ಚಿಕಿತ್ಸೆ ಪಡೆದು ಬಂದ ನಂತರ ಬಂತು ಪಾಸಿಟಿವ್‌ ಸಂದೇಶ
ವಿಶೇಷ ವರದಿ:ನಾಗಯ್ಯ ಲಾಳನಕೆರೆ
ಖಾಸಗಿ ಆಸ್ಪತ್ರೆಗಳ ಬಣ್ಣ ಬಯಲು ಮಾಡಿದ ವಕೀಲ
ಪರೀಕ್ಷೆ ಮಾಡಿಸದಿದ್ದರೂ ಪಾಸಿಟಿವ್ ಎಂಬ ಮೆಸೇಜ್
ದಂಧೆಗಿಳಿದ ಖಾಸಗಿ ಆಸ್ಪತ್ರೆಗಳಿಗೆ ನಿದರ್ಶನ
ಮಂಡ್ಯ:ಕರೋನಾ ‘ಕಾಸು’ ಮಾಡುವವರಿಗೆ ವರದಾನವಾಗಿದೆ. ಕರೋನಾ ನೆಪದಲ್ಲಿ ಜನರ ಅಸಹಾಯಕತೆಯನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವು ಖಾಸಗಿ ಆಸ್ಪತ್ರೆಗಳು ಎಗ್ಗಿಲ್ಲದೆ ದಂಧೆ ನಡೆಸುತ್ತಿರುವ ಸುದ್ದಿಗಳು ಬಯಲಾಗುತ್ತಿವೆ. ಇಂತಹ ದಂಧೆಗಳಿಗೊಂದು ತಾಜಾ ನಿದರ್ಶನ ಪಾಂಡವಪುರದಲ್ಲಿ ಸಿಕ್ಕಿದೆ.
ಹೌದು, ಪಾಂಡವಪುರ ತಾಲೂಕಿನ ವಕೀಲರೊಬ್ಬರಿಗೆ ಕರೋನಾ ಹೆಸರಲ್ಲಿ ದಂಧೆ ಮಾಡಲೆತ್ನಿಸಿರುವ ಖಾಸಗಿ ಆಸ್ಪತ್ರೆಯೊಂದರ ಬಣ್ಣ ಬಯಲಾಗಿದೆ. ಪಾಂಡವಪುರ ತಾಲೂಕಿನ ಚಿಕ್ಕಾಡೆ ಗ್ರಾಮದ ನಿವಾಸಿ, ವಕೀಲ ಧನಂಜಯ ಎಂಬುವವರಿಗೆ ಕರೋನಾ ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕಳೆದ ಏ.16ರಂದು ಕೋವಿಡ್ ಪರೀಕ್ಷೆ ಮಾಡಿಸಿಕೊಂಡಾಗ ಏ.17ರಂದು ಪಾಸಿಟಿವ್ ದೃಢಪಟ್ಟಿತ್ತು. ಹೀಗಾಗಿ ಅವರು ಮೈಸೂರಿನ ನಾರಾಯಣ ಹೃದ್ರೋಗಾಲಯ ಆಸ್ಪತ್ರೆಗೆ ದಾಖಲಾಗಿ10ದಿನಗಳ ವರೆಗೆ ಕೋವಿಡ್ ಚಿಕಿತ್ಸೆಗೆ ಒಳಗಾಗಿ1.44ಲಕ್ಷ ರು. ಬಿಲ್ ಕೂಡ ಪಾವತಿಸಿ ಮನೆಗೆ ಬಿಡುಗಡೆಯಾಗಿ ಬಂದಿದ್ದಾರೆ.
