  : ಗ್ರಾಮೀಣ ಪತ್ರಕರ್ತರಿಗೆ ಗುಡ್‌ ನ್ಯೂಸ್‌; ಉಚಿತ ಬಸ್ ಪಾಸ್ ಜಾರಿಗೆ ಸರ್ಕಾರ ಆದೇಶ
ಬೆಂಗಳೂರು:ಗ್ರಾಮೀಣ ಪತ್ರಕರ್ತರಿಗೆ ರಾಜ್ಯ ಸರ್ಕಾರ ಗುಡ್‌ ನ್ಯೂಸ್‌ ನೀಡಿದೆ. ಪತ್ರಕರ್ತರ ದಶಕಗಳ ಬೇಡಿಕೆಯಾದ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಸೌಲಭ್ಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುದ್ರೆ ಒತ್ತಿದ್ದಾರೆ. ಗ್ರಾಮೀಣ ಪತ್ರಕರ್ತರ ಉಚಿತ ಪಾಸ್ (  ) ಜಾರಿಗೆ ಅಧಿಕೃತ ಆದೇಶ ಹೊರಡಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊಟ್ಟ ಭರವಸೆಯನ್ನು ಈಡೇರಿಸಿದ್ದಾರೆ.
ಈ ಬಗ್ಗೆ ವಾರ್ತಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಎಂ.ಜೆಸಿಂತ ಅದೇಶ ಹೊರಡಿಸಿದ್ದು, 2024-25ನೇ ಸಾಲಿನ ಆಯವ್ಯಯಲ್ಲಿ ಗ್ರಾಮೀಣ ಪತ್ರಕರ್ತರಿಗೆ ವೃತ್ತಿ ಸಂಬಂಧಿ ಚಟುವಟಿಕೆಗಳಿಗೆ ಜಿಲ್ಲಾ ವ್ಯಾಪ್ತಿಯಲ್ಲಿ ಪ್ರಯಾಣಿಸಲು ಉಚಿತ ಬಸ್ ಪಾಸ್ ವಿತರಿಸಲಾಗುವುದು ಎಂದು ರಾಜ್ಯ ಸರ್ಕಾರ ಘೋಷಿಸಿತ್ತು.
ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಸೌಲಭ್ಯವನ್ನು ಅನುಷ್ಠಾನಗೊಳಿಸುವುದಕ್ಕೆ ಸಂಬಂಧಿಸಿದಂತೆ 2024ರ ಮಾರ್ಚ್‌ 21ರಲ್ಲಿದ್ದಂತೆ ಮಾಧ್ಯಮ ಪಟ್ಟಿಯಲ್ಲಿರುವ ಮುದ್ರಣ, ವಿದ್ಯುನ್ಮಾನ ಮಾಧ್ಯಮಗಳ ಸಂಖ್ಯೆಯನ್ನಾಧರಿಸಿ, ರಾಜ್ಯಾದ್ಯಂತ ಒಟ್ಟು 5222 ಪತ್ರಕರ್ತರಿಗೆ ಈ ಯೋಜನೆಯನ್ನು ಒದಗಿಸಲು, ಕೆ.ಎಸ್.ಆರ್.ಟಿ.ಸಿ ಸಂಸ್ಥೆಯು ನೀಡಿರುವ ಅಂದಾಜಿನಂತೆ, ಪ್ರತಿ ಪಾಸುದಾರರಿಗೆ ಪ್ರತಿ ತಿಂಗಳಿಗೆ 2500 ರೂ.ಗಳಾಗಬಹುದೆಂದು ವೆಚ್ಚವನ್ನು ಅಂದಾಜಿಸಿಲಾಗಿದೆ.
