ಕೃಷ್ಣ, ಸಿದ್ದು ಮಾತ್ರವೇ ರಾಜ್ಯಕ್ಕೆ ಉತ್ತಮ ಬಜೆಟ್‌ ಕೊಟ್ಟವರು
ವಿಶ್ವವಾಣಿ ಕ್ಲಬ್‌ ಹೌಸ್‌ ಸಂವಾದ 34
ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಮೋಹನ್ ದಾಸ್ ಪೈ ಆರ್ಥಿಕ ಚೇತರಿಕೆಗೆ ಸಲಹೆ
ಬೆಂಗಳೂರು: ರಾಜ್ಯದ ಅಭಿವೃದ್ಧಿಯನ್ನು ದೂರದೃಷ್ಟಿಯಲ್ಲಿಟ್ಟುಕೊಂಡು ಬಜೆಟ್ ಮಂಡಿಸಿದವರಲ್ಲಿ, ಒಬ್ಬರು ಎಸ್.ಎಂ.ಕೃಷ್ಣ, ಮತ್ತೊಬ್ಬರು ಸಿದ್ದರಾಮಯ್ಯ ಅವರುಮಾತ್ರ ಎಂದು ಪದ್ಮಶ್ರೀ ಡಾ.ಮೋಹನ್ ದಾಸ್ ಪೈ ಅಭಿಪ್ರಾಯಪಟ್ಟರು.
ರಾಜ್ಯದ ವಿಷನ್ ಕುರಿತು ವಿಶ್ವವಾಣಿ ಕ್ಲಬ್‌ಹೌಸ್ ಸಂವಾದದಲ್ಲಿ ಭಾಗವಹಿಸಿದ ಅವರು, ಯಾವುದೇ ದೇಶ, ರಾಜ್ಯದ ಆರ್ಥಿಕ ಪ್ರಗತಿಗೆ ದಿಟ್ಟ ದೂರ ದೃಷ್ಟಿ ಅಗತ್ಯ. ಕರ್ನಾಟಕವು 2030 ರೊಳಗೆ 1 ಟ್ರಿಲಿಯನ್ ಡಾಲರ್ ಆರ್ಥಿಕತೆ ಯಾಗಲು ರಾಜ್ಯ ಸರಕಾರ ಸಂಕಲ್ಪ ಮಾಡಲಿ. ಕರ್ನಾಟಕ ಸದ್ಯಕ್ಕೆ 243 ಶತಕೋಟಿ ಡಾಲರ್ ಆರ್ಥಿಕತೆಯಾಗಿದೆ. ಭಾರತದ ಸರಾಸರಿ ಜಿಡಿಪಿಗಿಂತಲೂ ವೇಗವಾಗಿ ರಾಜ್ಯ ಬೆಳೆಯಬೇಕು. ವಾರ್ಷಿಕ ಶೇ.17ರ ಜಿಎಸ್‌ಡಿಪಿ ಪ್ರಗತಿ ದಾಖಲಿಸಬೇಕು. ಕರ್ನಾಟಕವು ಭಾರತದ ಟಾಪ್ 3 ರಾಜ್ಯಗಳಲ್ಲಿ ಒಂದಾಗಿದೆ.
ಮುಂದಿನ ವರ್ಷಗಳಲ್ಲಿ ಭಾರತದ ರಾಷ್ಟ್ರೀಯ ಬೆಳವಣಿಗೆಗಿಂತಲೂ ವೇಗವಾಗಿ ಬೆಳೆಯಬೇಕು. ಇದಕ್ಕೆ ರಚನಾತ್ಮಕ, ತಂತ್ರಜ್ಞಾನ ಆಧಾರಿತ ನೀತಿ ಬೇಕು ಎಂದು ಹೇಳಿದರು. ಆರ್ಥಿಕ ಸ್ಥಿತಿ ಚೇತರಿಕೆ ಇಲ್ಲ ಅಂದರೆ ಅಭಿವೃದ್ದಿ ಅಸಾಧ್ಯ. ನಾವೆಲ್ಲರೂ ಕನ್ನಡಿಗರು. ನಮ್ಮ ರಾಜ್ಯ ಮುಂದೆ ಬರಬೇಕು. ಆರ್ಥಿಕ ಸ್ಥಿತಿಗಳು ಸರಿ ದೂಗಿಸಬೇಕು. 2030ರೊಳಗೆ ಅಮೆರಿಕ, ಯೂರೋಪ್ ಜಿಡಿಪಿಯಲ್ಲಿ ಏಷ್ಯಾವನ್ನೇ ಮೀರಿಸಲು ಸಾಧ್ಯವಿದೆ. ಭಾರತವು 10 ಟ್ರಿಲಿಯನ್ ಡಾಲರ್ ಆರ್ಥಿಕ ಪ್ರಗತಿ ಹೊಂದಿದರೆ ವಿಶ್ವಕ್ಕೆ ಮಾದರಿಯಾಗಬಹುದು. ಹಾಗಾಗಿ ರಾಜ್ಯಗಳು ಮುಂದೆ ಬರಬೇಕು. ಆಗ ಭಾರತ ಮುಂದೆ ಬರುತ್ತದೆ. ನಮ್ಮ ರಾಜ್ಯದಲ್ಲಿ ಹೂಡಿಕೆ ಮತ್ತು ಆರ್ಥಿಕ ಪ್ರಗತಿ ಕುರಿತು ಚರ್ಚೆ ಮಾಡಬೇಕು ಎಂದರು.
