ಮೂಕ ಹಕ್ಕಿಗಳ ಸಂಕಟ ಕೇಳುವವರಿಲ್ಲ
ಲಾಕ್‌ಡೌನ್‌ನಿಂದ ಕಂಗಾಲಾದ ಕುಟುಂಬ | ಒಂದೇ ಕುಟುಂಬದಲ್ಲಿ ನಾಲ್ವರು ಮೂಗರು
ವಿಶೇಷ ವರದಿ:ಅರುಣಕುಮಾರ ಹಿರೇಮಠ ಗದಗ
ಆ ಮನೆಯಲ್ಲಿ ಬರೋಬ್ಬರಿ ನಾಲ್ವರು ಮೂಗರು. ಮಾತು ಬರಲ್ಲ. ಅವರಿಗೆ ಬರುತ್ತಿದ್ದ ಸರಕಾರದ ಮಾಸಾಶನವೂ ಕಳೆದ ಎಂಟು ತಿಂಗಳಿಂದ ಬಾರದೇ ನಿಂತು ಹೋಗಿದೆ. ಹೊತ್ತಿನ ಊಟಕ್ಕೂ ಪರದಾಡುವ ಈ ಮೂಗರ ಕುಟುಂಬದ ರೋದನ ಮಾತ್ರ ಯಾರಿಗೂ ಕೇಳುತ್ತಿಲ್ಲ.
ಹೌದು, ಹಲವಾರು ಕುಟುಂಬಗಳಿಗೆ ಆಸರೆಯಾದ ಮಾಸಾಶನ ಈ ಕುಟುಂಬಕ್ಕೇಕಿಲ್ಲ. ಮನೆಯಲ್ಲಿ ನಾಲ್ವರು ಮೂಗರು. ಇವರಿಗೆತಿನ್ನಲು ಒಪ್ಪತ್ತಿನ ಊಟಕ್ಕೂ ಪರದಾಟ, ತುಂಬುತ್ತಿಲ್ಲ ಹೊಟ್ಟೆ. ಇವರುಗಳ ಮೂಕ ರೋದನ ಹೇಳತೀರದು. ಗದಗ ತಾಲೂಕಿನ ಮುಳಗುಂದ ಪಟ್ಟಣದ ಹರಣಶಿಕಾರಿ ಕಾಲೋನಿಯಂದು ಕುಟುಂಬವಿದೆ. ಮನೆಯಲ್ಲಿ ಗಂಡ, ಹೆಂಡತಿ ಹಾಗೂ ಮಕ್ಕಳಿಬ್ಬರೂ ಮೂಗರೇ.
ಪಟ್ಟಣದ ಲಿಂಗಪ್ಪ ಮಲ್ಲಪ್ಪ ಚವ್ಹಾಣ, ಹೆಂಡತಿ ಚಂದ್ರವ್ವ ಲಿಂಗಪ್ಪ ಚವ್ಹಾಣ, ಮಕ್ಕಳಾದ ಗಂಗಪ್ಪ, ಮಹಾಂತೇಶ ಈ ದುರಾದೃಷ್ಟವಂತರು. ಲಿಂಗಪ್ಪ ಹಾಗೂ ಒಬ್ಬ ಮಗ ಮೂಕರಾದರೂ ಪಟ್ಟಣದ ಹೋಟೆಲ್ ಒಂದರಲ್ಲಿ ಪಾತ್ರೆ ತೊಳೆದುಕುಟುಂಬ ನಿರ್ವಹಣೆ ಮಾಡುತ್ತಿದ್ದರು. ಆದರೆ ಲಾಕ್‌ಡೌನ್‌ನಿಂದ ಕಳೆದ ಹದಿನೈದು ದಿನಗಳಿಂದ ದುಡಿಯುವ ಕೈಗೆ ಕೆಲಸವಿಲ್ಲ. ತಿನ್ನಲು ಹೊಟ್ಟೆಗೆ ಅನ್ನವಿಲ್ಲ.
ತಂದೆ ಅನಾರೋಗ್ಯಕ್ಕೆ ತುತ್ತಾದರೆ ತಾಯಿಯೂ ಮೂಕಿ. ಮತ್ತೊಬ್ಬ ಮಗನೊಬ್ಬನಿಗೆ ಮೂಗತನದ ಜತೆಗೆ ಅಂಗವೈಕಲ್ಯ. ಇನ್ನೊಬ್ಬ ಮಗನಿಗೆ ಬುದ್ಧಿಮಾಂದ್ಯ. ಅಂಗ ವೈಕಲ್ಯವಿದ್ದರೂ ಹೋಟಲ್ ಒಂದರಲ್ಲಿ ಕೆಲಸ ಮಾಡಿ ಹೇಗೂ ಬದುಕಿನ ಬಂಡಿ ಯನ್ನು ಎಳೆಯುತ್ತಿದ್ದರು. ಆದರೆ, ಈಗ ಮಾಡಲು ಕೆಲಸವೂ ಇಲ್ಲವಾಗಿ, ಬದುಕಿನ ಬಂಡಿ ಸಾಗಿಸುವುದೇ ಕಷ್ಟವಾಗಿದೆ.