ಈ ಸುದ್ದಿಯನ್ನೂ ಓದಿ | : ಸೆ.29ಕ್ಕೆ  ಕಡ್ಡಾಯ ಕನ್ನಡ ಪರೀಕ್ಷೆ; ಪ್ರವೇಶ ಪತ್ರಕ್ಕಾಗಿ ಅರ್ಜಿ ಸಂಖ್ಯೆ ಪಡೆಯಲು ಲಿಂಕ್‌ ಬಿಡುಗಡೆ
ಈ ಲೆಕ್ಕಚಾರದಂತೆ ಪ್ರತಿ ತಿಂಗಳಿಗೆ 1,30,55,000 ರೂ.ಗಳು ಹಾಗೂ ವಾರ್ಷಿಕ ಅಂದಾಜು ಅನುದಾನ 15,66,60,000 ರೂ.ಗಳ ಅವಶ್ಯಕತೆ ಇರುತ್ತದೆ ಎಂದು ಅಂದಾಜಿಸಲಾಗಿದೆ. ಯೋಜನೆಯನ್ನು ಸಾರಿಗೆ ಇಲಾಖೆಯ ಸಹಯೋಗದೊಂದಿಗೆ ಈ ಕೆಳಗಿನ ಮಾರ್ಗಸೂಚಿಗಳು ಹಾಗೂ ಷರತ್ತುಗಳನ್ವಯ ತಕ್ಷಣದಿಂದ ಜಾರಿಗೆ ಬರುವಂತೆ ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ಗ್ರಾಮೀಣ ಪತ್ರಕರ್ತರು ಬಸ್ ಪಾಸ್ ಪಡೆಯುಲು ಈ ಕೆಳಕಂಡ ಷರತ್ತುಗಳನ್ನು ಪೂರೈಸಿರಬೇಕು
ರಾಜ್ಯಮಟ್ಟದ ಪತ್ರಿಕೆಗಳು
ರಾಜ್ಯಮಟ್ಟದ ಪತ್ರಿಕೆಗಳಿಗೆ ಸಂಬಂಧಿಸಿದಂತೆ ರಾಜ್ಯದಲ್ಲಿ 15 ಪತ್ರಿಕೆಗಳಿದ್ದು (ಕನ್ನಡ ಮತ್ತು ಆಂಗ್ಲ ಸೇರಿ) ಜಿಲ್ಲೆಗಳಲ್ಲಿ ಸದರಿ ಪತ್ರಿಕೆಗಳ ಸಂಸ್ಥೆಯ ಮುಖ್ಯಸ್ಥರು ಸೂಚಿಸುವ ತಾಲ್ಲೂಕಿಗೆ ಓರ್ವ ವರದಿಗಾರರಂತೆ ಬಸ್ ಪಾಸ್ ನೀಡಲಾಗುವುದು.
ಜಿಲ್ಲಾ ಮಟ್ಟದ ಪತ್ರಿಕೆಗಳುಪತ್ರಿಕೆಗಳ ಸಂಪಾದಕರು ಮಾಧ್ಯಮ ಮಾನ್ಯತಾ ಪತ್ರ ಪಡೆದಿರದಿದ್ದರೆ ಸಂಪಾದಕರು ಅಥವಾ ಸಂಪಾದಕರು ಶಿಫಾರಸು ಮಾಡುವ ಜಿಲ್ಲೆಯ ಓರ್ವ ವರದಿಗಾರರು.
ಪ್ರಾದೇಶಿಕ ಪತ್ರಿಕೆಗಳುಪ್ರಾದೇಶಿಕ ಪತ್ರಿಕೆಗಳ ವರದಿಗಾರರಿಗೆ, ಪತ್ರಿಕೆಯ ಪುಟಗಳ ಸಂಖ್ಯೆ ಆಧರಿಸಿ ಈ ಕೆಳಗಿನಂತೆ ಬಸ್‌ಪಾಸ್‌ಗಳನ್ನು ನೀಡಲಾಗುವುದು.
ನಿಯತಕಾಲಿಕೆಗಳುನಿಯತಕಾಲಿಕೆಗಳಿಗೆ ಬಸ್‌ಪಾಸ್ ನೀಡಲು ಅವಕಾಶವಿಲ್ಲ.
ವಿಶೇಷ ಮಾಧ್ಯಮ ಪಟ್ಟಿಯಲ್ಲಿರುವ ಪತ್ರಿಕೆಗಳುವಿಶೇಷ ಮಾಧ್ಯಮ ಪಟ್ಟಿಯಲ್ಲಿರುವ ಪತ್ರಿಕೆಗಳಿಗೆ ಬಸ್‌ಪಾಸ್ ನೀಡಲು ಅವಕಾಶವಿಲ್ಲ.
