಂತರ ದಿನೇ ದಿನೇ ತೀವ್ರಗೊಳ್ಳುತ್ತಿರುವುದು ದೇಶವ್ಯಾಪಿ ಭಾರೀ ಆತಂಕಕ್ಕೆ ಕಾರಣವಾಗಿದೆ.
ಹೆಮ್ಮಾರಿ ವಿಷವ್ಯೂಹದಲ್ಲಿ ಸೋಂಕು ಮತ್ತು ಸಾವಿನ ಸಂಖ್ಯೆ ದಿನನಿತ್ಯದ ಸುದ್ದಿಯಾಗಿದೆ. ಭಾರತದಲ್ಲಿ ಸಾವಿನ ಸಂಖ್ಯೆ 2,200 ದಾಟಿದ್ದು, ಸೋಂಕು ಪೀಡಿತರ ಸಂಖ್ಯೆ 67 ಸಾವಿರ ಮುಟ್ಟಿರುವುದು ಕಳವಳಕಾರಿಯಾಗಿದೆ. ದೇಶಾದ್ಯಂತ ಕಳೆದ 24 ತಾಸುಗಳಲ್ಲಿ ದಾಖಲೆ ಪ್ರಮಾಣದ 4,213 ಸೋಂಕು ಪ್ರಕರಣಗಳು ಪತ್ತೆಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಲಾಕ್‌ಡೌನ್ ನಂತರ ಸತತ ಏಳನೇ ದಿನ ಇದು ಅತಿ ಹೆಚ್ಚು ಸೋಂಕುಗಳ ಪ್ರಕರಣವಾಗಿದೆ. ಕಳೆದ ಒಂದು ವಾರದಿಂದ ಪ್ರತಿ ದಿನ ಸರಾಸರಿ 3 ಸಾವಿರ ಮಂದಿಯಲ್ಲಿ ಸೋಂಕು ಪತ್ತೆಯಾಗುತ್ತಿರುವುದು ಪರಿಸ್ಥಿತಿಯ ಭೀಕರತೆಗೆ ಸಾಕ್ಷಿಯಾಗಿದೆ. ಸಾಂಕ್ರಾಮಿಕ ರೋಗ ಆಘಾತಕಾರಿ ಮಟ್ಟದಲ್ಲಿ ಸ್ಫೋಟಗೊಂಡಿರುವುದು ಕೇಂದ್ರ ಮತ್ತು ರಾಜ್ಯ ಸರಕಾರಗಳನ್ನು ಚಿಂತೆಗೀಡು ಮಾಡಿದ್ದು, ಜನರು ಮತ್ತಷ್ಟು ಭಯಭೀತರಾಗಿದ್ದಾರೆ. ಭಾನುವಾರ ರಾತ್ರಿವರೆಗೆ  ದೇಶದ ವಿವಿಧ ರಾಜ್ಯಗಳಲ್ಲಿ 97 ಮಂದಿಯನ್ನು ಕರೋನಾ ಬಲಿ ತೆಗೆದುಕೊಂಡಿದೆ.
ಮಹಾರಾಷ್ಟ್ರದಲ್ಲಿ 53, ಗುಜರಾತ್‌ನಲ್ಲಿ 21, ಪಶ್ಚಿಮ ಬಂಗಾಳದಲ್ಲಿ 14, ತಮಿಳುನಾಡು 3 ಹಾಗೂ ಆಂಧ್ರಪ್ರದೇಶ, ಬಿಹಾರ,ಹರಿಯಾಣ, ಕರ್ನಾಟಕ ಮತ್ತು ರಾಜಸ್ತಾನದಲ್ಲಿ ತಲಾ ಒಂದೊಂದು ಸಾವು ಸಂಭವಿಸಿದೆ. ಭಾನುವಾರ ಮಧ್ಯರಾತ್ರಿವರೆಗೆ ಲಭಿಸಿದ ಮಾಹಿತಿ ಪ್ರಕಾರ ದೇಶದಲ್ಲಿ ಕರೋನಾ ವೈರಸ್ ಬಲಿಯಾದವರ ಸಂಖ್ಯೆ 2,206ಕ್ಕೇರಿದ್ದು, ಸಾಂಕ್ರಾಮಿಕ ರೋಗಿಗಳ ಸಂಖ್ಯೆ 67,152 ತಲುಪಿದೆ.  ಸೋಂಕಿತರ ಪ್ರಮಾಣ 69 ಸಾವಿರ  ದಾಟುವ ಆತಂಕ ಉಂಟಾಗಿದೆ.
ಲಾಕ್‌ಡೌನ್ ಸಡಿಲ ಮಾಡುತ್ತಿದ್ದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಕರೋನಾ ಮಹಾಸ್ಫೋಟವಾಗಿದ್ದು, ಸಾವು ಸೋಂಕು ವ್ಯಾಪಕವಾಗಿ ಉಲ್ಬಣಗೊಂಡಿದೆ. ಎಚ್ಚರ ತಪ್ಪಿದರೆ ದೇಶಕ್ಕೆ ದೊಡ್ಡ ಗಂಡಾಂತರ ತಪ್ಪಿದ್ದಲ್ಲ ಎಂಬ ಭಯವೂ ಆವರಿಸಿದೆ.ಲಾಕ್‌ಡೌನ್ ಸಡಿಕೆಯಾದ ಬಳಿಕ ಈವರೆಗೆ 21 ಸಾವಿರ ಪ್ರಕರಣಗಳು ಪತ್ತೆಯಾಗಿವೆ. ಒಂದೆಡೆ ಚೇತರಿಕೆ ಪ್ರಮಾಣದಲ್ಲಿ ಸರಾಸರಿ ಶೇ.30 ಕ್ಕಿಿಂತ ಹೆಚ್ಚಾಗಿ ಸುಧಾರಣೆ ಕಂಡುಬಂದಿದ್ದರೂ, ಮತ್ತೊೊಂದೆಡೆ ದಿನನಿತ್ಯ ಮರಣ ಮತ್ತು ಸಾಂಕ್ರಾಮಿಕ ರೋಗ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ.
