ಮೂಲ ವೃತ್ತಿಯಲ್ಲೆ ಶ್ರೇಷ್ಠತೆ ಕಾಣುತ್ತಾ ಕೋಟ್ಯಧಿಪತಿಯಾದ ರಮೇಶ್ ಬಾಬು
ವಿಶ್ವವಾಣಿ ಕ್ಲಬ್‌ ಹೌಸ್‌ ಸಂವಾದ – 39
ಬೆಂಗಳೂರು:ವೃತ್ತಿಯಲ್ಲಿ ಸೋಲು-ಗೆಲುವು ಸಾಮಾನ್ಯ. ತಮ್ಮ ವೃತ್ತಿಯ ಶ್ರೇಷ್ಠತೆ ಕಾಣುವ ಮನೋಧರ್ಮ ಬೆಳೆಯಬೇಕು. ಜತೆಗೆ ಯಾವತ್ತೂ ಬೇರೆಯವರನ್ನುನೋಡಿ ನಾವು ಆ ರೀತಿಯಾಗಿ ಇರಬೇಕಿತ್ತು ಎಂದು ಕನಸು ಕಾಣುವುದುಕ್ಕಿಂತ, ಇದ್ದ ಕಾಯಕವನ್ನೇ ನಿಷ್ಠೆಯಿಂದ ಮಾಡಿದರೆ ಯಶಸ್ಸು ನಮ್ಮ ಹಿಂದೆಯೇಎನ್ನುವುದನ್ನು ಎಂದಿಗೂ ಅಲ್ಲಗಳೆಯುವಂತಿಲ್ಲ. ಅದಕ್ಕೆ ಬೆಂಗಳೂರಿನ ರಮೇಶ್ ಬಾಬು ಅವರ ಜೀವನ ಶೈಲಿಯೇ ನಿದರ್ಶನ!
ವಿಶ್ವವಾಣಿ ಕ್ಲಬ್ ಹೌಸ್ ನಲ್ಲಿ ಜೀವನದ ಯಶೋಗಾಥೆಗಳನ್ನು ಎಳೆ ಎಳೆಯಾಗಿ ಶ್ರೋತೃಗಳ ಮುಂದಿಟ್ಟರು. ನಮ್ಮ ಸಮಾಜ ಕ್ಷೌರಿಕ ವೃತ್ತಿಯನ್ನು ಕಳಪೆ ಮಟ್ಟದ ವೃತ್ತಿಯಾಗಿ ಕಾಣುತ್ತದೆ. ಆದರೆ ಅದುವೇ ನಮಗೆ ಶ್ರೇಷ್ಠ ವೃತ್ತಿ ಎಂದು ನಂಬಿಕೊಂಡ ಬಂದ ರಮೇಶ್ ಬಾಬು ಬದುಕು ಇಂದು ಬಂಗಾರವಾಗಿದೆ. ಜತೆಗೆ ತಮ್ಮ ದುಡಿಮೆ ಯಲ್ಲಿ ನೂರಾರು ಜನರಿಗೆ ಉದ್ಯೋಗ ನೀಡಿದ ಅನ್ನದಾತ ಎನ್ನಿಸಿಕೊಂಡಿದ್ದಾರೆ.
