ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಿಸಿ : ಪೋಷಕರಿಗೆ ಎಸಿ ಸಲಹೆ
ಹರಪನಹಳ್ಳಿ:ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಸರ್ಕಾರ ಅನೇಕ ಸೌಲಭ್ಯಗಳನ್ನು ನೀಡುತ್ತಿದ್ದು ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಿಸುವ ಮೂಲಕ ಗುಣಮಟ್ಟದ ಶಿಕ್ಷಣ ಪಡೆದುಕೊಳ್ಳಿ ಎಂದು ಉಪವಿಭಾಗಾಧಿಕಾರಿ ಹೆಚ್.ಜಿ.ಚಂದ್ರಶೇಖರಯ್ಯ ಸಲಹೆ ನೀಡಿದ್ದಾರೆ.
ಪಟ್ಟಣದ ಮೇಗಳಪೇಟೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಪ್ರಸಕ್ತ ಸಾಲಿನಲ್ಲಿ ೧ ನೇತರಗತಿಗೆ ನೂರಕ್ಕೂ ಹೆಚ್ಚು ವಿಧ್ಯಾರ್ಥಿಗಳು ದಾಖಲಾತಿ ಪಡೆದಿರುವ ಹಿನ್ನೆಲೆ ಬುಧವಾರ ಶಾಲಾ ವತಿಯಿಂದ ಹಮ್ಮಿ ಕೊಂಡಿದ್ದ ನೂರರ ಸಂಭ್ರಮ ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಇತ್ತೀಚಿನ ವರ್ಷಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಪ್ರಮಾಣ ಕಡಿಮೆಯಾಗಿತ್ತು, ಆದರೆ ಕೋವಿಡ್ ನಂತಹ ಸಂಕಷ್ಟದ ನಡುವೆಯೂ ಪೋಷಕರನ್ನು ಮನವೊಲಿಸಿ ಆಕರ್ಷಿಸಿ ವಿದ್ಯಾರ್ಥಿಗಳನ್ನ ಕರೆ ತಂದು ೬೩೦ ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನ ದಾಖಲಾತಿ ಪಡೆಯುವಲ್ಲಿ ಯಶಸ್ವಿಯಾಗಿ ಇತರ ಶಾಲೆಗಳಿಗೆ ಮಾದರಿಯಾಗಿ ರುವ ಮೇಗಳಪೇಟೆ ಶಾಲೆಯ ಎಲ್ಲಾ ಶಿಕ್ಷಕರಿಗೂ ಹಾಗೂ ಸಿಬ್ಬಂದಿ ವರ್ಗದವರಿಗೂ ಅಭಿನಂದಿಸುತ್ತೆನೆ ಎಂದು ಹೇಳಿದರು.
ಸರ್ಕಾರ ಕಲಿಕೆಗೆ ಉತ್ತೇಜನ ನೀಡುವ ಉದ್ದೇಶದಿಂದ ಹೊಸ ಶಿಕ್ಷಣ ನೀತಿ ಜಾರಿಗೆ ತರಲು ಮುಂದಾಗಿದ್ದು ಇದರಿಂದ ಕಲಿಕೆಯ ರೂಪರೇಶು ಬದಲಾವಣೆ ಆಗುತ್ತದೆ ಅದರಿಂದ ಸರ್ಕಾರಿ ಶಾಲೆಗಳನ್ನು ಯಾರು ನಿರ್ಲಕ್ಷೆ ಮಾಡಬಾರದು ಎಂದು ಕರೆ ನೀಡಿದರು. ತಹಶೀಲ್ದಾರ್ ಎಲ್.ಎಂನAದೀಶ್ ಮಾತನಾಡಿ ಖಾಸಗಿ ಶಾಲೆಗಳ ವ್ಯಾಮೋಹಕ್ಕೆ ಪೋಷಕರು ಒಳಗಾಗದೆ ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸುವ ಮೂಲಕ ಸರ್ಕಾರಿ ಶಾಲೆಗಳನ್ನು ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲೆ ಇದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎಂ.ವೀರಭದ್ರಯ್ಯ ಮಕ್ಕಳಿಗೆ ಶಿಕ್ಷಕರು ಪ್ರೋತ್ಸಾಹ, ಸಹಕಾರ ಶಿಸ್ತು ನೀಡುವ ಮೂಲಕ ನಾವು ಇಟ್ಟುಕೊಂಡ ಗುರಿ, ಸಾಧನೆಯನ್ನು ತಲುಪಬಹುದು ಎಂದು ಹೇಳಿದರು.
ದಾಖಲಾತಿ ಆಂದೋಲನ ಹೆಚ್ಚಳಕ್ಕೆ ಮಕ್ಕಳನ್ನು ಕರೆತರುವಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ ಮೇಗಳಪೇಟೆ ಶಾಲೆಯ ಮುಖ್ಯ ಶಿಕ್ಷಕ ಹಾಗೂ ಸಹ ಶಿಕ್ಷಕರಿಗೆ ಶಿಕ್ಷಣ ಇಲಾಖೆಯಿಂದ ಅಭಿನಂದನಾ ಪತ್ರ ವಿತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ ಅಧ್ಯಕ್ಷೆ ಎಂ.ರೇಖಾ ವಹಿಸಿಕೊಂಡಿದ್ದರು. ಪಿ.ಅಂಜಿನಪ್ಪ ನಿರೂಪಿಸಿದರು. ಪುರಸಭೆ ಅಧ್ಯಕ್ಷ ಮಂಜುನಾಥ ಇಜಂತಕರ್, ಉಪಾಧ್ಯಕ್ಷೆ ನಿಟೂರು ಭೀಮವ್ವ, ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ, ಸದಸ್ಯೆ ಶಹರಬಿ, ನೌಕರರ ಸಂಘದ ತಾಲೂಕು ಅಧ್ಯಕ್ಷ ಕೆ.ಸಿದ್ದಲಿಂಗನ ಗೌಡ, ಇಸಿಒ ಗೀರಜ್ಜಿ ಮಂಜುನಾಥ್, ಕೆ.ಅಂಜಿನಪ್ಪ, ಎಸ್.ಸಿದ್ದಪ್ಪ, ಬಿ.ಕೊಟ್ರೇಶ್, ಎಸ್.ರಾಮಪ್ಪ, ಮುಖ್ಯ ಶಿಕ್ಷಕ ಸಲೀಂ, ನಿವೃತ್ತ ಮುಖ್ಯ ಶಿಕ್ಷಕಿ ಸಿದ್ದಮ್ಮ, ತಾಲೂಕು ಮಟ್ಟದ ಶಿಕ್ಷಕರು ಸೇರಿದಂತೆ ಪೋಷಕರು ಮತ್ತು ಮಕ್ಕಳು ಉಪಸ್ಥಿತರಿದ್ದರು.