ಈವರೆಗೆ ಸಂಭವಿಸಿರುವ 2,206 ಸಾವು ಪ್ರಕರಣಗಳಲ್ಲಿ, ಮಹಾರಾಷ್ಟ್ರ ಎಂದಿನಂತೆ ಪ್ರಥಮ ಸ್ಥಾನದಲ್ಲಿಯೇ ಮುಂದುವರಿದಿದೆ. ಆ ರಾಜ್ಯದಲ್ಲಿ ಒಟ್ಟು 832 ಸಾವುಗಳಾಗಿವೆ. ದೇಶದಲ್ಲಿ ಸಂಭವಿಸಿದ ಒಟ್ಟು ಸಾವು ಪ್ರಕರಣಗಳಲ್ಲಿ ಮಹಾರಾಷ್ಟ್ರದಲ್ಲೇ ಸುಮಾರು ಶೇ.40ರಷ್ಟು ಮರಣ ವರದಿಯಾಗಿದೆ. ರಾಜಧಾನಿ ಮುಂಬೈನಲ್ಲಿ ಅತಿ ಹೆಚ್ಚು ಸಾವು ಮತ್ತು ಸೋಂಕು ಸಂಭವಿಸಿವೆ. ನಂತರದ ಸ್ಥಾನಗಳಲ್ಲಿ ಗುಜರಾತ್ (493), ಮಧ್ಯಪ್ರದೇಶ (215), ಪಶ್ಚಿಮ ಬಂಗಾಳ (185), ರಾಜಸ್ತಾನ (107), ಉತ್ತರ ಪ್ರದೇಶ (74) ದೆಹಲಿ (73), ತಮಿಳುನಾಡು (47), ಆಂಧ್ರಪ್ರದೇಶ (45), ಕರ್ನಾಟಕ ಮತ್ತು ಪಂಜಾಬ್ (ತಲಾ 31), ತೆಲಂಗಾಣ (30) ರಾಜ್ಯಗಳಿವೆ.
ಹರಿಯಾಣ ಹತ್ತು , ಜಮ್ಮು-ಕಾಶ್ಮೀರ ಒಂಭತ್ತು, ಬಿಹಾರ ಆರು, ಕೇರಳ ನಾಲ್ಕು, ಜಾರ್ಖಂಡ್ ಮತ್ತು ಒಡಿಶಾ ತಲಾ ಮೂರು, ಚಂಡಿಗಢ, ಅಸ್ಸಾಾಂ ಮತ್ತು ಹಿಮಾಚಲ ಪ್ರದೇಶದಲ್ಲಿ ತಲಾ ಎರಡು ಹಾಗೂ ಮೇಘಾಲಯ ಮತ್ತು ಉತ್ತರಾಖಂಡ ರಾಜ್ಯಗಳಲ್ಲಿ ತಲಾ ಒಂದೊಂದು ಸಾವುಗಳು ವರದಿಯಾಗಿವೆ. ಕರೋನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ ಸಹ ಹೆಚ್ಚಾಗುತ್ತಿದ್ದು, 44,028ರಷ್ಟಿದೆ.
ಈ ಮಧ್ಯೆ, ಈವರೆಗೆ 20,915 (ಚೇತರಿಕೆ ಪ್ರಮಾಣ ಶೇ.31.15) ಮಂದಿ ಗುಣಮುಖರಾಗಿದ್ದಾರೆ. ದೇಶದಲ್ಲಿ ವೈರಾಣು ಸೋಂಕಿನಿಂದ ಗುಣಮುಖರಾಗುತ್ತಿರುವವರ ಸಂಖ್ಯೆಯಲ್ಲಿ ವೃದ್ದಿ ಕಂಡು ಬಂದಿರುವುದು ಸಮಾಧಾನಕರ ಸಂಗತಿಯಾದರೂ, ಮತ್ತೊೊಂದಡೆ ಸೋಂಕು ಮತ್ತು ಸಾವು ಹೆಚ್ಚಾಗುತ್ತಿರುವುದು ಕಳವಳಕಾರಿಯಾಗಿದೆ. ಸೋಮವಾರ  ಬೆಳಗ್ಗೆಯೂ ಕೆಲವು ರಾಜ್ಯಗಳಲ್ಲಿ ಸಾವು ಪ್ರಕರಣಗಳು ವರದಿಯಾಗಿದೆ. ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ, ರಾಜಸ್ತಾನ, ಪಶ್ಚಿಮ ಬಂಗಾಳ, ದೆಹಲಿ, ಕರ್ನಾಟಕ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಪಂಜಾಬ್, ಓಡಿಶಾ ಮತ್ತಿತರ ರಾಜ್ಯಗಳಲ್ಲಿ ಹೊಸ ಸೋಂಕು ಪ್ರಕರಣ ಪತ್ತೆಯಾಗಿವೆ.