ಕ್ಯಾಲಿಫೋರ್ನಿಯಾದ ಗವರ್ನರ್ ರಿಂದ ಪ್ರಶಂಸೆ ಪಡೆದು ಹಲವು ಗೌರವಗಳಿಗೆ ಪಾತ್ರರಾಗಿದ್ದು, ಬದುಕಿನ ನಾಳೆಗಳನ್ನು ಬಿಚ್ಚಿಟ್ಟಿದ್ದಾರೆ. ನಾನು ಬಡ ಕುಟುಂಬದಲ್ಲಿ ಜನಿಸಿದ್ದೆ. ತಂದೆ ಕ್ಷೌರಿಕ. ನಾನು೭ವರ್ಷ ಹುಡುಗ ನಾಗಿದ್ದಾಗಲೇ ಅವರು1979ರಲ್ಲಿ ಮರಣ ಹೊಂದಿದರು. ನಂತರ ನನ್ನ ತಾಯಿ ಮನೆ ಕೆಲಸವನ್ನು ಮಾಡಿ ನಮ್ಮ ಸಂಸಾರವನ್ನು ಸರಿದೂಗಿಸುತಿದ್ದರು. ನನ್ನ ತಂದೆ ಕ್ಷೌರದ ಅಂಗಡಿಯನ್ನು ಮಾತ್ರ ನಮ್ಮ ಜೀವನ ನಡೆಸುವುದಕ್ಕೆ ಬಿಟ್ಟು ಹೋಗಿದ್ದರು. ಅದನ್ನು ನನ್ನ ಚಿಕ್ಕಪ್ಪ ನಡೆಸಿಕೊಂಡು ಹೋಗುತ್ತಿದರು. ನಮಗೆ ದಿನಕ್ಕೆ ಕೇವಲ5ರು. ಗಳನ್ನು ಮಾತ್ರ ಕೊಡುತ್ತಿದ್ದರು.
ನನ್ನ ಸಹೋದರ, ಸಹೋದರಿ ವಿದ್ಯಾಭ್ಯಾಸ ಮತ್ತು ನನ್ನ ವಿದ್ಯಾಭ್ಯಾಸ ಹಾಗೂ ಅವರ ಪಾಲನೆ ಯಾವುದಕ್ಕೂ ಸಾಕಾಗುತ್ತಿರಲಿಲ್ಲ. ಅದಕ್ಕಾಗಿ ನಾವು ಕೇವಲ ಒಂದು ಹೊತ್ತು ಮಾತ್ರ ಊಟ ಮಾಡುತ್ತಿದ್ದೆವು. ನಮ್ಮ ಸಂಸಾರ ತೂಗಿಸುವುದಕ್ಕಾಗಿ ಹೈಸ್ಕೂಲ್‌ಗೆ ಹೋಗುವ ಹೊತ್ತಿಗೆ ಅಮ್ಮನ ಹೊರೆಯನ್ನು ಕಡಿಮೆ ಮಾಡಲು ಹಲವಾರು ಕೆಲಸಗಳನ್ನು ಮಾಡುತ್ತಿದ್ದೆ. ದಿನ ಬೆಳಗ್ಗೆ ದಿನ ಪತ್ರಿಕೆ, ಹಾಲು ಮಾರಾಟ ಮಾಡಿ ಅದರಿಂದ ಸ್ವಲ್ಪ ಹಣವನ್ನು ಸಂಪಾದಿಸಿ ಅಮ್ಮನಿಗೆ ಸಹಾಯ ಮಾಡುತ್ತಿದ್ದೆ. ಹೀಗೆ ಬಂದ ಹಣದಿಂದ ನನ್ನ೧೦ನೇ ತರಗತಿ ಮುಗಿಸಿ ಪಿಯುಸಿಗೆ ಸಂಜೆ ಕಾಲೇಜಿಗೆ ಸೇರಿಕೊಂಡೆ ಎಂದು ವಿವರಿಸಿದರು.