ಕರ್ನಾಟಕದಲ್ಲಿ ಆಳುವ ಸರಕಾರಗಳಿಗೆ ಆರ್ಥಿಕ ದೂರದೃಷ್ಟಿ ಇರಬೇಕು. ರಾಜಕಾರಣಗಳು ರಾಜಕೀಯದ ಬಗ್ಗೆ ಮಾತ್ರ ಮಾತನಾಡುತ್ತಾರೆ. ಆರ್ಥಿಕ ಸ್ಥಿತಿ ಬಗ್ಗೆ ಮಾತನಾಡಲ್ಲ. ಹಲವು ಶತಮಾನಗಳ ಹಿಂದೆ ಭಾರತ, ಚೀನಾ ಆರ್ಥಿಕ ಸುಧಾರಣೆಯಾಗಿತ್ತು. ಬ್ರಿಟಿಷರು ಸಾಕಷ್ಟು ಹಣ ಲೂಟಿ ಮಾಡಿದ್ದಾರೆ. ನಾವೇನುಬಡವರಲ್ಲ. ಭಾರತ ಬಡ ದೇಶವಲ್ಲ. ನೆಹರು ಅವರ ಆಡಳಿತದಲ್ಲಿ ಆರ್ಥಿಕ ಸ್ಥಿತಿ ತೀರಾ ಹದಗೆಟ್ಟಿತ್ತು. ಚೀನಾ ಯುದ್ಧದಿಂದ ಆರ್ಥಿಕ ಸ್ಥಿತಿ ಸರಿ ಇರಲಿಲ್ಲ. ಯಾವ ದೇಶದಲ್ಲಿ ಸರಕಾರ ವ್ಯಾಪಾರಿ ಆಗುತ್ತದೋ ಆ ದೇಶದ ಜನ ಭಿಕಾರಿ ಆಗುತ್ತದೆ ಎಂದು ಗಾಂಧೀಜಿ ಹೇಳಿದ್ದಾರೆ. ಜನರಿಗೆ ಆರ್ಥಿಕ ನ್ಯಾಯ ಕೊಡಬೇಕು.
ಕರ್ನಾಟಕ ದಲ್ಲಿ ಒಂದು ವಿಷನ್ ಬೇಕು. ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಬೇಕು. ನಮ್ಮಲ್ಲಿ ಶಿಕ್ಷಣ ಪ್ರಗತಿ ಕಡಿಮೆ ಇದೆ. ಶಿಕ್ಷಣ ಕ್ಷೇತ್ರದ ಮೇಲೆ ಹೆಚ್ಚು ಹೂಡಿಕೆ ಮಾಡಬೇಕು ಎಂದರು. ಕರೋನಾದಿಂದ ಡಿಜಿಟಲ್ ವ್ಯವಸ್ಥೆಗೆ ಬಲ: ಲಾಕ್‌ಡೌನ್‌ನಿಂದ ಡಿಜಿಟಲ್ ವ್ಯವಸ್ಥೆಗೆ ಹೆಚ್ಚು ಒತ್ತು ನೀಡಲಾಗಿದೆ. ಭಾರತದಲ್ಲಿಡಿಜಿಟಲ್ ರೆವ್ಯೂಲೂಷನ್ ಆಗಿದೆ. ರೊಬೊಟೆಕಲ್ ಆಟೋಮೆಟೆಡ್ ಮುಂತಾದ ಆದ್ಯತಾ ಕ್ಷೇತ್ರಗಳು ಅಭಿವೃದ್ಧಿ ಹೊಂದಬೇಕಿದೆ.