ಐಡಿ ಸಂಖ್ಯೆ ಕಳುಹಿಸಿಲ್ಲ:ಈ ವೇಳೆ ವಕೀಲ ಧನಂಜಯ ಅವರು ನಾರಾಯಣ ಹೃದ್ರೋಗಾಲಯ ಆಸ್ಪತ್ರೆಗೆ ಪಾವತಿಸಿರುವ ಬಿಲ್ ಹಣದ ಮೊತ್ತವನ್ನು ಹಿಂಪಡೆಯಲು ಅನುಕೂಲವಾಗುವಂತೆ ಆಸ್ಪತ್ರೆ ಆಡಳಿತ ವರ್ಗ ಕರೋನಾ ಪಾಸಿಟಿವ್ ವರದಿಯ ಎಸ್‌ಆರ್‌ಎಫ್ ಐಡಿ ಸಂಖ್ಯೆಯನ್ನು ಸರಕಾರಕ್ಕೆ ಕಳುಹಿಸಿಕೊಡದೆ ನಿರಾಸಕ್ತಿ ತೋರಿದೆ. ಈ ಬಗ್ಗೆ ಧನಂಜಯ ಅವರು ಆಸ್ಪತ್ರೆ ಯಿಂದ ಬಿಡುಗಡೆಯಾಗಿ ಮನೆಗೆ ಬಂದ ನಂತರ ವಿಚಾರಿಸಲಾಗಿ ಇಲ್ಲಸಲ್ಲದ ಸಬೂಬು ಹೇಳಿ ಅವರನ್ನು ಸಾಗ ಹಾಕಿದ್ದಾರೆ.
ಬಳಿಕ ಧನಂಜಯ ಅವರು ಆಸ್ಪತ್ರೆ ಆಡಳಿತ ವರ್ಗದ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ ಬೆನ್ನಲ್ಲೇ ಮೇ೨೧ರಂದು ಪಾಂಡವಪುರ ಆರೋಗ್ಯಾಧಿಕಾರಿಗಳ ಕಚೇರಿ ಹಾಗೂ ಧನಂಜಯ ಅವರ ಮೊಬೈಲ್ ನಂಬರ್‌ಗೆ ಕರೋನಾ ಪಾಸಿಟಿವ್ ವರದಿಯ ಸಂದೇಶ ರವಾನಿಸಿದ್ದಾರೆ.
ಆದರೆ ಇಲ್ಲೊಂದು ಕೌತುಕದ ವಿಚಾರವೆಂದರೆ ಧನಂಜಯ ಅವರು ಕೋವಿಡ್ ಚಿಕಿತ್ಸೆ ಪಡೆದು ಸಂಪೂರ್ಣ ಗುಣಮುಖರಾಗಿ ಮನೆಗೆ ಬಂದ ನಂತರ ಮತ್ತೆ ಯಾವುದೇ ಕೋವಿಡ್ ಪರೀಕ್ಷೆ ಮಾಡಿಸದಿದ್ದರೂ ನಿಮಗೆ ಕರೋನಾ ಪಾಸಿಟಿವ್ ಇದೆ ಎಂದು ಬಿಂಬಿಸುವ ರೀತಿ ಮೊಬೈಲ್ ಸಂದೇಶ ಕಳುಹಿಸಿ ಆಸ್ಪತ್ರೆ ಆಡಳಿತ ವರ್ಗ ದಂಧೆ ಮಾಡಲು ಮುಂದಾಗಿರುವ ಅಂಶವನ್ನುಧನಂಜಯ ಅವರು ಬಯಲಿಗೆಳೆದಿದ್ದಾರೆ.
ಗ್ರಾಹಕರ ವೇದಿಕೆಗೆ ದೂರುಕೋವಿಡ್ ಪರೀಕ್ಷೆ ಮಾಡಿಸದಿದ್ದರೂ ಪಾಂಡವಪುರ ಉಪಭಾಗಾಽಕಾರಿಗಳು ಹಾಗೂ ತಾಲೂಕು ಆರೋಗ್ಯಾಧಿಕಾರಿಗಳಿಗೆನಾರಾಯಣ ಹೃದ್ರೋಗಾಲಯ ಆಸ್ಪತ್ರೆಯಿಂದ ಕರೋನಾ ಪಾಸಿಟಿವ್ ಬಂದಿರುವ ಸಂದೇಶ ಕಳುಹಿಸಲಾಗಿದೆ. ಬಳಿಕ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಮೊಬೈಲಿಗೆ ಕರೆ ಮಾಡಿ ಸರ್, ನಿಮಗೆ ಪಾಸಿಟಿವ್ ಇದೆ ಎನ್ನುತ್ತಿದ್ದಾರೆ. ಹೀಗಾಗಿ ತಾವು ಆಸ್ಪತ್ರೆ ವಿರುದ್ಧ ಗ್ರಾಹಕರ ವೇದಿಕೆಗೆ ದೂರು ನೀಡುತೇನೆ ಎಂದು ಧನಂಜಯ ತಿಳಿಸಿದ್ದಾರೆ.