ಅಂಗಡಿ ಮುಚ್ಚಿ ಹೊರಟು ಹೋದರು:ನಾನು ಪಿಯುಸಿ ಓದುವ ಹೊತ್ತಿನಲ್ಲಿ ನನ್ನ ಅಮ್ಮನಿಗೂ ನನ್ನ ಚಿಕ್ಕಪ್ಪಗೂ ಸ್ವಲ್ಪ ಜಗಳ ಆಗಿ ನನ್ನ ಚಿಕ್ಕಪ್ಪ ಅಂಗಡಿ ಮುಚ್ಚಿಹೊರಟು ಹೋದರು. ಆವಾಗ ನಾನು ನನ್ನ ತಾಯಿಗೆ ನಾನೇ ಅಂಗಡಿ ನೋಡಿಕೊಳ್ಳುವದಾಗಿ ಹೇಳಿದೆ. ಆದರೆ ಅದು ಆಕೆಗೆ ಇಷ್ಟವಿರಲಿಲ್ಲ. ಆಕೆಗೆ ನಾನು ಓದಿನ ಕಡೆ ಗಮನ ಹರಿಸಬೇಕೆಂಬ ಆಸೆ ಇಟ್ಟಿದ್ದರು. ನನ್ನ ತಾಯಿಯ ಮನವೊಲಿಸುವ ಪ್ರಯತ್ನ ಆರಂಭಿಸಿದೆ. ಆಕೆಯನ್ನು ಒಪ್ಪಿಸಿ ನಾನು ಕ್ಷೌರಿಕ ಕೆಲಸವನ್ನು ಆರಂಭಿ ಸಿದೆ. ಬೆಳಗ್ಗೆ ಅಂಗಡಿಯಲ್ಲಿ ಕ್ಷೌರದ ಕೆಲಸ ಮಾಡುತ್ತಿದೆ. ಸಂಜೆ ಕಾಲೇಜಿಗೆ ಹೋಗುತ್ತಿದೆ. ರಾತ್ರಿ ಅಂಗಡಿಗೆ ಬಂದು ಮತ್ತೆ ರಾತ್ರಿ ಒಂದು ಗಂಟೆಯವರೆಗೂ ಕ್ಷೌರದ ಕೆಲಸ ಮಾಡುತ್ತಿದ್ದೆ. ಅಲ್ಲಿಂದ ನನನ್ನು ಎಲ್ಲರೂ ಕ್ಷೌರಿಕ ಎಂದು ಕರೆಯಲು ಪ್ರಾರಂಭಿಸಿದರು. ಇಲ್ಲಿಂದಲೇ ನನ್ನ ವ್ಯಾಪಾರದ ತಂತ್ರಗಳ ಕಲಿಕೆ  ಶುರು ವಾಯಿತು ಎಂದರು.
ಕಾರು ಕೊಳ್ಳಲು ನಿರ್ಧರಿಸಿದೆ:1993ರಲ್ಲಿ ನನ್ನ ಚಿಕ್ಕಪ್ಪ ಒಂದು ಕಾರು ಕೊಂಡು ಕೊಂಡರು. ಆವಾಗ ನನ್ನ ಮನಸ್ಸು ಜಾಗೃತಗೊಂಡಿತು. ನಾನು ಒಂದು ಕಾರು ಕೊಂಡು ಕೊಳ್ಳಬೇಕೆಂಬ ಆಸೆಯಾಯಿತು. ಅದು ನನ್ನ ಚಿಕ್ಕಪ್ಪನಿಗಿಂತ ಒಳ್ಳೆ ಕಾರು ಖರೀದಿಸಬೇಕೆಂಬ ಆಸೆ ಹುಟ್ಟಿತು. ಅದಕ್ಕಾಗಿ ನಾನು ಕ್ಷೌರಿಕ ಕೆಲಸದಿಂದಕೂಡಿಟ್ಟ ಸ್ವಲ್ಪ ಹಣ ಹಾಗೂ ಬ್ಯಾಂಕ್‌ನಿಂದ ಸ್ವಲ್ಪ ಸಾಲ ತೆಗೆದುಕೊಂಡು ಕಾರು ಕೊಳ್ಳಲು ನಿರ್ಧರಿಸಿದೆ. ಬ್ಯಾಂಕ್ ನಿಂದ ಸಾಲ ತೆಗೆದುಕೊಳ್ಳಲು ನನ್ನ ತಾತ ನನಗೆ ಸಹಾಯ ಮಾಡಿದರು.