ಕರ್ನಾಟಕದಲ್ಲಿ ಐದು ವರ್ಷಗಳ ಹಿಂದೆ ಎಲೆಕ್ಟ್ರಿಕ್ ವೈಹಿಕಲ್ ಪಾಲಿಸಿ ತರಲಾಯಿತು. ಓಲಾ ಮತ್ತು ಏಸರ್ ಕಂಪನಿಗಳು ತಮಿಳುನಾಡಿಗೆ ಹೋಗಿ ಈ ಪಾಲಿಸಿ ಜಾರಿಗೊಳಿಸಿದವು. ನಮ್ಮಲ್ಲಿನ ಹೈಟೆಕ್ ಇಂಡಸ್ಟ್ರಿ ಹೊರ ರಾಜ್ಯಗಳಿಗೆ ಹೋಗುತ್ತಿವೆ. ಈ ಕುರಿತು ಕರ್ನಾಟಕ ಸರಕಾರ ಗಂಭೀರವಾಗಿ ಪರಿಗಣಿಸಬೇಕುಎಂದು ತಿಳಿಸಿದರು. ಸೇವಾ ಉದ್ಯಮದಲ್ಲಿರುವವರ ಸಂಖ್ಯೆ ಹಾಗೂ ಕೃಷಿ ಯಲ್ಲಿರುವವರ ಸಂಖ್ಯೆಯ ನಡುವಿನ ಅಂತರ ಹೆಚ್ಚುತ್ತಿದೆ. ಇದೇ ವೇಳೆ ಕಂಪನಿಗಳು ಕೃತಕ ಬುದ್ಧಿಮತ್ತೆಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಆಟೊಮೆಷನ್‌ಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿವೆ. ಮುಂದಿನ ದಿನಗಳಲ್ಲಿ ನಿಯಮಾಧಾರಿತ ಕೆಲಸ ಗಳನ್ನು ಆಲ್ಗರಿದಂ ಗಳು ಮಾಡುವ ಸಾಧ್ಯತೆ ಹೆಚ್ಚಿದ್ದು, ಮಧ್ಯಮವರ್ಗದವರು ಹೆಚ್ಚಿರುವ ನಿಯಮ ಆಧಾರಿತ ಕೆಲಸಗಳು ಅಸ್ತಿತವನ್ನೇ ಕಳೆದುಕೊಳ್ಳಲಿವೆ. ಯಂತ್ರಗಳು ಇನ್ನೂ ಸೃಜನಶಿಲವಾಗಿಲ್ಲ, ಸೃಜನಶೀಲ ವ್ಯಕ್ತಿಗಳು ಮಾತ್ರ ಉಳಿದುಕೊಳ್ಳಲಿದ್ದಾರೆ ಎಂದರು.
ಬೆಂಗಳೂರಿನಲ್ಲಿ ಉದ್ಯೋಗ ಸೃಷ್ಟಿ ಹೇಗೆ?:ಕರೋನಾದಿಂದಾಗಿ ಎಲ್ಲ ಉದ್ಯಮಕ್ಕೂ ಹೊಡೆತ ಬಿದ್ದಿದೆ. ಇದರಿಂದಾಗಿ ಲಕ್ಷಾಂತರ ಜನ ಉದ್ಯೋಗ ಕಳೆದು ಕೊಂಡಿದ್ದಾರೆ. ಆದರೆ ಐಟಿ ಉದ್ಯಮದ ಬೆಳವಣಿಗೆ ಇದಕ್ಕೆ ವಿರುದ್ಧವಾಗಿದೆ. 2022ರ ವೇಳೆಗೆ 3 ಲಕ್ಷ ಜನರಿಗೆ ಉದ್ಯೋಗ ಸಿಗಲಿದೆ. ಅದರಲ್ಲೂ ಬೆಂಗಳೂರು ನಗರ ಒಂದರ 2 ಲಕ್ಷ ಜನರಿಗೆ ಉದ್ಯೋಗ ದೊರೆಯಲಿದೆ ಎಂದು ಮಾಹಿತಿ ನೀಡಿದರು. ಬೆಂಗಳೂರು ದಿನೇ ದಿನೆ ತನ್ನ ವ್ಯಾಪ್ತಿ ಹೆಚ್ಚಿಸುತ್ತಲೇ ಇದೆ. ಆದರೆ ಐಟಿ ಉದ್ಯಮಕ್ಕೆ ಬೇಕಾದ ಮೂಲ ಸೌಕರ್ಯ ಒದಗಿಸುವುದರಲ್ಲಿ ರಾಜ್ಯ ಸರಕಾರ ಎಡವುತ್ತಿದೆ.
