ಕೊವೀಡ್ ಲಸಿಕಾ ಅಭಿಯಾನ : ಲಸಿಕೆ ಹಾಕಿಸಿಕೊಂಡ ಪುರಸಭೆ ಸದಸ್ಯರು
ಹರಪನಹಳ್ಳಿ:ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಪಟ್ಟಣದ ಪುರಸಭೆಯ ಆವರಣದಲ್ಲಿ ಕೊವೀಡ್ ಲಸಿಕಾ ಅಭಿಯಾನವನ್ನು ಹಮ್ಮಿಕೊಂಡಿದ್ದು ಸದಸ್ಯರಾದ ಡಿ.ಅಬ್ದುಲ್ ರಹಿಮಾನ್ ಸಾಬ್, ಜೋಗಿನರ ಭರತೇಶ್, ಉದ್ದಾರ ಗಣೇಶ್, ಚಿಕ್ಕೇರಿ ಹನುಮಕ್ಕ ಅವರು ಲಸಿಕೆ ಹಾಕಿಸಿಕೊಳ್ಳುವ ಮೂಲಕಸಾರ್ವಜನಿಕರಿಗೆ ಕಡ್ಡಾಯವಾಗಿ ಕೋವಿಡ್ ಲಸಿಕೆ ಹಾಕಿಸಿಕೊಳ್ಳುವಂತೆ ಮನವಿ ಮಾಡಿದರು.
ಈ ವೇಳೆ ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ್ ಮಾತನಾಡಿ ಕೊರೋನಾ ಮೂರನೇ ಅಲೆಯ ಬಗ್ಗೆ ನಿರ್ಲಕ್ಷ್ಯ ಬೇಡ. ಎಲ್ಲರೂ ಕಡ್ಡಾಯವಾಗಿ ಕೊವೀಡ್ ಎರಡು ಲಸಿಕೆಗಳನ್ನು ಹಾಕಿಸಿಕೊಳ್ಳಬೇಕು ಮತ್ತು ವೈಯಕ್ತಿಕ ಸ್ವಚ್ಛತೆ ಹೆಚ್ಚಿನ ಆದ್ಯತೆ ನೀಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಜೊತೆಗೆ ಮನೆಯಿಂದ ಹೊರಬರುವಾಗ ಮುಖಕ್ಕೆ ಮಾಸ್ಕ್ ಧರಿಸಿ ಸೋಂಕನ್ನು ತಡೆಗಟ್ಟಲು ಸಹಕರಿಸಬೇಕು ಎಂದು ಪಟ್ಟಣದ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಸದಸ್ಯ ಡಿ.ಅಬ್ದುಲ್ ರಹಿಮಾನ್ ಸಾಬ್ ಮಾತನಾಡಿ ಕೊವೀಡ್ ಸೋಂಕಿಗೆ ಭಯ ಪಡುವ ಅವಶ್ಯಕತೆ ಇಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಸೊಂಕು ತಡೆಗಟ್ಟಬೇಕು. ಇಲ್ಲ ಸಲ್ಲದ ಊಹಾ ಪೋಹಗಳಿಗೆ ಕಿವಿಗೊಡದೇ ೧೮ ವರ್ಷ ಮೇಲ್ಪಟ್ಟ ಎಲ್ಲರೂ ಕಡ್ಡಾಯವಾಗಿ ಒಂದು ಮತ್ತು ಎರಡನೇ ಲಸಿಕೆ ಹಾಕಿಸಿಕೊಳ್ಳಿ ಎಂದು ಪಟ್ಟಣದ ನಾಗರೀಕರಲ್ಲಿ ಮನವಿ ಮಾಡಿದರು.
ಈ ವೇಳೆ ಪುರಸಭೆ ಸದಸ್ಯ ಜಾಕೀರ್ ಹುಸೇನ್ ಸರ್ಖಾವಾಸ್, ಮುಖಂಡ ಚಿಕ್ಕೇರಿ ಬಸಪ್ಪ ಸೇರಿದಂತೆ ಪುರಸಭೆಯ ಹಿರಿಯ ಆರೋಗ್ಯ ನಿರೀಕ್ಷಕ ಬಿ.ಮಂಜು ನಾಥ್, ಸಿಬ್ಬಂದಿ ಜಬೀಲ್, ಆರೋಗ್ಯ ಇಲಾಖೆ ಸಿಬ್ಬಂದಿಗಳು ಇದ್ದರು.