ಅವರ ಆಸ್ತಿ ಪತ್ರ ಅಡವಿಟ್ಟು ನನಗೆ ಸಾಲ ಸಿಗುವಂತೆ ಮಾಡಿದರು. ಹೀಗೆ ನಾನು ಒಂದು ಮಾರುತಿ ಕಾರು ಖರೀದಿ ಮಾಡಿದೆ. ಆದರೆ ಸಾಲದ ಬಡ್ಡಿ ದರ 1600 ರು. ಗಳನ್ನು ಭರಿಸುವುದು ನನಗೆ ಕಷ್ಟವಾಯಿತು. ಆವಾಗ ನಂದಿನಿ ಅಕ್ಕ ನನಗೊಂದು ಸಲಹೆ ಕೊಟ್ಟರು. ನಂದಿನಿ ಅಕ್ಕ ನನ್ನ ತಾಯಿ ಕೆಲಸ ಮಾಡುತ್ತಿದ್ದ ಮನೆಯ ಒಡತಿ. ನೀನೇಕೆ ನಿನ್ನ ಕಾರನ್ನು ಬಾಡಿಗೆಗೆ ಬಿಡಬಾರದು ಎಂದು ಕೇಳಿದ್ದರು. ನಂದಿನಿ ಅಕ್ಕ ಹೇಳಿದ್ದು ಒಳ್ಳೆಯ ಉಪಾಯ ಅನ್ನಿಸಿತು. ನಾನು ನನ್ನ ಕಾರನ್ನು ಬಾಡಿಗೆಗೆ ಬಿಡಲು ನಿರ್ಧರಿಸಿದೆ. ನಂದಿನಿ ಅಕ್ಕ ನನಗೆ ವ್ಯಾಪಾರದ ಬಗ್ಗೆ ಹೇಳಿಕೊಟ್ಟ ಗುರು ಎಂದರೆ ತಪ್ಪಾಗಲಾರಾದು. ಅವರು ನನ್ನ ಜೀವನದಲ್ಲಿ ಪ್ರಮುಖ ವ್ಯಕ್ತಿ. ನಂದಿನಿ ಅಕ್ಕ ಅವರ ಮಗಳ ಮದುವೆಗೂ ನನ್ನನ್ನು ಕರೆದಿದ್ದರು ಹಾಗೂ ಎಲ್ಲ ಜನರಿಗೂ ನನ್ನನ್ನು ಪರಿಚಯ ಮಾಡಿಕೊಟ್ಟರು ಎಂದು ಮಾಹಿತಿ ನೀಡಿದರು.
ಯಶಸ್ವಿ ವ್ಯಾಪಾರದ ಆರಂಭ1994 ರಿಂದ ನಾನು ಕಾರು ಬಾಡಿಗೆ ವ್ಯಾಪಾರವನ್ನು ಗಂಭೀರವಾಗಿ ತೆಗೆದುಕೊಂಡೆ. ನಂದಿನಿ ಅಕ್ಕ ಕೆಲಸ ಮಾಡುತ್ತಿದ್ದ ಇಂಟೆಲ್ ಕಂಪನಿಯಿಂದ ನನ್ನ ಮೊದಲ ಕಾರು ಬಾಡಿಗೆ ವ್ಯಾಪಾರವನ್ನು ಆರಂಭಿಸಿದೆ. ಕಾರು ಬಾಡಿಗೆ ಬಿಡಲು ನಂದಿನಿ ಅಕ್ಕ ತುಂಬಾ ಸಹಾಯ ಮಾಡಿದರು. ಅಲ್ಲಿಂದ ನನ್ನ ಒಳ್ಳೆ ದಿನಗಳು ಆರಂಭ ವಾದವು. ಕಾರು ಬಾಡಿಗೆ ವ್ಯಾಪಾರ ವೇಗವಾಗಿ ಬೆಳೆಯಿತು. ಹೆಚ್ಚು ಗಳಿಕೆ ಆಯಿತು.