ಹೀಗಾಗಿ ಕಳೆದ ಕೆಲ ವರ್ಷಗಳಲ್ಲಿ ಬೆಂಗಳೂರಿಗೆ ಬರಬೇಕಿದ್ದ ಪ್ರತಿಷ್ಠಿತ ಕಂಪನಿಗಳು ಹೈದರಾಬಾದ್ ಪಾಲಾದವು. ಉದ್ಯಮಕ್ಕೆ ಸಂಬಂಧಿಸದಂತೆ ಉತ್ತರ ಕರ್ನಾಟಕ ಭಾಗದ ಜನರಿಗೆ ಅರಿವು ತುಂಬಾ ಕಡಿಮೆ. ಹೀಗಾಗಿ ಸರಕಾರ ಆ ಭಾಗದ ವಿದ್ಯಾರ್ಥಿ ಗಳಿಗಾಗಿ ತರಬೇತಿ ಕೇಂದ್ರಗಳನ್ನು ತೆರೆದು, ಕೋಡಿಂಗ್, ಡೆಟಾ ಅನಾಲಿಸಿಸ್ ಹಾಗೂ ಆರ್ಟಿಫಿ ಷಿಯಲ್ ಇಂಟಲಿಜೆ ಬಗ್ಗೆ ಮಾಹಿತಿ ನೀಡಬೇಕು ಎಂದರು.
ಬೆಂಗಳೂರಿನ ಅಭಿವೃದ್ಧಿ ಹೇಗೆ:ರಾಜ್ಯದ ಆರ್ಥಿಕತೆಯಲ್ಲಿ ಶೇ.60ರಷ್ಟು ಕೊಡುಗೆಯನ್ನು ಬೆಂಗಳೂರು ಒಂದೇ ನೀಡುತ್ತಿದೆ. ಭಾರತದಲ್ಲಿ ಹೆಚ್ಚು ತೆರಿಗೆ ಆದಾಯ ನೀಡುವ ಮೂರನೇ ನಗರ ಬೆಂಗಳೂರು. ಆದ್ದರಿಂದ ಬೆಂಗಳೂರಿನ ಅಭಿವೃದ್ಧಿಯನ್ನು ಕಡೆಗಣಿಸಿದರೆ, ರಾಜ್ಯಕ್ಕೆ, ದೇಶಕ್ಕೂ ಹಿತವಲ್ಲ. ಜಾಗತಿಕ ಹೆಟೆಕ್ ಸಿಟಿಯಾಗಿ ಬೆಂಗಳೂರಿನ ಅಭಿವೃದ್ಧಿಗೆ, ಮೂಲಸೌಕರ್ಯಕ್ಕೆ ಹೂಡಿಕೆ ಮಾಡಬೇಕು. ಬೆಂಗಳೂರಿನ ಮಾಹಿತಿ ತಂತ್ರಜ್ಞಾನ ಮತ್ತು ಸ್ಟಾರ್ಟ್ ಅಪ್ ವಲಯಕ್ಕೂ ಒಂದು ನೀತಿ ಇರಬೇಕು ಎಂದರು.
ಕಾರ್ಮಿಕ ಕೇಂದ್ರಿತ ಉದ್ದಿಮೆಗಳ ಸ್ಥಾಪನೆ:ಉತ್ತರ ಕರ್ನಾಟಕದಲ್ಲಿ ಕಾರ್ಮಿಕ ಕೇಂದ್ರಿತ ಉದ್ದಿಮೆಗಳ ಸ್ಥಾಪನೆ ಅಗತ್ಯ. ರಾಜ್ಯದಲ್ಲಿ 70 ಸಾವಿರಕ್ಕೂ ಹೆಚ್ಚು ಸಣ್ಣ ಮತ್ತು ಮಧ್ಯಮ ಉದ್ದಿಮೆ ಗಳಿದ್ದು, ಕರೋನಾ ಬಿಕ್ಕಟ್ಟಿನ ನಂತರ ಹಲವು ರಾಷ್ಟ್ರಗಳು ಚೀನಾ ದಿಂದ ಹೂಡಿಕೆ ಹಿಂತೆಗೆಯಲು, ಇತರ ಆಯ್ಕೆ ಗಮನಿಸುತ್ತಿವೆ.ಕರ್ನಾಟಕ ಈ ಅವಕಾಶ ಬಳಸಿಕೊಳ್ಳಬೇಕು. ಇನ್ವೆ ಕರ್ನಾಟಕವನ್ನು ಸಕ್ರಿಯಗೊಳಿಸಬೇಕು. ಮಂಗಳೂರು, ಕಾರವಾರ ಬಂದರುಗಳನ್ನು ಅಭಿವೃದ್ಧಿಪಡಿಸಬೇಕು ಎಂದು ಅಭಿಪ್ರಾಯಪಟ್ಟರು.
