ರಶ್ಮಿಕಾ ಭೇಟಿಗೆ ಬಂದು ಮಾವನ ಮನೆಗೆ ಹೋದ ಅಭಿಮಾನಿ
ಲಾಕ್‌ಡೌನ್‌ನಲ್ಲೂ ರಾಜ್ಯದ ಗಡಿ ದಾಟಿ ಬಂದು ರಂಪಾಟ
ವಿಶೇಷ ವರದಿ:ಉಷಾ ವಿರಾಜಪೇಟೆ
*ರಶ್ಮಿಕಾ ಭೇಟಿಗಾಗಿ ರೈಲು, ಆಟೋ ಏರಿ ಬಂದ ಅಭಿಮಾನಿ*ರಾತ್ರಿ ಹೊತ್ತಲ್ಲೂ ಭೇಟಿಗಾಗಿ ರಂಪಾಟ*ಸಾರ್ವಜನಿಕರಿಂದ ಪೊಲೀಸರಿಗೆ ದೂರು*ಹುಚ್ಚಭಿಮಾನಕ್ಕೆ ದಂಗಾದ ವಿರಾಜಪೇಟೆ ಜನರು
ಲಾಕ್‌ಡೌನ್‌ನಲ್ಲಿ ಅಂತಾರಾಜ್ಯ ಸಂಚಾರಕ್ಕೆ ನಿಷೇಧವಿದ್ದರೂ ಇಲ್ಲೊಬ್ಬ ಅಭಿಮಾನಿ ತನ್ನ ನೆಚ್ಚಿನ ನಟಿಯ ಭೇಟಿಗಾಗಿ ರೈಲು,ಆಟೋ ಏರಿ ರಾಜ್ಯದಿಂದ ರಾಜ್ಯಕ್ಕೆ ಪ್ರಯಾಣಿಸಿ, ಕೊಡಗಿಗೆ ಬಂದು ಪೊಲೀಸರ ಅತಿಥಿಯಾಗಿದ್ದಾನೆ.
ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಈಗ ಬಹುಭಾಷೆ ತಾರೆಯಾಗಿದ್ದಾಳೆ. ಅದರಲ್ಲೂ ಗೀತ ಗೋವಿಂದಂ ತೆಲುಗು ಸಿನಿಮಾ ಮೂಲಕ ಪಕ್ಕದ ರಾಜ್ಯದಲ್ಲೂ ಅಪಾರ ಅಭಿಮಾನಿ ಬಳಗವನ್ನು ಗಳಿಸಿದ್ದಾರೆ. ಆ ಅಭಿಮಾನಿಗಳ ಪೈಕಿ ಒಬ್ಬ ಅಭಿಮಾನಿ ರಶ್ಮಿಕಾ ಭೇಟಿಗಾಗಿ ಲಾಕ್‌ಡೌನ್‌ನಲ್ಲೂ ತೆಲಂಗಾಣದಿಂದ ವಿರಾಜಪೇಟೆಗೆ ಶನಿವಾರ ರಾತ್ರಿ ಬಂದಿಳಿದ್ದಾನೆ.
ಮೈಸೂರಿನವರೆಗೂ ರೈಲಿನಲ್ಲಿ ಬಂದು ಬಳಿಕ ಗೂಡ್ಸ್ ಆಟೋದಲ್ಲಿ ವಿರಾಜಪೇಟೆ ತಲುಪಿದ್ದಾನೆ. ಅಲ್ಲಿಂದ ಗೂಗಲ್ ಮ್ಯಾಪ್ ಹಾಕಿಕೊಂಡು ಮಗ್ಗುಲ ಗ್ರಾಮದಲ್ಲಿ ಮಂದಣ್ಣ ಎನ್ನುವವರಿಗೆ ಸೇರಿದ ಜಾಗಕ್ಕೆ ಬಂದಿದ್ದಾನೆ. ಇಲ್ಲಿಯೇ ರಶ್ಮಿಕಾ ಮಂದಣ್ಣ ಮನೆ ಇರಬೇಕು ಅಂದುಕೊಂಡು ಗ್ರಾಮದ ಜನರನ್ನು ರಶ್ಮಿಕಾ ಮಂದಣ್ಣ ಮನೆಯೆಲ್ಲಿ? ನಾನು ಈಗಲೇ ಅವರನ್ನು ಭೇಟಿಯಾಗಬೇಕು ಎಂದು ರಂಪಾಟ ನಡೆಸಿದ್ದಾನೆ.
ಇಂಗ್ಲಿಷ್‌ನಲ್ಲಿ ಮಾತನಾಡುತ್ತಾ ರಾತ್ರಿ ಹೊತ್ತಿನಲ್ಲಿ ರಶ್ಮಿಕಾ ಮಂದಣ್ಣನನ್ನು ಭೇಟಿಯಾಗಲೇಬೇಕು ಎಂದು ಹಠ ಹಿಡಿದಿದ್ದರಿಂದ ಸಾರ್ವಜನಿಕರು ಗಾಬರಿಯಾಗಿ ಪೊಲೀಸ್ ಸಹಾಯವಾಣಿಗೆ ಕರೆಮಾಡಿ ತಿಳಿಸಿದಾಗ ಪೊಲೀಸರು ಈತನನ್ನು ವಶಕ್ಕೆ ಪಡೆದು ವಿಚಾರಿಸಿದ್ದಾರೆ. ಆತನ ಡ್ರೈವಿಂಗ್ ಲೈಸೆನ್ಸ್, ಆಧಾರ್ ಕಾರ್ಡ್‌ನಲ್ಲಿ ತೆಲಂಗಾಣದ ವಿಳಾಸವಿದ್ದು, ಆತನ ಹೆಸರು ಆಕಾಶ್ ತ್ರಿಪಾಠಿಎಂದು ತಿಳಿದುಬಂದಿದೆ. ರಶ್ಮಿಕಾ ಅಭಿಮಾನಿಯ ಅಭಿಮಾನಕ್ಕೆ ಸ್ಥಳೀಯರು ದಂಗಾಗಿದ್ದಾರೆ.