ಲಾಕ್‌ಡೌನ್ ವೇಳೆ ಈ ಕುಟುಂಬದ ಸ್ಥಿತಿ-ಗತಿ ಹಾಗೂ ಅನುಭವಿಸುತ್ತಿರುವ ಸಂಕಷ್ಟ ನೋಡಲು ಹೋದಾಗ ಮೂಗ ಕುಟುಂಬದ ಸದಸ್ಯರು ಕೈ ಸನ್ನೆಯ ನಮಗೇನಾದರೂ ಸಹಾಯ ಮಾಡಿ ಎಂದು ಹೇಳುತ್ತಿದ್ದುದು ಕಲ್ಲು ಹೃದಯವನ್ನೂ ಕರಗಿಸುವಂತಿತ್ತು.
ಎಂಟು ತಿಂಗಳಿಂದ ಮಾಸಾಶನವಿಲ್ಲ:ಮೊದಲು ಮನೆಯಲ್ಲಿ ನಾಲ್ಕು ಜನರಿಗೂ ಮಾಸಾಶನ ಬರುತ್ತಿತ್ತು. ಹಾಗೋ ಹೀಗೋ ಕುಟುಂಬ ನಿರ್ವಹಣೆ ಮಾಡಿತ್ತಿದ್ದರು. ಆದರೆ, ಈಗ ಎಂಟು ತಿಂಗಳಿನಿಂದ ಮಾಸಾಶನ ಬಾರದೇ ಹಸಿವಿನಲ್ಲಿಯೇ ಜೀವನ ಸವೆಸುವಂತಾಗಿದೆ. ಅವರು ಹೇಳುವ ಮಾತು ಬೇರೆಯವರಿಗೆ ತಿಳಿಯಲ್ಲ. ಇಂತಹ ಒಂದು ಮನ ಕಲುಕುವ ಕುಟುಂಬ ಇವರದ್ದಾಗಿದೆ.
ಸರಕಾರ ಸಹಾಯಹಸ್ತ ನೀಡಬಹುದೇ?:ಇಂತಹ ಹಲವಾರು ಕುಟುಂಬಗಳು ಎಲೆಮರೆಯ ಕಾಯಿಯಂತಿದ್ದು ಇವರಿಗೆ ಸರಕಾರ ಅಥವಾ ಯಾರಾದರೂ ಮುಂದೆ ಬಂದು ಸಹಾಯ ಹಸ್ತ ನೀಡಬಹುದೇ? ಎಂದು ಚಾತಕ ಪಕ್ಷಿಯಂತೆ ಕಾಯುತ್ತಿದೆ ಈ ಕುಟುಂಬ.
ಲಾಕ್‌ಡೌನ್ ಆಪತ್ತು:ಮಾತು ಬಾರದಿದ್ದರೂ ಹೋಟೆಲ್ ಒಂದರಲ್ಲಿ ತಂದೆ ಹಾಗೂ ಒಬ್ಬ ವಿಚೇತನ ಮಗ ಹೋಟೆಲ್ ಒಂದ ರಲ್ಲಿ ಕೆಲಸ ಮಾಡಿ, ಬದುಕಿನ ಬಂಡಿ ಓಡಿಸುತ್ತಿದ್ದರು. ಆದರೆ, ಇದೀಗ ಕರೋನಾ ಕಾರಣದಿಂದ ಉಂಟಾದ ಲಾಕ್ ಡೌನ್‌ನಿಂದಾಗಿ ಹೋಟೆಲ್‌ಗಳೂ ಬಂದ್ ಆಗಿದ್ದರಿಂದ ದುಡಿಮೆ ಇಲ್ಲದೇ ಕೂಲಿ ಇಲ್ಲ. ಲಾಕ್ ಡೌನ್ ಇವರ ಬದುಕನ್ನೇ ಕಸಿದುಕೊಂಡಿದೆ.
***
ಹರಣಶಿಕಾರಿ ಕಾಲೋನಿಯಲ್ಲಿ ಇಂತಹ ಮೂಗ ಅಂಗವಿಕಲರು ಸುಮಾರು20ರಿಂದ25ಜನರಿದ್ದಾರೆ. ಅದರಲ್ಲಿ ವಿಶೇಷವಾಗಿ ಈ ಕುಟುಂಬದಲ್ಲಿ ನಾಲ್ವರೂ ಮೂಗರೇ. ಒಬ್ಬ ಮಗ ಮೂಗತನದ ಜತೆಗೆ ಬುದ್ಧಿಮಾಂದ್ಯ. ಲಾಕ್‌ಡೌನ್ ವೇಳೆ ಇವರ ಕುಟುಂಬ ನಿರ್ವಹಣೆ ತುಂಬಾ ದುಸ್ತರವಾಗಿದ್ದು, ಸರಕಾರ ಇವರ ಸಹಾಯಕ್ಕೆ ಮುಂದಾಗಲಿ.-ಮಹಾಂತೇಶ ಕಣವಿ ಪಪಂ ಮಾಜಿ ಸದಸ್ಯ