ಬೀದರ್‌ನಿಂದ ಬೆಂಗಳೂರಿಗೆ ಎಕ್ಸ್‌ಪ್ರೆಸ್ ವೇ ನಿರ್ಮಿಸಿ:ಚೀನಾವು ಮೂಲಸೌಕರ್ಯಗಳಿಗೆ ಭಾರಿ ಹೂಡಿಕೆ ಮೂಲಕ ಅಭಿವೃದ್ಧಿ ಸಾಧಿಸಿದಂತೆ ಕರ್ನಾಟಕ ಅನುಸರಿಸಬೇಕು. ಬೀದರ್ ನಿಂದ ಬೆಂಗಳೂರಿಗೆ ೮ ಲೇನ್‌ಗಳ ಸುವರ್ಣ ಕರ್ನಾಟಕ ಎಕ್ಸ್ ಪ್ರೆಸ್ ವೇ ರಸ್ತೆ ನಿರ್ಮಿಸಬೇಕು. ಇದು ಮಂಗಳೂರು ಮತ್ತುಕಾರವಾರ ಬಂದರಿಗೆ ಸಂಪರ್ಕ ಹೊಂದಿರಬೇಕು. ಬಂದರು, ವಿಮಾನ ನಿಲ್ದಾಣ, ಗ್ರಾಮೀಣ ರಸ್ತೆ, ಕಡಿಮೆ ದರದ ಮನೆ, ರೈಲ್ವೆ, ಮೆಟ್ರೊ, ಸಾಗರ ತೀರದ ಪ್ರವಾಸೋದ್ಯಮ ಅಭಿವೃದ್ಧಿಪಡಿಸಬೇಕು.
? ರೈತರ ಬೆಳೆಗಳಿಗೆ ರಾಜ್ಯದಲ್ಲಿ ಮಾರ್ಕೆಟ್ ವ್ಯಾಲ್ಯೂ ಸಿಗಬೇಕು? ಉತ್ತರ ಕರ್ನಾಟಕ ಇನ್ನೂ ಅಭಿವೃದ್ಧಿ ಕಂಡಿಲ್ಲ? ಬೆಂಗಳೂರು-ಬೀದರ್ ನಡುವೆ ಸುವರ್ಣ ಕರ್ನಾಟಕ ಅಷ್ಟಪಥ ರಸ್ತೆನಿರ್ಮಾಣವಾಗಲಿ? ಸರಕಾರ ನೀಡುವ ಸಬ್ಸಿಡಿ ಬಡವರನ್ನು ತಲುಪಬೇಕು, ಬೇರೆಯವರನ್ನಲ್ಲ? ದೇಶ ಮತ್ತು ರಾಜ್ಯದಲ್ಲಿ ಹೆಚ್ಚು ಜನ ಕೃಷಿಯಲ್ಲೇ ತೊಡಗಿದ್ದೇ ನಾವುಆರ್ಥಿಕವಾಗಿ ಹಿಂದೆ ಬೀಳಲು ಕಾರಣ? ಡಿಮಾನಿಟೈಸೇಷನ್‌ನಿಂದ ದೇಶ ಉದ್ಧಾರವಾಗಿದೆ.
***
೭೦ ವರ್ಷಗಳಿಂದ ಆರೋಗ್ಯ ವಲಯದ ಮೇಲೆ ಹೂಡಿಕೆ ಇಲ್ಲ. ಕೃಷಿ ಕ್ಷೇತ್ರ ಬೆಳವಣಿಗೆಗೆ ಅಗ್ರಿಟೆಕ್ ಕಂಪನಿಗಳ ಮೂಲಕ ವ್ಯವಹಾರ ಹೆಚ್ಚು ಮಾಡಬೇಕು. ಭಾರತಕ್ಕೆ ಐದು ಸಾವಿರ ಕೋಟಿ ಹೂಡಿಕೆ ಮಾಡಿ ಒಂದು ಯೋಜನೆ ರೂಪಿಸಬೇಕು.-ಟಿ.ವಿ.ಮೋಹನ್ ದಾಸ್ ಪೈ, ಮಣಿಪಾಲ್ ಗ್ಲೋಬಲ್ ಎಜುಕೇಷನ್, ಸಂಸ್ಥೆಯ ಅಧ್ಯಕ್ಷ