ವಿದ್ಯುನ್ಮಾನ ಮಾಧ್ಯಮಮಾಧ್ಯಮ ಮಾನ್ಯತಾ ನಿಯಮಾವಳಿಗಳು-2009ರನ್ವಯ ಜಿಲ್ಲಾ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಉಪಗ್ರಹ ವಾಹಿನಿಗಳ ಒಬ್ಬ ವರದಿಗಾರ ಮತ್ತು ಒಬ್ಬ ಕ್ಯಾಮೆರಾಮನ್‌ಗೆ ಮಾಧ್ಯಮ ಮಾನ್ಯತಾ ಪತ್ರ ಹಾಗೂ ರಾಜ್ಯಾದ್ಯಂತ ಉಚಿತವಾಗಿ ಸಂಚರಿಸಲು ಬಸ್ ಪಾಸ್(ಸ್ಮಾರ್ಟ್ ಕಾರ್ಡ್) ನೀಡಲಾಗಿದೆ. ರಾಜ್ಯದ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ರಾಜ್ಯದ ಉಪಗ್ರಹ ವಾಹಿನಿಗಳ ಪೂರ್ಣಾವಧಿ ವರದಿಗಾರರು, ಕ್ಯಾಮೆರಾಮನ್ ಕಾರ್ಯ ನಿರ್ವಹಿಸುತ್ತಿರುವುದಿಲ್ಲ. ಅದಾಗಿಯೂ ತಾಲೂಕು ಕೇಂದ್ರಗಳಲ್ಲಿ ಉಪಗ್ರಹ ವಾಹಿನಿಗಳ ವರದಿಗಾರರು ಮತ್ತು ಕ್ಯಾಮೆರಾಮ್ಯಾನ್ ಸೇವೆ ಸಲ್ಲಿಸುತ್ತಿದ್ದಲ್ಲಿ ಜಿಲ್ಲೆಗೆ ಓರ್ವ ವರದಿಗಾರ ಮತ್ತು ಓರ್ವ ಕ್ಯಾಮೆರಾಮ್ಯಾನ್‌ಗೆ (ವಾಹಿನಿಯ ಸಂಪಾದಕರು ಶಿಫಾರಸಿನ ಅನ್ವಯ) ನೀಡಲಾಗುವುದು.
ಈ ಸುದ್ದಿಯನ್ನೂ ಓದಿ | : ಇಪಿಎಫ್‌ ಕ್ಲೈಮ್‌ ತಿರಸ್ಕೃತಗೊಳ್ಳಲು ಕಾರಣವೇನು? ಬಗೆ ಹರಿಸುವುದು ಹೇಗೆ? ಇಲ್ಲಿದೆ ಟಿಪ್ಸ್‌
ಷರತ್ತುಗಳು
ಆಸಕ್ತ ಪತ್ರಕರ್ತರು ನಿಗದಿತ ನಮೂನೆಯಲ್ಲಿ ಅರ್ಜಿಗಳನ್ನು ಭರ್ತಿ ಮಾಡಿ, ಸಂಪಾದಕರ/ ಮುಖ್ಯಸ್ಥರ ಶಿಫಾರಸಿನೊಂದಿಗೆ ಪೂರಕ ದಾಖಲೆಗಳೊಂದಿಗೆ ಅರ್ಜಿಗಳನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಜಿಲ್ಲಾ ಮಟ್ಟದ ಉಪ ನಿರ್ದೇಶಕರು, ಹಿರಿಯ ಸಹಾಯಕ ನಿರ್ದೇಶಕರು, ಸಹಾಯಕ ನಿರ್ದೇಶಕರ ಕಚೇರಿಗೆ ಸಲ್ಲಿಸಬೇಕು. ಜಿಲ್ಲಾ ವಾರ್ತಾಧಿಕಾರಿಗಳು ಸ್ವೀಕರಿಸಿದ ಅರ್ಜಿಗಳನ್ನು ಪರಿಶೀಲಿಸಿ ಅರ್ಹ ಅಭ್ಯರ್ಥಿಗಳ ಅರ್ಜಿಗಳನ್ನು ಶಿಫಾರಸಿನೊಂದಿಗೆ ನಿಗದಿಪಡಿಸಿದ ನಿಯಮಾನುಸಾರ ಕೇಂದ್ರ ಕಚೇರಿಗೆ ಕಳುಹಿಸಿಕೊಡಬೇಕು.
ಸಮಿತಿಯು ವರ್ಷಕ್ಕೆ ಎರಡು ಸಭೆಗಳನ್ನು ಕರೆದು ಸ್ವೀಕೃತವಾದ ಅರ್ಜಿಗಳನ್ನು ನಿಯಮಾನುಸಾರಇತ್ಯರ್ಥಪಡಿಸಬೇಕು. ಸಮಿತಿಯು ಅನುಮೋದಿಸಿದ ಅರ್ಜಿದಾರರ ಮಾಹಿತಿಯನ್ನು ವಾರ್ತಾ ಇಲಾಖೆಯ ಆಯಾ ಜಿಲ್ಲೆಗಳ ವಾರ್ತಾ ಅಧಿಕಾರಿಗಳು ಇ.ಡಿ.ಸಿಎಸ್ ಸೇವಾ ಸಿಂಧು ತಂತ್ರಾಂಶದಲ್ಲಿ ಅಪ್‌ಲೋಡ್ ಮಾಡಬೇಕು. ನಂತರ ಬಾಪೂಜಿ ಸೇವಾ ಕೇಂದ್ರ, ಬೆಂಗಳೂರು ಒನ್, ಕರ್ನಾಟಕ ಒನ್ ಮತ್ತು ಗ್ರಾಮ -ಒನ್‌ಗಳ ಮೂಲಕ ಪಾಸ್‌ಗಳನ್ನು ವಿತರಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.