2004ರಲ್ಲಿ ನಾನು ಐದರಿಂದ ಆರು ಕಾರುಗಳನ್ನು ಬಾಡಿಗೆಗೆ ಬಿಟ್ಟಿದ್ದೆ. ಅಂದು ಬೆಂಗಳೂರಿನಲ್ಲಿ ಕಾರು ಬಾಡಿಗೆ ವ್ಯಾಪಾರದಲ್ಲಿ ತುಂಬಾ ಸ್ಪರ್ಧೆ ಇತ್ತು. ಕಾರುಬಾಡಿಗೆ ವ್ಯಾಪಾರವನ್ನು ಬೆಳೆಸಲು ಒಂದು ಯೋಚನೆ ಮಾಡಿದ್ದೆ. ಏನಾದರೂ ಹೊಸದಾಗಿ ಮಾಡಬೇಕು ಬೇರೆ ಯಾರು ಮಾಡಿರಬಾರದು ಎಂದು. ಅದಕ್ಕಾಗಿಐಷಾರಾಮಿ ಕಾರುಗಳು ಅಥವಾ ದೊಡ್ಡ ಕಾರುಗಳನ್ನು ಖರೀದಿ ಮಾಡಲು ಶುರು ಮಾಡಿದೆ ಎಂದು ತಿಳಿಸಿದರು.
ಐಷಾರಾಮಿ ಕಾರನ್ನು ಬಾಡಿಗೆ ಸೇವೆಗೆ ಬಿಟ್ಟ ಮೊದಲ ವ್ಯಕ್ತಿ ನಾನು ನನ್ನ ಮೊದಲ ಐಷಾರಾಮಿ ಕಾರನ್ನು2004ರಲ್ಲಿ ತೆಗೆದುಕೊಂಡೆ. ಎಲ್ಲರೂ ನನಗೆ ನಾನು ತಪ್ಪು ಮಾಡಿದೆ. ನನಗೂ ಸ್ವಲ್ಪ ಭಯ ಹಾಗೂ ಸಂಶಯ ಇತ್ತು. ಒಂದೊಂದು ಸಾರಿ ಕಾರು ಮಾರಿಬಿಡೋಣ ಅನ್ನಿಸಿತ್ತು. ಅವಾಗ ನಾನೆ ಮನಸ್ಸಿನಲ್ಲಿ ಧೈರ್ಯ ಮಾಡಿಕೊಂಡು ಕಷ್ಟ ಗಳನ್ನು ಎದುರಿಸಲು ಸಿದ್ಧನಾಗಿದ್ದೆ. ಅದೃಷ್ಟವಶಾತ್ ಅಂದು ಬೆಂಗಳೂರಿನಲ್ಲಿ ಬೇರೆ ಯಾವುದೇ ಕಾರು ಬಾಡಿಗೆ ವ್ಯಾಪಾರದ ಸೇವೆ ಐಷಾರಾಮಿ ಕಾರುಗಳನ್ನು ಹೊಂದಿರ ಲಿಲ್ಲ. ಇದು ನನಗೆ ವರದಾನವಾಯಿತು. ಬೆಂಗಳೂರಿನಲ್ಲಿ ಐಷಾರಾಮಿ ಕಾರನ್ನು ಬಾಡಿಗೆ ಸೇವೆಗೆ ಬಿಟ್ಟ ಮೊದಲ ವ್ಯಕ್ತಿ ನಾನೇ ಎಂದು ಕಾರು ಖರೀದಿ ಪ್ರಸಂಗ ವಿವರಿಸಿದರು.
ನಾನು 2011 ರಲ್ಲಿ ರೋಲ್ಸ್ ರಾಯ್ಸ್ ಕಾರು ಖರೀದಿಸಲು ನಿರ್ಧರಿಸಿದಾಗ ಎಲ್ಲರೂ ನನಗೆ ಎಚ್ಚರಿಸಿ ದರು. ಅಷ್ಟೊಂದು ಮೊತ್ತದ ಕಾರು ಏಕೆ ಕೊಂಡುಕೊಂಡೆ? ಏನಾದರೂವಿಫಲವಾದರೆ ಎಂದು ಹಲವು ಪ್ರಶ್ನೆಗಳನ್ನು ಕೇಳಿದ್ದರು. ಆದರೂ ನಾನು ಧೃತಿಗೆಡಲಿಲ್ಲ. 2004ರಲ್ಲಿ ಮೊದಲ ಐಷಾರಾಮಿ ಕಾರು ಕೊಂಡುಕೊಂಡಾ ಗಲೂ ಇಂತಹ ಸವಾಲುಗಳನ್ನು ಎದುರಿಸಿದ್ದೆ. ಮತ್ತೊಮ್ಮೆ ಏಕೆ ಎದುರಿಸಬಾರದು ಎಂದು ಗಟ್ಟಿ ಮನಸ್ಸು ಮಾಡಿ ಸುಮಾರು ನಾಲ್ಕು ಕೋಟಿ ವ್ಯಯ ಮಾಡಿ ರೋಲ್ಸ ರಾಯ್ಸ ಕಾರು ಕೊಂಡುಕೊಂಡೆ. ಅವಾಗಲೂ ಅದೃಷ್ಟ ನನ್ನ ಕೈ ಬಿಡಲಿಲ್ಲ . ಅದು ಕೂಡ ಲಾಭ ತಂದು ಕೊಟ್ಟಿತು. ಮೂರು ವರ್ಷಗಳಲ್ಲಿ ತುಂಬಾ ಜನಪ್ರಿಯವೂ ಆಯಿತು. ಶ್ರಮ ಹಾಗೂ ಅದೃಷ್ಟ ಇದ್ದರೆ ಏನು ಬೇಕಾದರೂಸಾಧಿಸಬಹುದು ಎಂದು ರಮೇಶ್ ಬಾಬು ತಿಳಿಸಿದರು.
***
ರಮೇಶ್ ಬಾಬು ಶತಕೋಟಿ ಕ್ಷೌರಿಕ. ಏಕಾಏಕಿ ಕೋಟ್ಯಧೀಶರಾದವಲ್ಲ. ಕುದುರೆ ರೇಸ್, ಜೂಜು ಆಟದಿಂದ ಶ್ರೀಮಂತರಾದವರಲ್ಲ. ಕಡು ಬಡತನದಲ್ಲಿ ಹುಟ್ಟಿ ದೊಡ್ಡ ಮಟ್ಟಕ್ಕೆ ಬೆಳೆದವರು. ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದ ರಮೇಶ್ ಬಾಬು ಬಳಿ ಇವತ್ತು160ಕ್ಕೂ ಹೆಚ್ಚು ಐಷಾರಾಮಿ ಕಾರುಗಳಿವೆ. ಬದುಕಿ ನಲ್ಲಿ ಅಸಾಧ್ಯ ಎನ್ನುವುದು ಯಾವುದೂ ಇಲ್ಲ. ಎಲ್ಲ ವೃತ್ತಿಗೂ ಕಾಯಕ ಗೌರವ ಸಿಗಬೇಕು.-ವಿಶ್ವೇಶ್ವರ ಭಟ್ ವಿಶ್ವವಾಣಿ ಪ್ರಧಾನ ಸಂಪಾದಕರು
***
ಮನುಷ್ಯನ ಸಾಧನೆಗೆ ಛಲ ಇರಬೇಕು. ಕಡು ಬಡತನದ ಕುಟುಂಬದಲ್ಲಿ ಹುಟ್ಟಿದ ರಮೇಶ್ ಬಾಬು ಅವರು ಯಶಸ್ಸಿನ ಹಾದಿ ರೋಚಕ. ಅವರ ಮಾತಿನಲ್ಲಿ ಅಹಂ ಇಲ್ಲ. ಶ್ರೀಮಂತಿಕೆ ಎಂಬ ಅಹಂ ಇಲ್ಲದೆ ತನ್ನ ಕಾಯಕ ಮುಂದುವರಿಸುತ್ತಿರುವುದು ಶ್ಲಾಘನೀಯ.– ಷಡಕ್ಷರಿ ಅಂಕಣಕಾರರು